ಮೈಸೂರು

ದಸರಾ ಕಾಮಗಾರಿ ನಿಲ್ಲಿಸಲು ಮೇಯರ್ ಸೂಚನೆ

Published On :

ಕ.ಪ್ರ.ವಾರ್ತೆ ಮೈಸೂರು ಸೆ. 18
ನಾಡಹಬ್ಬ ದಸರಾ ಆಚರಿಸುವ ಸಂಬಂಧ ಸರ್ಕಾರದಿಂದ ನಗರಪಾಲಿಕೆಗೆ ಯಾವುದೇ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಅನಾನುಕೂಲದ ವಾತಾವರಣದ ನೆಪ ಹೇಳಿ ದಸರಾ ಕಾಮಗಾರಿ ನಿಲ್ಲಿಸುವಂತೆ ಮೇಯರ್ ಎನ್.ಎಂ. ರಾಜೇಶ್ವರಿ ಸೂಚಿಸಿದ್ದಾರೆ.
ಸುಮಾರು 15 ದಿನಗಳು ಕಳೆದರೂ ಸಹ ಯಾವುದೇ ಅಧಿಕಾರಿಗಳು ದಸರಾ ಕಾಮಗಾರಿಗಳು ಎಷ್ಟು ಮಂಜೂರಾಗಿವೆ. ಎಲ್ಲೆಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ ಎಂಬುದರ ಬಗ್ಗೆ ಈವರೆಗೂ ಮಾಹಿತಿ ನೀಡಿಲ್ಲ. ಕಳೆದ ಎಂಟು ತಿಂಗಳಿಂದ ಪಾಲಿಕೆಗೆ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಯಾಗಿದ್ದಾರೆ. ಈಗ ನೂತನವಾಗಿ ಪಾಲಿಕೆ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು 13 ದಿನ ಕಳೆದಿದೆ. ಆದರೂ ಸರಿಯಾದ ಮಾಹಿತಿ ನೀಡಿಲ್ಲ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ದಸರಾ ಸಂಬಂಧ ಈಗಾಗಲೇ ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಿಂದ ಕೂಡಿವೆ ಎಂದು ಕೆಲ ಹಿರಿಯ ಪಾಲಿಕೆ ಸದಸ್ಯರು ಆರೋಪಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳೇ ಮಳೆಗಾಲದಲ್ಲಿ ಕಾಮಗಾರಿ ನಡೆಸಬಾರದೆಂದು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಮಳೆಗಾಲ ಮುಗಿದ ಬಳಿಕ ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದೇನೆ. ಜತೆಗೆ ನಗರಪಾಲಿಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದರು.
ಬಿಜೆಪಿ ಇದ್ದಾಗ ಬಿಡುಗಡೆ: ಮಾಜಿ ಮೇಯರ್ ಸಂದೇಶ್‌ಸ್ವಾಮಿ ಮಾತನಾಡಿ, ಬಿಜೆಪಿ ಸರ್ಕಾರವಿದ್ದಾಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರು ದಸರಾ ಆಚರಣೆಗೆ ಪಾಲಿಕೆಗೆ 2.17 ಕೋಟಿ ಬಿಡುಗಡೆಯಾಗಿದ್ದನ್ನು ಬಿಟ್ಟರೆ ಮಿಕ್ಕ ಯಾವ ವರ್ಷದಲ್ಲಿಯೂ ಹಣ ಬಿಡುಗಡೆಯಾಗಿಲ್ಲ. ಪಾಲಿಕೆಯಲ್ಲಿ ಸಂಪನ್ಮೂಲ ಕ್ರೋಢೀಕರಣವಾಗುತ್ತಿಲ್ಲ. 80 ಕೋಟಿಯಷ್ಟು ಸಂಗ್ರಹವಾಗಬೇಕಿದ್ದ ಕಂದಾಯ ಅರ್ಧದಷ್ಟು ಮಾತ್ರ ಸಂಗ್ರಹವಾಗಿದೆ. ಹೀಗಿರುವಾಗ ಕಾಮಗಾರಿಗಳಿಗೆ ಹಣ ಒದಗಿಸಲು ಪಾಲಿಕೆಯಿಂದ ಸಾಧ್ಯವಿಲ್ಲ. ಈಗ ನಡೆಯುತ್ತಿರುವ ಕಳಪೆ ಕಾಮಗಾರಿಯಲ್ಲಿ ಜೆಡಿಎಸ್- ಬಿಜೆಪಿ ನೇತೃತ್ವದ ಆಡಳಿತ ಕಾರಣವಲ್ಲ ಎಂದು ಸ್ಪಷ್ಟಪಡಿಸಿದರು.
ಉಪಮೇಯರ್ ಶೈಲೇಂದ್ರ, ಪಾಲಿಕೆ ಸದಸ್ಯರಾದ ಕೆ.ಟಿ. ಚೆಲುವೇಗೌಡ, ಆರ್. ಲಿಂಗಪ್ಪ, ಮಹದೇವಪ್ಪ, ಕೆ.ವಿ. ಮಲ್ಲೇಶ್, ಮ.ವಿ. ರಾಮಪ್ರಸಾದ ಇದ್ದರು.

