ಮೈಸೂರು

ಇದು ಬೊಂಬೆಯಾಟವಯ್ಯ...

Published On :

ಕ.ಪ್ರ.ವಾರ್ತೆ  ಮೈಸೂರು  ಸೆ. 17
ದಸರಾದ ಪ್ರಮುಖ ಆಕರ್ಷಣೆಯೆಂದರೆ ಅದುವೇ ಜಂಬೂ ಸವಾರಿ ಆಗಿರುವಂತೆ, ಅದರ ಮತ್ತೊಂದು ಮಹತ್ವದ ಸಾಂಪ್ರದಾಯಿಕ ಆಚರಣೆ ನವರಾತ್ರಿಯ ಗೊಂಬೆ ಉತ್ಸವ.
ಶಿವ-ಪಾರ್ವತಿ, ರಾಮ-ಸೀತೆ, ಲಕ್ಷ್ಮೀ-ಸರಸ್ವತಿ, ಗಣಪತಿ-ಸುಬ್ರಹ್ಮಣ್ಯ, ಕೃಷ್ಣ-ರಾಧೆ, ಮಹಿಷಾಸುರ-ಮರ್ದಿನಿ, ರಾಜ-ರಾಣಿ, ವಧು-ವರರು, ಆನೆ-ಕುದುರೆ, ನವಿಲು-ಹಂಸ, ಮರ-ಗಿಡ, ದೇವರ ಉತ್ಸವ, ಮದುವೆ ಮಹೋತ್ಸವ, ಜಂಬೂ ಸವಾರಿ ಈ ಮುಂತಾದ ಗೊಂಬೆಗಳನ್ನು ಕೂಡಿಸಿ, ಅವುಗಳನ್ನು ಅಲಂಕಾರಗೊಳಿಸಿ ಶರನ್ನವರಾತ್ರಿಯಲ್ಲಿ ಪೂಜಿಸುವ ಸಂಪ್ರದಾಯವಿದೆ. ಪಾರ್ವತಿಯು ತನ್ನ ಮೈಮೇಲಿನ ಅರಿಶಿನ ಕುಂಕುಮದಿಂದ ಒಂದು ಮುದ್ದು ಬೊಂಬೆ ಮಾಡಿ, ಅದಕ್ಕೆ ಜೀವ ತುಂಬಿ ಮುದ್ದಿಸಿದಳು, ಅಲ್ಲದೆ ತನ್ನ ಕಾವಲಿಗೆ ನಿಲ್ಲಿಸಿದಳು. ಈ ಬೊಂಬೆಯೇ ವಿನಾಯಕನಾದ. ಜಗತ್ತಿನ ಮೊದಲ ಬೊಂಬೆಯೂ ಆಗಿದ್ದು, ಇಂದಿಗೂ ಬೊಂಬೆ ರೂಪದಲ್ಲಿಯೇ ಪೂಜಿಸಲ್ಪಡುತ್ತಿರುವುದು ಬೊಂಬೆ ಮಹಿಮೆಗೆ ನಿರ್ದೇಶನ.
ಬೊಂಬೆಗಳ ಅನಾವರಣ: ಇಂತಹ ಬೊಂಬೆ ಮಹತ್ವ ಹಾಗೂ ಬೊಂಬೆ ಹಬ್ಬದ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕಳೆದ 9 ವರ್ಷಗಳಿಂದ ರಾಮಸನ್ಸ್ ಕಲಾ ಪ್ರತಿಷ್ಠಾನವು ಬೊಂಬೆ ಮನೆಯ ಮೂಲಕ ವಿಶೇಷ ಪ್ರದರ್ಶನ ಏರ್ಪಡಿಸುತ್ತಾ ಬಂದಿದ್ದು, ಈ ಬಾರಿಯ ಮೇಳದಲ್ಲಿ ಅನೇಕ ಪೌರಾಣಿಕ ಕಥೆಗಳನ್ನು ಸಾರುವ ಬೊಂಬೆಗಳ ಜತೆಗೆ ನವನಾವಿನ್ಯತೆಯ ಬೊಂಬೆಗಳು ಅನಾವರಣಗೊಂಡಿವೆ. ಬಂಗಾರದ ರತ್ನ ಖಚಿತ ಸಿಂಹಾಸನದ ಮಾದರಿಯ ಕಲಾಕೃತಿಯಲ್ಲಿ ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಗಮನ ಸೆಳೆಯಲಿದೆ. ಅಲ್ಲದೆ ಕೊಂಡಪಲ್ಲಿಯ ತುಳಸೀ ಕಟ್ಟೆ ಪೂಜೆ ಹಾಗೂ ತರಕಾರಿ ಮಾರಾಟಗಾರ್ತಿ, ಕೋಲ್ಕತ್ತದ ಬಾಲ ಗಣೇಶ, ಕಡಲೂರು ಕಲಾವಿದರ ಊಟದ ಪಂಕ್ತಿ ಬೊಂಬೆಗಳು, ಮೈಸೂರಿನ ದೊಡ್ಡ ಗಡಿಯಾರ, ಅರಮನೆ, ಪ್ರಾಚ್ಯ ಸಂಶೋಧನ ಸಂಸ್ಥೆ ಮುಂತಾದ ಕಟ್ಟಡಗಳು ಹಾಗೂ ದಸರಾ ಉತ್ಸವದ ಮೆರವಣಿಗೆ ಮಾದರಿಗಳು ಇಲ್ಲಿ ಕಾಣಬಹುದು.
ಮೆರವಣಿಗೆ ವೈಭವ!: ಕಿನ್ನಾಳದ ಧರ್ಮಣ್ಣ ಚಿತ್ರಗಾರರ ಕಾಷ್ಟದ ರತಿ ಮನ್ಮಥ, ಏಕಪ್ಪ ಚಿತ್ರಗಾರರ ಚೈತ್ರಗೌರಿ ಹಾಗೂ ತೊಟ್ಟಿಲು ಗೌರಿ, ಕಿಶೋರ್ ಚಿತ್ರಗಾರರ ಕಿನ್ನಾಳ ಪೀಠ, ಹುಬ್ಬಳ್ಳಿಯ ಕೆ.ವಿ. ಶಂಕರ್ ಅವರ ರಂಗಪಂಚಮಿಯ ತೈಲಚಿತ್ರಗಳು, ತಿರುಮಕೂಡಲು ನರಸೀಪುರದ ಕೆ.ಎಸ್. ಶ್ರೀಹರಿ ಅವರ ನವದುರ್ಗೆ ಹಾಗೂ ರತಿ ಮನ್ಮಥ, ಮೈಸೂರು ಜೆ.ಎಸ್. ಶ್ರೀಧರ್ರಾವ್ ಅವರ ಮೈಸೂರು ಶೈಲಿ ಕಾಮಕಾಮೇಶ್ವರಿ ಪಟ, ಪುದಚ್ಚೇರಿಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಎ. ಶೇಖರರ ಮೈಸೂರು ಸಿಂಹಾಸನದ ಕಾಗದರಚ್ಚಿನ ಪ್ರತಿಕೃತಿ ಹಾಗೂ ಕಡಲೂರಿನ ಕಾರ್ತಿಕೇಯನ್ ಅವರ ನವದುರ್ಗೆಯರ ಕಾಗದರಚ್ಚಿನ ಗೊಂಬೆಗಳು ಕಣ್ಮನ ಸೆಳೆಯಲಿದೆ.
ನಾಳೆ ಉದ್ಘಾಟನೆ: ಬೊಂಬೆ ಮನೆ ಪ್ರದರ್ಶನವನ್ನು ಸೆ.19ರಂದು ಸಂಜೆ 6.30ಕ್ಕೆ ಇಲ್ಲಿನ ನಜರ್ಬಾದಿನ ಮುಖ್ಯರಸ್ತೆಯಲ್ಲಿರು ಆಮ್ರಪಾಲಿ ಕಟ್ಟಡದ ಪ್ರತಿಮಾ ಗ್ಯಾಲರಿಯಲ್ಲಿ ಹೆಸರಾಂತ ಸಾಹಿತಿ ಪ್ರೊ. ಜಿ. ವೆಂಕಟಸುಬ್ಬಯ್ಯ ಉದ್ಘಾಟಿಸುವರು. ಕಿರುತೆರೆಯ ಪ್ರಸಿದ್ಧ ನಿರ್ದೇಶಕ ಟಿ.ಎನ್. ಸೀತಾರಾಮ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸೆ.20ರಿಂದ ಅ.20ರವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಪ್ರದರ್ಶನ ವೀಕ್ಷಿಸಬಹುದು.

ಮಾ. ವೆಂಕಟೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.