ಮೈಸೂರು

ಮಹಾರಾಣಿ ಕಾಲೇಜು ವಿಭಜನೆಗೆ ಸಮ್ಮತಿ

Published On :

ಕ.ಪ್ರ.ವಾರ್ತೆ ಮೈಸೂರು ಸೆ. 24
ಈಗಾಗಲೇ ಮಹಾರಾಣಿ ಪ್ರಥಮ ದರ್ಜೆ ಕಾಲೇಜನ್ನು ವಿಭಜನೆ ಮಾಡಲು ಸರ್ಕಾರ ಸಮ್ಮತಿಸಿದೆ ಎಂದು ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಮಹಾರಾಣಿ ಕಲಾ ಹಾಗೂ ವಾಣಿಜ್ಯ ಕಾಲೇಜು ಹಾಗೂ ಮಹಾರಾಣಿ ವಿಜ್‌ಞಾನ ಕಾಲೇಜು ಅಭಿವೃದ್ಧಿ ಮಂಡಳಿಯು ಮಂಗಳವಾರ ಏರ್ಪಡಿಸಿದ್ದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾರಾಜರ ಕಾಲದಲ್ಲಿ ಸ್ಥಾಪಿಸಿರುವ ಮಹಾರಾಣಿ ಕಾಲೇಜಿನ ಕಲಾ ವಿಭಾಗದಲ್ಲಿ 5 ಸಾವಿರ ಹಾಗೂ ವಾಣಿಜ್ಯ ವಿಭಾಗದಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಇಲ್ಲಿನ ಒತ್ತಡ ತಪ್ಪಿಸುವ ಸಲುವಾಗಿ ಕೋರಿದ್ದ ಬೇಡಿಕೆಯಂತೆ ಅನ್ವಯ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗವನ್ನು ಪ್ರತ್ಯೇಕಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ಇದಕ್ಕಾಗಿ ಇಲಾಖೆ ಆದೇಶ ಹೊರಡಿಸಿದೆ ಎಂದರು.
ಜಿಲ್ಲಾಡಳಿತ ಅಥವಾ ಎಂಡಿಎ ಈ ಸಂಬಂಧ ಸೂಕ್ತ ಜಾಗ ಒದಗಿಸಿದರೆ ಕಟ್ಟಡ ನಿರ್ಮಿಸಲು ಸರ್ಕಾರ ಬದ್ಧವಾಗಿದೆ. ಕಾಲೇಜಿಗೆ ಅತಿಮುಖ್ಯವಾಗಿ ಅಗತ್ಯವಾಗಿರುವ ಪೀಠೋಪಕರಣಗಳ ಖರೀದಿಗೆ 30 ಲಕ್ಷ ಬಿಡುಗಡೆ ಮಾಡಲಾಗುವುದು. ಅಲ್ಲದೆ ಇಲ್ಲಿನ ಕೊಠಡಿ, ವಿದ್ಯಾರ್ಥಿನಿಲಯದ ಸಮಸ್ಯೆ ಹಾಗೂ ಶಿಕ್ಷಕರ ಕೊರತೆ ನಿವಾರಣೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ವಾರದೊಳಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಶಿಕ್ಷಕರ ನೇಮಕ: ರಾಜ್ಯದಲ್ಲಿ 362 ಪ್ರಥಮ ದರ್ಜೆ ಕಾಲೇಜುಗಳಿದ್ದು, ಶಿಕ್ಷಕರು ಸೇರಿದಂತೆ ಅನೇಕ ಮೂಲ ಸೌಕರ್ಯಗಳ ಸಮಸ್ಯೆ ಎದುರಿಸುತ್ತಿವೆ. 5 ಸಾವಿರ ಹೊಸ ಶಿಕ್ಷಕರ ನೇಮಕಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ. 2 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ ದೊರಕಿದ್ದು, ಮೊದಲ ಹಂತವಾಗಿ 403 ಮಂದಿ ಶಿಕ್ಷಕರನ್ನು ನೇಮಿಸಿಕೊಳ್ಳವಾಗುವುದು ಎಂದರು.
ಶಿಕ್ಷಕರ ಕೊರತೆಯಿಂದ ಅತಿಥಿ ಉಪನ್ಯಾಸರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ ಅವರಿಗೆ ನೀಡಬೇಕಿದ್ದ ವೇತನದ ಬಾಕಿಗಾಗಿ 54 ಕೋಟಿ ಬಿಡುಗಡೆ ಮಾಡಲಾಗಿದೆ. ಪ್ರತಿತಿಂಗಳು ವೇತನ ಪಾವತಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, ಕಾಲೇಜು ನಿರ್ಮಾಣಕ್ಕೆ ಜಾಗವನ್ನು ಗುರುತಿಸಿದರೆ ಅದರ ಮಂಜೂರಿಗೆ ಅಗತ್ಯ ಕ್ರಮ ವಹಿಸಲಾಗುವುದು. ಆದರೆ ಈ ಕಾಲೇಜನ್ನು ವಿಭಜಿಸಿ ಬೇರೆಡೆ ಸ್ಥಳಾಂತರಿಸಿದರೆ ಇದೇ ರೀತಿಯ ಉತ್ತಮ ವಾತಾವರಣ ಕಲ್ಪಿಸಲು ಸಾಧ್ಯವೇ ಎಂಬುದನ್ನು ಮಂಡಳಿ ಚಿಂತಿಸಬೇಕು. ಇದಕ್ಕಾಗಿ ಜಿಲ್ಲಾಡಳಿತ ಸಹಕಾರ ನೀಡಲಿದೆ ಎಂದರು.
ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ವಾಸು ಮಾತನಾಡಿ, 1917ರಲ್ಲಿ ಆರಂಭವಾದ ಈ ಕಾಲೇಜು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರ ಅಭಿವೃದ್ಧಿಗಾಗಿ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರ ಸಮಿತಿ ರಚಿಸಲಾಗಿದೆ. ಸಿಡಿಪಿ ಸಭೆಗೆ ಇದೇ ಮೊದಲ ಬಾರಿಗೆ ಉನ್ನತ ಶಿಕ್ಷಣ ಸಚಿವರು ಭಾಗವಹಿಸಿರುವುದು ಇತಿಹಾಸದಲ್ಲಿ ದಾಖಲಾದ ಸಂಗತಿ ಎಂದರು. ಶಾಸಕರಾದ ಮರಿತಿಬ್ಬೇಗೌಡ, ಗೋ. ಮಧೂಸೂದನ್, ಎಂ.ಕೆ. ಸೋಮಶೇಖರ್, ಜಿಲ್ಲಾಧಿಕಾರಿ ಸಿ. ಶಿಖಾ, ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಟಿ.ಎನ್. ಪ್ರಭಾಕರ, ಪ್ರಾಂಶುಪಾಲ ಪ್ರೊ.ಪುರುಷೋತ್ತಮ್, ಡಾ.ಜಿ. ಸುಶೀಲಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.