ದಸರಾ ಕಾಮಗಾರಿ ವಿಳಂಬಕ್ಕೆ ಜೆಡಿಎಸ್ ಆಕ್ಷೇಪ
ಮೈಸೂರು: ದಸರಾ ಮಹೋತ್ಸವದ ಪ್ರಯುಕ್ತ ನಗರದ ವಿವಿಧೆಡೆ ಕೈಗೊಂಡಿರುವ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್‌ಬಿಎಂ ಮಂಜು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದಸರಾ ಮಹೋತ್ಸವ ಸಮೀಪವಾಗುತ್ತಿದ್ದರೂ ಕಾಮಗಾರಿಗಳು ವಿಳಂಬವಾಗುತ್ತಿವೆ. ರಸ್ತೆಗಳು ಹಳ್ಳ ಕೊಳ್ಳಗಳ ಕಾಮಗಾರಿಗಳನ್ನು ಇನ್ನೂ ಕೈಗೊಂಡಿಲ್ಲ. ಇದರಿಂದ ವಾಹನ ಸಂಚರಿಸಲು ಪ್ರಯಾಣಿಕರಿಗೆ ಕಷ್ಟವಾಗುತ್ತಿದೆ. ಪ್ರವಾಸಿಗರೂ ತೀವ್ರ ಪ್ರಯಾಸ ಪಡುವಂತಾಗಿದೆ. ಆದ್ದರಿಂದ ಈ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ದಸರಾ ಹಬ್ಬದ ಮುಖ್ಯ ಆಕರ್ಷಣೆಗಳಲ್ಲಿ ಜಂಬೂ ಸವಾರಿ, ಪಂಜಿನ ಕವಾಯಿತು ಒಂದು. ಇವುಗಳಿಗೆ ಪ್ರವೇಶ ನೀಡುವ ಟಿಕೆಟ್ ಬೆಲೆಯನ್ನು ಕಳೆದ ಒಂದು ವರ್ಷದಿಂದ ಹೆಚ್ಚಿಸುತ್ತಾ ಬರಲಾಗಿದೆ. ಇದರಿಂದ ಸಾಮಾನ್ಯರು ಜಂಬೂ ಸವಾರಿ ವೀಕ್ಷಿಸಲು ಆಗದಿರುವಂತ ವಾತಾವರಣ ನಿರ್ಮಾಣವಾಗುತ್ತದೆ. ಕೂಡಲೇ ದರವನ್ನು ಪರಿಷ್ಕರಿಸಿ ಕೈಗೆಟಕುವ ದರದಲ್ಲಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಇತಿಹಾಸ ಬಿಂಬಿಸಲು ಮನವಿ
ದಸರಾ ಮಹೋತ್ಸವ ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅವರಿಗೆ ಈ ನಾಡಿನ ಇತಿಹಾಸ ತಿಳಿಸಿಕೊಡುವ ಉದ್ದೇಶದಿಂದ ಪೂರಕ ಕಾರ್ಯಕ್ರಮ ಕಾರ್ಯಕ್ರಮ ಆಯೋಜಿಸುವಂತೆ ರಂಗತಜ್ಞ ಗೆಜ್ಜೆ ಹೆಜ್ಜೆ ಉದಯ್ ಮನವಿ ಮಾಡಿದ್ದಾರೆ.
ನಮ್ಮ ದೇಶವನ್ನು ಆಳಿದ ರಾಜ ಮಹಾರಾಜರ, ನಾಡನ್ನು ಕಟ್ಟಿದ ಕೆಚ್ಚೆದೆಯ ವೀರರು, ಸಾಧು ಸಂತರ ಬಗೆಗಿನ ಕಾರ್ಯಕ್ರಮ ನಡೆಸಿದರೆ ಒಳಿತು. ಈ ನಿಟ್ಟಿನಲ್ಲಿ ಈ ಭಾರಿಯಾದರೂ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಸಲು ತೀರ್ಮಾನ ತೆಗೆದುಕೊಳ್ಳಬೇಕು. ಇಂತಹ ಒಳ್ಳೆಯ ಕಾರ್ಯಕ್ರಮಕ್ಕೆ ಕಡಿವಾಣ ಹಾಕಿರುವುದು ಸಮಂಜಸವಲ್ಲ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.