ಕುಸ್ತಿ ಪಂದ್ಯ ಭಿತ್ತಿಪತ್ರ ಬಿಡುಗಡೆ
ಕ.ಪ್ರ.ವಾರ್ತೆ ಮೈಸೂರು ಸೆ. 20
ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಕುಸ್ತಿ ಪಂದ್ಯಾವಳಿಯು ಅ.5 ರಿಂದ 11 ರವರೆಗೆ ದಸರಾ ವಸ್ತುಪ್ರದರ್ಶನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಶುಕ್ರವಾರ ದಸರಾ ಕುಸ್ತಿ ಪಂದ್ಯಾವಳಿಯ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.
ಈ ಬಾರಿ 6ನೇ ರಾಜ್ಯಮಟ್ಟದ ಮಹಿಳೆಯರ ಮತ್ತು 32ನೇ ರಾಜ್ಯಮಟ್ಟದ ದಸರಾ ಕಿಶೋರ್, ದಸರಾ ಕುಮಾರ್, ದಸರಾ ಕೇಸರಿ, ದಸರಾ ಕಂಠೀರವ ಹಾಗೂ 8ನೇ ಅಖಿಲ ಭಾರತ ಆಹ್ವಾನಿತ ಮಹಿಳಾ ಮತ್ತು ಪುರುಷರ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಯು ಅ.5ರ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಅ. 4ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ 32ನೇ ರಾಜ್ಯಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿಯ ದೇಹತೂಕ ತೆಗೆಯುವ ಕಾರ್ಯಕ್ರಮ ನಡೆಯಲಿದೆ ಎಂದು ಕುಸ್ತಿ ಉಪಸಮಿತಿಯ ಕಾರ್ಯದರ್ಶಿ ಡಿ.ರವಿಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.6 ಮತ್ತು 7 ರಂದು 32ನೇ ರಾಜ್ಯಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿ, ಅ.7ರ ಬೆಳಗ್ಗೆ 10 ರಿಂದ 6ನೇ ರಾಜ್ಯಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಅ.7ರ ಬೆಳಗ್ಗೆ 10 ರಿಂದ 6ನೇ ರಾಜ್ಯಮಟ್ಟದ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಮಹಿಳಾ ಕುಸ್ತಿಪಟುಗಳ ದೇಹತೂಕ ತೆಗೆಯುವ ಕಾರ್ಯವನ್ನು ನಡೆಸಲಾಗುತ್ತದೆ. ಅ.8 ರಂದು 6ನೇ ರಾಜ್ಯಮಟ್ಟದ ಮಹಿಳಾ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಅ. 11 ರಂದು ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ ಹಾಗೂ ಅಖಿಲ ಭಾರತ ಆಹ್ವಾನಿತ ಮಹಿಳೆಯರ ಮತ್ತು ಪುರುಷರ ಕುಸ್ತಿ ಪಂದ್ಯಾವಳಿ ನಡೆಸಲಾಗುತ್ತದೆ. ಅ.5 ರಿಂದ 11 ರವರೆಗೆ ಒಟ್ಟು 7 ದಿನಗಳ ಕಾಲ ಸಂಜೆ 3.30ಕ್ಕೆ ಸುಮಾರು 20 ಜತೆ ನಾಡಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದರು.
ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕುಳಿತು ಪಂದ್ಯ ವೀಕ್ಷಿಸಲು ಛಾವಣಿ ನಿರ್ಮಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ಲಾನ್ ಮತ್ತು ಅಂದಾಜು ಪಟ್ಟಿಯನ್ನು ಸಹ ನಿರ್ಮಿತಿ ಕೇಂದ್ರ ತಯಾರಿಸುತ್ತಿದೆ. ಇಡೀ ರಾಜ್ಯದಲ್ಲಿಯೇ ಕುಸ್ತಿ ಪಂದ್ಯಾವಳಿಗಾಗಿ ನಿರ್ಮಾಣವಾಗುವ ಏಕೈಕ ಕುಸ್ತಿ ಕ್ರೀಡಾಂಗಣವಾಗಿದೆ. ಸೆ.22ರ ಬೆಳಗ್ಗೆ 10ಕ್ಕೆ ಬಿ.ವಿ. ಕಾರಂತ ರಂಗಮಂದಿರ, ವಸ್ತುಪ್ರದರ್ಶನ ಆವರಣ, ದೊಡ್ಡಕೆರೆ ಮೈದಾನಲ್ಲಿ ನಡೆಯಲಿದೆ.
ಡ್ರಗ್ಸ್ ಬಗ್ಗೆ ಗೊತ್ತಿಲ್ಲ: ಪ್ರತಿ ವರ್ಷ ಕುಸ್ತಿ ಪಂದ್ಯಾವಳಿಗೆ ಡ್ರಗ್ಸ್ ತೆಗೆದುಕೊಂಡು ಬರುತ್ತಿದ್ದಾರೋ ಅಥವಾ ಬರುತ್ತಿಲ್ಲವೋ ಎಂಬುದು ಗೊತ್ತಿಲ್ಲ. ಯಾಕೆಂದರೆ ನಮ್ಮಲ್ಲಿ ಪರೀಕ್ಷಿಸುವ ಸಾಧನಗಳೆ ಇಲ್ಲ. ಈ ಬಾರಿ ಆ ಸಾಧನವನ್ನು ತರಿಸುವ ಬಗ್ಗೆ ಚಿಂತಿಸುತ್ತೇವೆ. ಪ್ರತಿ ವರ್ಷ ನಡೆಸುವ ಕುಸ್ತಿ ಪಂದ್ಯಾವಳಿಯ ಖರ್ಚು ವೆಚ್ಚಗಳ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಈ ಬಗ್ಗೆ ಯಾರಾದರೂ ಬಂದು ಮಾಹಿತಿ ಪಡೆದುಕೊಳ್ಳಬಹುದು ಎಂದು ಶ್ರೀ ಜಯಚಾಮರಾಜೇಂದ್ರ ಗರಡಿ ಕೇಂದ್ರದ ಅಧ್ಯಕ್ಷ ಪೈ. ಮಹದೇವ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
ಪದಾಧಿಕಾರಿಗಳಾದ ದಸರಾ ಕುಸ್ತಿ ಉಪಸಮಿತಿ ಉಪಾಧ್ಯಕ್ಷ ಪೈ. ಕೃಷ್ಣ, ಕಾರ್ಯಾಧ್ಯಕ್ಷ ಆರ್.ಬಿ. ಮೋಹನ ರೆಡ್ಡಿ, ಸದಸ್ಯರಾದ ನೂರ್ ಅಹಮ್ಮದ್, ಸಿದ್ದಲಿಂಗಯ್ಯ, ಜಯರಾಮೇಗೌಡ, ರವಿ ಬನ್ನೂರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

