ಸ್ವಾಭಿಮಾನ ಬದುಕಿಗೆ ಸಾಕ್ಷರತೆ ಉದ್ದೇಶ
ಕ.ಪ್ರ.ವಾರ್ತೆ ಹುಣಸೂರು ಸೆ. 17
ಸಮಾಜದಲ್ಲಿ ಮನುಷ್ಯ ಸ್ವಾವಲಂಬಿಯಾಗಿ ಬದುಕುವುದನ್ನು ಕಲಿಸುವುದೇ ಸಾಕ್ಷರತೆ ಪ್ರಮುಖ ಉದ್ದೇಶ ಎಂದು ಜಿಲ್ಲಾ ಲೋಕ ಶಿಕ್ಷಣ ಸಮಿತಿಯ ಕಾರ್ಯಕ್ರಮ ಸಂಯೋಜಕ ತೇ.ಸಿ. ವಿಶ್ವೇಶ್ವರಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಲೋಕ ಶಿಕ್ಷಣ ಸಮಿತಿ, ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 49ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿಯನ್ನು ಹೊಂದಿಲ್ಲದ ಸಾಕ್ಷರತೆ ವ್ಯರ್ಥ. ಸಾಕ್ಷರತೆ ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ತಿಳಿಸಿದಲ್ಲಿ ಮಾತ್ರ ಕುಟುಂಬ ಹಾಗೂ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಡೀಡ್ ಸಂಸ್ಥೆಯ ನಿರ್ದೇಶಕ ಎಸ್. ಶ್ರೀಕಾಂತ್ ಮಾತನಾಡಿ, ಸಾಕ್ಷರತೆಯಿಂದ ಮಾತ್ರ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಾನಮಾನ ಪಡೆಯಲು ಸಾಧ್ಯ. ಕಲಿತವರು ಕಲಿಯದವರಿಗೆ ವಿದ್ಯೆ ಕಲಿಸುವಂತೆ ಸಲಹೆ ನೀಡಿದರು.
ರಾಘವೇಂದ್ರಗೆ ಪ್ರಶಸ್ತಿ ಪ್ರದಾನ: ತಾಲೂಕಿನ ಕರ್ಣಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಪ್ರೇರಕರಾಗಿ ಕಾರ್ಯನಿರ್ವಹಿಸುತ್ತಿರುವ ರಾಘವೇಂದ್ರ ರಾಜ್ಯ ಮಟ್ಟದ ಅತ್ಯುತ್ತಮ ಪ್ರೇರಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜನಪ್ರತಿನಿಧಿಗಳ ಗೈರು: ಕಾರ್ಯಕ್ರಮಕ್ಕೆ ಆಯೋಜಕರು ಆಹ್ವಾನ ಪತ್ರಿಕೆಯಲ್ಲಿ ಸಂಸದ, ಶಾಸಕ, ಜಿಪಂ, ತಾಪಂ ಸದಸ್ಯರು, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸಿದ್ದರು. ಆದರೆ ತಾಪಂ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಹೊರತುಪಡಿಸಿ ಯಾವೊಬ್ಬ ಜನಪ್ರತಿನಿಧಿಯೂ ಹಾಜರಾಗದಿರುವುದು ಸಾಕ್ಷರತೆಯ ಕುರಿತಾದ ಜನಪ್ರತಿನಿಧಿಗಳ ಕಾಳಜಿಯನ್ನು ಎತ್ತಿ ತೋರಿಸಿದೆ.
ತಾಪಂ ಅಧ್ಯಕ್ಷೆ ದೇವಕಿ ತಿಮ್ಮನಾಯ್ಕ ಸಾಕ್ಷರತಾ ಪ್ರಮಾಣ ವಚನ ಬೋಧಿಸಿದರು. ತಾಪಂ ಉಪಾಧ್ಯಕ್ಷ ಮಹದೇವ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ. ಕೆ. ಶಂಕರೇಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜೇ ಗೌಡ, ಜ್ಞಾನ ಚಿಗುರು ಸಂಪನ್ಮೂಲ ಕೇಂದ್ರದ ವ್ಯವಸ್ಥಾಪಕ ಎಚ್.ಎಸ್. ಶಂಕರ್, ಮೈಸೂರು ಜನ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ರಮೇಶ್, ಸಂಯೋಜಕ ಕೆ.ಬಿ. ಶಶಿಕುಮಾರ್, ಜಲೇಂದ್ರ, ಶಿಕ್ಷಕರಾದ ರಂಗಸ್ವಾಮಿ, ಮಂಜುನಾಥ್, ಬಿಇಒ ಕಚೇರಿ ವ್ಯವಸ್ಥಾಪಕ ಸಿದ್ಧಲಿಂಗಪ್ಪ, ತಾ.ಶಿ. ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ನವೀರಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

