ಮೈಸೂರು

ಸಮಾಜಮುಖಿಯಾಗಿ ಶ್ರೀಗಳಿಗೆ ಗೌರವ ಸಲ್ಲಿಸಿ

Published On :

ಕ.ಪ್ರ.ವಾರ್ತೆ ಮೈಸೂರು ಸೆ. 18
ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಅರಿತು ಸಮಾಜಮುಖಿಯಾದರೆ ಡಾ.ರಾಜೇಂದ್ರ ಶ್ರೀಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ದೇವೀರಮ್ಮನಹಳ್ಳಿ ಶರಣಸಂಗಮ ಮಠದ ಶ್ರೀ ನಾಗರಾಜೇಂದ್ರ ಸ್ವಾಮೀಜಿ ಹೇಳಿದರು.
ಸರಸ್ವತಿಪುರಂ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ವಸತಿನಿಲಯ, ಡಿ.ಇಡಿ ಕಾಲೇಜು, ಪ್ರೌಢಶಾಲೆ, ಪ್ರಾಥಮಿಕ ಶಾಲೆ ಹಾಗೂ ಸಹನಾ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರಸ್ವಾಮಿಗಳ 98ನೇ ಜಯಂತಿ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶ್ರೀಗಳು ಜಗತ್ ಚಿಂತಕರು, ಪರಹಿತ ಬಯಸುತ್ತ, ಜಗವೆಲ್ಲ ನಗುತಿರಲಿ ಜಗದಳುವು ನಮಗಿರಲಿ ಎಂದು ಭಾವಿಸಿದ್ದರು. ಶ್ರೀಗಳು ಕಟ್ಟಿ ಬೆಳೆಸಿದ ಈ ಜ್ಞಾನದ ದೇಗುಲದಲ್ಲಿ ತಾವೆಲ್ಲರೂ ಬೆಳೆದು ತಮ್ಮ ಕರ್ತವ್ಯ ಅರಿತು ಸಮಾಜಮುಖಿಯಾದರೆ ಅದು ಶ್ರೀಗಳಿಗೆ ನೀವು ಕೊಡುವ ದೊಡ್ಡ ಕಾಣಿಕೆ ಎಂದರು. ಜೆಎಸ್‌ಎಸ್ ಸಮುಚ್ಚಯ ಶಿಕ್ಷಣ ಸಂಸ್ಥೆಗಳಲ್ಲಿ ಓದಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಚ್.ಎಸ್. ಉಮಾದೇವಿ ಅವರು ಪೂಜ್ಯರಿಗೆ ನೊಂದವರಿಗೆ ನೋವು, ಹಸಿವುಗಳು ಮುಖ್ಯವಾಗಿದ್ದೇವೆ ಹೊರತು ಅವರ ಜಾತಿ, ಕುಲ ಗಮನಿಸುತ್ತಿರಲಿಲ್ಲ ಎಂದರು. ವಸತಿ ನಿಲಯದ ಮುಖ್ಯ ನಿಲಯಪಾಲಕಿ ಮಮತಾ ಸುರೇಶ್, ಡಿಇಡಿ ಕಾಲೇಜಿನ ನಿವೃತ್ತ ಅಧೀಕ್ಷಕ ಸೋಮಸುಂದರ್ ಇದ್ದರು.

