ಮಕ್ಕಳ ದುಡಿಮೆಯಿಂದ ಸಾಮಾಜಿಕ ಅಭದ್ರತೆ
ಕ.ಪ್ರ.ವಾರ್ತೆ ಮೈಸೂರು ಸೆ. 23
ಸಾಮಾಜಿಕ ಅಭದ್ರತೆಗೆ ಮಕ್ಕಳ ದುಡಿಮೆಯೂ ಕಾರಣ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಎನ್.ವಿ. ವಾಸುದೇವ ಶರ್ಮ ಹೇಳಿದರು.
ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಮಾನವ ಹಕ್ಕುಗಳ ಸರ್ಟಿಫಿಕೇಟ್ ಕೋರ್ಸ್ ವತಿಯಿಂದ ಸೋಮವಾರ ಏರ್ಪಡಿಸಿದ್ದ ಬಾಲಕಾರ್ಮಿಕ ಪದ್ಧತಿ- ಒಂದು ಅಪರಾಧ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಇಂದು ಮಕ್ಕಳನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ದುಡಿಸಿಕೊಳ್ಳಲಾಗುತ್ತಿದೆ. ಇಂತಹ ಅನಿಷ್ಟ ಪದ್ಧತಿಯಿಂದ ಮಾನವ ಸಂಪನ್ಮೂಲ ಸೋರಿಕೆ ಆಗುವುದರ ಜತೆಗೆ ವಯಸ್ಕರ ನಿರುದ್ಯೋಗ ಹೆಚ್ಚಲಿದೆ. ಬಡತನದ ಬೇಗ ಆವರಿಸಿ ಸಾಮಾಜಿಕ ಅಭದ್ರತೆ ಉಂಟಾಗಲಿದೆ. ಮಕ್ಕಳನ್ನು ದುಡಿಸಿಕೊಳ್ಳುವುದು ಸಮಾಜದ ಅಭಿವೃದ್ಧಿಗೆ ಹಿನ್ನಡೆ ಎಂದರು.
ಸುಮ್ಮನಿರುವುದು ದೌರ್ಜನ್ಯ: ಕಡಿಮೆ ಕೂಲಿ ಕೊಡಬಹುದು, ಅವರ ಮೇಲೆ ದೌರ್ಜನ್ಯ ನಡೆಸಿದರೂ ಕೇಳುವುದಿಲ್ಲ ಎಂಬ ಭಾವನೆಯಿಂದ ಕೃಷಿ, ಗುಡಿಕೈಗಾರಿಕೆ, ಗಣಿ, ಮನೆ ಕೆಲಸ ಮುಂತಾದೆಡೆ ದುಡಿಸಿಕೊಳ್ಳಲಾಗುತ್ತಿದೆ. ಇಂತಹ ದೌರ್ಜನ್ಯ ನಡೆಯುತ್ತಿದ್ದರೂ ಕೇಳದೇ ಸುಮ್ಮನಿರುವುದು ಸಹ ಮತ್ತೊಂದು ದೌರ್ಜನ್ಯ ಎಸಗಿದಂತೆ.
ಬಾಲಕಾರ್ಮಿಕ ಪದ್ಧತಿ ಅಪರಾಧ ಎಂದು ಅರಿವಿದ್ದರೂ ಅದನ್ನು ಅನುಸರಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಸಮಾಜದಲ್ಲಿ ಪ್ರತಿಯೊಬ್ಬರು ಜವಾಬ್ದಾರಿ ವಹಿಸಿದಾಗ ಮಾತ್ರ ಇದರ ನಿರ್ಮೂಲನೆ ಸಾಧ್ಯ ಎಂದು ತಿಳಿಸಿದರು.
ದೇಶದ 120 ಕೋಟಿ ಜನಸಂಖ್ಯೆಯಲ್ಲಿ ಶೇ.45 ಮಕ್ಕಳಿದ್ದಾರೆ. 1 ವರ್ಷದವರು ಶೇ.3.6, 2 ವರ್ಷದವರು ಶೇ. 9.72, 3ರಿಂದ 5 ವರ್ಷದವರು ಶೇ.19.9 ಹಾಗೂ 6 ರಿಂದ 14 ವರ್ಷದವರು ಶೇ. 50.20 ಇದ್ದಾರೆ. ಮಕ್ಕಳ ಮೇಲಿನ ಶೋಷಣೆ ನಿರಂತರವಾಗಿ ನಡೆದಿದ್ದು, ಬದುಕುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸದ ಹಕ್ಕು ಹಾಗೂ ಭಾಗವಹಿಸುವ ಹಕ್ಕು ನೀಡಿದಾಗ ಮಾತ್ರ ಅವರನ್ನು ಶೋಷಣೆಯಿಂದ ಮುಕ್ತರನ್ನಾಗಿ ಮಾಡಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಆರ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಮಾನವ ಹಕ್ಕುಗಳ ಸರ್ಟಿಫಿಕೇಟ್ ಕೋರ್ಸ್ನ ಮುಖ್ಯಸ್ಥ ಹಾಗೂ ವ್ಯವಹಾರ ಆಡಳಿತ ವಿಭಾಗದ ಸಂಯೋಜಕ ಡಾ.ಎಂ. ಮಹದೇವಯ್ಯ ಇದ್ದರು.
ಮಾನವೀಯ ಮೌಲ್ಯವಿದ್ದರೆ ಸಮಾಜ ಅಭಿವೃದ್ಧಿ
ಕ.ಪ್ರ.ವಾರ್ತೆ ಮೈಸೂರು ಸೆ. 23
ಜೀವನದಲ್ಲಿ ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಎಂಜಿನಿಯರುಗಳ ಸಂಸ್ಥೆಯ ಅಧ್ಯಕ್ಷ ಡಾ.ಟಿ. ಅನಂತಪದ್ಮನಾಭ ಹೇಳಿದರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಮರುಳೇಶ್ವರ ಸೇವಾ ಭವನದಲ್ಲಿ ಹಮ್ಮಿಕೊಂಡಿದ್ದ ಎಂಜಿನಿಯರುಗಳ ದಿನಾಚರಣೆಯಲ್ಲಿ ಉತ್ತಮ ಎಂಜಿನಿಯರ್ ಸೇವಾ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಜ್ಞಾನದ ಜೊತೆಗೆ ವಿಜ್ಞಾನವನ್ನು ಸಹ ಜೊತೆಗೂಡಿ ಬಳಸಿದರೆ, ಅದು ಉಪಯುಕ್ತವಾಗುತ್ತದೆ. ಬೆಂಕಿ ಒಂದು ಜ್ಞಾನವಾದರೆ, ಅದನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸುವುದು ವಿಜ್ಞಾನವಾಗುತ್ತದೆ. ಹಾಗಾಗಿ ಜ್ಞಾನ ಮತ್ತು ವಿಜ್ಞಾನ ಎರಡೂ ಜೊತೆ ಸೇರಿ ಬಳಸಿದರೆ ಅದು ಸಮಾಜಕ್ಕೆ ಉಪಯೋಗವಾಗುತ್ತದೆ ಎಂದು ಸೂಚಿಸಿದರು. ಯಾವ ರೀತಿ ಯುವಶಕ್ತಿಗಾಗಿ ವಿವೇಕಾನಂದರನ್ನು, ಶಾಂತಿಗಾಗಿ ಗಾಂಧಿಯನ್ನು, ಶಿಸ್ತಿಗಾಗಿ ವಿಶ್ವೇಶ್ವರಯ್ಯ ಅವರನ್ನು, ವಿಶ್ವಮಾನವ ಸಂದೇಶಕ್ಕಾಗಿ ಕುವೆಂಪು ರವರನ್ನು ನೆನೆಸುತ್ತಾರೊ, ಅದೇ ರೀತಿ ವಿವಿಧ ಮೌಲ್ಯಗಳಿಗಾಗಿ ನೆನೆಸುವ ಹಾಗೆ ಕಾರ್ಯ ನಿರ್ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಸ್ವಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು. ಇದೇ ವೇಳೆ ನಿವೃತ್ತ ವಿದ್ಯುತ್ ಅಧೀಕ್ಷಕ ಎಂನಿಯರ್ ಬೋರೇಗೌಡ, ನಿವೃತ್ತ ಮುಖ್ಯ ಎಂಜಿನಿಯರ್ ಗವೀಗೌಡ, ಡಾ.ಟಿ. ಅನಂತಪದ್ಮನಾಭ್ ಹಾಗೂ ಎಲ್. ರೂಪ ಅವರಿಗೆ ಉತ್ತಮ ಎಂಜಿನಿಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಪಿ.ವಿಶ್ವನಾಥ್, ಡಾ.ಮಹದೇವಯ್ಯ, ಪ್ರೊ.ಕೆ.ಆರ್. ರಂಗಯ್ಯ, ಬಾಲಕೃಷ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

