ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಂಗಾರ ಸರ
ಕ.ಪ್ರ.ವಾರ್ತೆ ಹುಣಸೂರು ಸೆ. 22
ಕಳೆದ 4 ವರ್ಷಗಳಿಂದ ತಮ್ಮ ತಾಯಿಯ ಹೆಸರಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಬಂಗಾರದ ಸರ ಹಾಗೂ ಅತಿ ಹೆಚ್ಚು ಫಲಿತಾಂಶ ಪಡೆದ ಕಾಲೇಜಿನ ಅಭಿವೃದ್ಧಿ ಘೋಷಿಸಿದ ಶಾಸಕ ಎಚ್.ಪಿ. ಮಂಜುನಾಥ್ ನುಡಿದಂತೆ ನಡೆದುಕೊಂಡಿದ್ದಾರೆ.
ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಈ ಬಾರಿ ಮೂರು ಮಂದಿ ವಿದ್ಯಾರ್ಥಿನಿಯರು ಹಾಗೂ ಒಬ್ಬ ವಿದ್ಯಾರ್ಥಿಗೆ ತಲಾ 10 ಗ್ರಾಂ ತೂಕದ ಬಂಗಾರದ ಸರವನ್ನು ವಿತರಿಸಿದರು. ನಂತರ ಮಾತನಾಡಿದ ಅವರು, ಪ್ರತಿ ವರ್ಷ ತಮ್ಮ ತಾಯಿ ರತ್ನಮ್ಮ ಪ್ರೇಮಕುಮಾರ್ ಹೆಸರಿನಲ್ಲಿ ಈ ರೀತಿಯ ಪ್ರೋತ್ಸಾಹ ಕೊಡುತ್ತಿರುವುದಾಗಿ ತಿಳಿಸಿದರು.
ತಾಲೂಕಿಗೆ ಅತಿ ಹೆಚ್ಚು ಶೇಕಡವಾರು ಫಲಿತಾಂಶ ಪಡೆದ ಕಾಲೇಜಿನ ಅಭಿವೃದ್ಧಿಗೆ ಶಾಸಕರ ಅನುದಾನದಿಂದ 1 ಲಕ್ಷ ಹಾಗೂ 50 ಸಾವಿರ ಘೋಷಿಸಿದ್ದರು. ಇದರಿಂದ ಉತ್ತೇಜಿತರಾಗಿ ಕಾಲೇಜುಗಳ ಪ್ರಾಂಶುಪಾಲರು ಉತ್ತಮ ಫಲಿತಾಂಶ ತರಲು ಪ್ರಯತ್ನಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲೂ ಓದುವ ಛಲ ಹೆಚ್ಚಾಗಿದೆ. ತಾವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುವ ಪಣ ತೊಟ್ಟಿದ್ದು, ಮುಂದಿನ ವರ್ಷ ಇನ್ನೂ ಹೆಚ್ಚಿನ ಫಲಿತಾಂಶ ಗಳಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬಹುಮಾನ ಪಡೆದವವರು: ಕಲಾ ವಿಭಾಗದಿಂದ ಹುಣಸೂರು ಬಾಲಕಿಯರ ಕಾಲೇಜಿನ ರಂಜಿತಾ ಹಾಗೂ ಕರಿಮುದ್ದನಹಳ್ಳಿಯ ಎಸ್.ಎನ್. ಗಾಯಿತ್ರಿ, ವಿಜ್ಞಾನ ವಿಭಾಗದಿಂದ ಬಾಲಕರ ಪಿಯು ಕಾಲೇಜಿನ ಪುನೀತ್ ಕುಮಾರ್ ಹಾಗೂ ವಾಣಿಜ್ಯ ವಿಭಾಗದಿಂದ ಬಾಲಕಿಯರ ಪಿಯು ಕಾಲೇಜಿನ ಸೌಮ್ಯ ಅವರಿಗೆ 10 ಗ್ರಾಂ ಚಿನ್ನದ ಸರ ವಿತರಿಸಿದರು.
ಕಾಲೇಜು ಪ್ರಶಸ್ತಿ: ಶೇ.75 ರಷ್ಟು ಫಲಿತಾಂಶ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಗೆರಸನಹಳ್ಳಿ ಕಾಲೇಜಿಗೆ ಒಂದು ಲಕ್ಷ ರು. ಹಾಗೂ ಶೇ.78 ಫಲಿತಾಂಶದಿಂದ ದ್ವಿತೀಯ ಸ್ಥಾನ ಪಡೆದ ಹುಣಸೂರು ಪಟ್ಟಣ ಬಾಲಕಿಯರ ಕಾಲೇಜಿಗೆ 50 ಸಾವಿರ ಚೆಕ್ ವಿತರಿಸಿದರು.
ಈಗ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ನೀಡುತ್ತಿದ್ದು, ಮುಂದಿನ ವರ್ಷದಿಂದ ಎಸ್ಸೆಸ್ಸೆಲ್ಸಿ ಮತ್ತು ಪದವಿ ಸರ್ಕಾರಿ ಕಾಲೇಜುಗಳಿಗೂ ತಮ್ಮ ತಾಯಿಯವರ ಹೆಸರಿನಲ್ಲಿ ರತ್ನಮ್ಮ ಪ್ರಶಸ್ತಿ ಎಂಬ ಶಿರೋನಾಮೆಯಡಿ ಬಹುಮಾನ ವಿತರಿಸಲಾಗುವುದು ಎಂದು ಘೋಷಿಸಿದರು.
ನಿವೃತ್ತ ಪ್ರಾಂಶುಪಾಲ ಮೋದೂರು ಮಹೇಶಾರಾಧ್ಯರನ್ನು ಕಾಲೇಜು ಆಯ್ಕೆ ಸಮಿತಿಗೆ ನೇಮಿಸಲಾಯಿತು. ಡಿಡಿಪಿಯು ಕೆ.ಎಂ. ಪುಟ್ಟು, ಪ್ರಾಂಶುಪಾಲ ಜವರಯ್ಯ, ಜಿಪಂ ಸದಸ್ಯೆ ಡಾ. ಪುಷ್ಪಾವತಿ ಅಮರನಾಥ್, ಟ್ಯಾಲೆಂಟ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ, ಪ್ರಾಧ್ಯಾಪಕ ನವೀನ್ ರೈ, ಪುರಸಭಾ ಸದಸ್ಯರಾದ ಯೋಗಾನಂದ್, ಸೌರಭ ಸಿದ್ದರಾಜು, ಕಾಲೇಜು ಅಭಿವೃದ್ಧಿ ಸಮಿತಿ ಖಜಾಂಚಿ ನಾಗರಾಜ್ ರಾವ್, ನಿವೃತ್ತ ಪ್ರಾಂಶುಪಾಲ ಮೋದೂರು ಮಹೇಶರಾಧ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