ದಸರೆಗೆ ಇಂದು, ನಾಳೆ ಗಣ್ಯರಿಗೆ ಆಹ್ವಾನ
ಕ.ಪ್ರ.ವಾರ್ತೆ ಮೈಸೂರು ಸೆ. 18
ಅ.5 ರಿಂದ ಆರಂಭವಾಗುವ ನಾಡಹಬ್ಬ ದಸರಾ ಮಹೋತ್ಸವಕ್ಕೆ ರಾಜ್ಯಪಾಲ, ಮುಖ್ಯಮಂತ್ರಿ, ದಸರಾ ಉದ್ಘಾಟಕರ ಆದಿಯಾಗಿ ಗಣ್ಯರನ್ನು ಅಧಿಕೃತವಾಗಿ ಆಹ್ವಾನಿಸಲು ಸೆ.19 ಮತ್ತು 20 ರಂದು ಬೆಂಗಳೂರಿಗೆ ಮೈಸೂರು ಜಿಲ್ಲಾಡಳಿತ ನಿಯೋಗ ತೆರಳಲಿದೆ.
ದಸರಾ ನಿಮಿತ್ತ ರಚಿಸಿರುವ ಸ್ವಾಗತ ಮತ್ತು ಆಮಂತ್ರಣ ಉಪಸಮಿತಿ ಪದಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಮೇಯರ್ ಎನ್.ಎಂ. ರಾಜೇಶ್ವರಿ, ಜಿಲ್ಲಾಧಿಕಾರಿ ಸಿ.ಶಿಖಾ ಅವರ ನಿಯೋಗ ತೆರಳಿ ಗಣ್ಯರನ್ನು ಆಹ್ವಾನಿಸಲಿದೆ ಎಂದು ಬುಧವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಿಳಿಸಲಾಯಿತು.
ಉಪಸಮಿತಿ ಕಾರ್ಯಾಧ್ಯಕ್ಷ, ನಗರಪಾಲಿಕೆ ಹೆಚ್ಚುವರಿ ಆಯುಕ್ತ ರಾಜು ಮಾತನಾಡಿ, ಸ್ವಾಗತ ಪತ್ರ ಸಿದ್ಧಪಡಿಸಲು ಟೆಂಡರ್ ಕರೆಯಲಾಗಿದ್ದು ಅರ್ಜಿ ಹಾಕಿದ್ದ ಎರಡು ಸಂಸ್ಥೆಗಳಲ್ಲಿ ಒಂದು ಅರ್ಹತೆ ಪಡೆದುಕೊಂಡಿದೆ. ಸರ್ಕಾರದಿಂದ 4 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದ್ದು, ಇನ್ನು ಬಿಡುಗಡೆಯಾಗಿಲ್ಲ. ಸ್ವಾಗತ ಪತ್ರದ ಪ್ರಾರಂಭದಲ್ಲಿ ಮುಖ್ಯಮಂತ್ರಿಗಳ ಸಂದೇಶವಿರುತ್ತದೆ. ಹಾಗೆ ಒಂಬತ್ತು ದಿನಗಳ ಕಾಲ ನಡೆಯುವ ದಸರಾದ ಎಲ್ಲಾ ಕಾರ್ಯಕ್ರಮಗಳನ್ನು ಮುದ್ರಿಸಲಾಗುವುದು. ಅ.5 ರಂದು ಚಾಮುಂಡಿಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನಾ ಸಮಾರಂಭದಿಂದ ಹಿಡಿದು ಚಲನಚಿತ್ರೋತ್ಸವ, ದಸರಾ ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ, ವಿದ್ವತ್ ಗೋಷ್ಠಿ, ದಸರಾ ಪಾರಂಪರಿಕ ನಡಿಗೆ, ದಸರಾ ಮಾರುಕಟ್ಟೆ ಪ್ರದರ್ಶನ, ಪೊಲೀಸ್ ಸಮೂಹ ವೃಂದ, ದಸರಾ ಕವಿಗೋಷ್ಠಿ, ನಂದಿಧ್ವಜ ಪೂಜೆ, ಜಂಬೂ ಸವಾರಿಗೆ ಪುಷ್ಪಾರ್ಚನೆ, ಪಂಜಿನ ಕವಾಯಿತು ಹೀಗೆ ಎಲ್ಲಾ ಕಾರ್ಯಕ್ರಮಗಳ ವಿವರ ಇರುತ್ತದೆ ಎಂದರು.
ಉಪಸಮಿತಿ ವಿಶೇಷಾಧಿಕಾರಿ, ಪಾಲಿಕೆ ಆಯುಕ್ತ ಡಾ.ಪಿ.ಜಿ. ರಮೇಶ್, ಅಧ್ಯಕ್ಷೆ, ಮೇಯರ್ ಎನ್.ಎಂ. ರಾಜೇಶ್ವರಿ, ಉಪಾಧ್ಯಕ್ಷ ಆರ್. ಅನಂತು, ಸದಸ್ಯರಾದ ಭವಾನಿ ಶಂಕರ್, ಕೃಷ್ಣೇಗೌಡ, ನಾಗೇಶ್, ಸಿದ್ದರಾಮೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.