ಮೈಸೂರು

ಟ್ರಾವೆಲ್ ಏಜೆಂಟರಿಂದ ಮಾಹಿತಿ ಕೇಂದ್ರ

Published On :

ಕ.ಪ್ರ.ವಾರ್ತೆ ಮೈಸೂರು ಸೆ. 24
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ಸಂಬಂಧ ಮೈಸೂರು ಟ್ರಾವೆಲ್ ಏಜೆಂಟ್ಸ್ ಸಂಘದಿಂದ ಸೆ.27 ರಂದು ನಗರದ ರೇಲ್ವೆ ನಿಲ್ದಾಣದ ಬಳಿ ಉಚಿತ ಮಾಹಿತಿ ಕೇಂದ್ರ ಸ್ಥಾಪಿಸಲು ತೀರ್ಮಾನಿಸಲಾಗಿದೆ.
ಅಂದು ಬೆಳಗ್ಗೆ 7.30ಕ್ಕೆ ಮಾಹಿತಿ ಕೇಂದ್ರವನ್ನು ನೈಋತ್ಯ ರೇಲ್ವೆ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಅನಿಲ್‌ಕುಮಾರ್ ಉದ್ಘಾಟಿಸುವರು. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಶಿವಲಿಂಗಪ್ಪ ಪ್ರವಾಸಿಗರಿಗೆ ಪುಷ್ಪಗುಚ್ಚ ನೀಡಿ ಸ್ವಾಗತಿಸುವರು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸ್ಥಾಪಿಸಿರುವ ವೇದಿಕೆಯನ್ನು ಜಿಲ್ಲಾಧಿಕಾರಿ ಸಿ.ಶಿಖಾ ಉದ್ಘಾಟಿಸುವರು. ಬಳಿಕ ಪ್ರವಾಸೋದ್ಯಮದಲ್ಲಿ ಸೇವೆ ಸಲ್ಲಿಸಿದ ಇಬ್ಬರು ಹಿರಿಯರನ್ನು ಹಾಗೂ ಇಬ್ಬರು ಸಂಚಾರ ಪೊಲೀಸರನ್ನು ಅಭಿನಂದಿಸುವರು ಎಂದು ಮೈಸೂರು ಟ್ರಾವೆಲ್ ಏಜೆಂಟ್ಸ್ ಸಂಘದ ಸಂಸ್ಥಾಪಕ ಅಧ್ಯಕ್ಷ ಎಸ್. ಶಾಂತಿನಾಥ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಮಾಹಿತಿ ಕೇಂದ್ರಗಳ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಮೆರವಣಿಗೆ ಏರ್ಪಡಿಸಿದ್ದು, ಜಿಲ್ಲಾಧಿಕಾರಿ ಸಿ. ಶಿಖಾ ಚಾಲನೆ ನೀಡುವರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕಂಸಾಳೆ, ಗೊರವನ ಕುಣಿತ, ಟೆಬೆಟಿಯನ್ನರ ಕೊಳಲು ವಾದನ, ನೃತ್ಯ, ಅಲಂಕೃತ ಎತ್ತಿನಗಾಡಿಗಳು ಟಾಂಗಾ ಹಾಗೂ ಇನ್ನಿತರ ವಾಹನಗಳು ಭಾಗವಹಿಸಲಿವೆ. ಮೆರವಣಿಗೆಯು ಬಲರಾಮ ದ್ವಾರದಿಂದ ಹೊರಟು ದೊಡ್ಡಗಡಿಯಾರ ಮುಖಾಂತರ ಗಾಂಧಿಚೌಕ, ಚಿಕ್ಕಗಡಿಯಾರ ಮುಖಾಂತರ ಅರಸು ರಸ್ತೆ, ಜೆಎಲ್‌ಬಿ ರಸ್ತೆ ಮುಖಾಂತರ ರೈಲು ನಿಲ್ದಾಣಕ್ಕೆ ಬಂದು ಅಂತ್ಯಗೊಳ್ಳಲಿದೆ ಎಂದರು.
ಪ್ರತಿ ವರ್ಷ ದಸರಾ ಬಂದೇ ಬರುತ್ತದೆ ಎಂಬುದು ಇಲ್ಲಿನ ರಾಜಕಾರಣಿಗಳು, ಅಧಿಕಾರಿಗಳಿಗೆ ಗೊತ್ತಿರುವ ಸತ್ಯ ಸಂಗತಿ. ಆದರೆ, ದಸರಾ ಸಿದ್ಧತೆ ಸಂದರ್ಭದಲ್ಲಿ ಪರಿಣತ ತಜ್ಞರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡದಿರುವುದು ದುರ್ದೈವ. ಕಳೆದ ವರ್ಷದಲ್ಲಿ ಟ್ರಾವೆಲ್ ಏಜೆನ್ಸಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ರೂಪಿಸಲಾಗುತ್ತಿತ್ತು. ಈ ಬಾರಿ ನಮ್ಮನ್ನು ಕಡೆಗಣಿಸಲಾಗಿದೆ. ವರ್ಷದ ಮುನ್ನೂರ ಅರವತ್ತೈದು ದಿನಗಳ ಕಾಲ ಪ್ರವಾಸೋದ್ಯಮದಲ್ಲಿರುವ ನಮಗೆ ಈ ಬಗ್ಗೆ ಹೆಚ್ಚಿನ ನೋವು ನಲಿವು ಗೊತ್ತಿರುತ್ತದೆ. ಇದರ ಸಲಹೆಯನ್ನು ಜಿಲ್ಲಾಡಳಿತ ಪಡೆದುಕೊಳ್ಳುತ್ತಿಲ್ಲ ಎಂದು ಉಪಾಧ್ಯಕ್ಷ ಎಸ್.ಜೆ. ಅಶೋಕ್ ತಿಳಿಸಿದರು.
ಶಾಶ್ವತ ತೆರಿಗೆ ವಿನಾಯಿತಿ ನೀಡಿ: ಸಂಘದ ಮಾಜಿ ಅಧ್ಯಕ್ಷ ಜಯಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ದಸರಾ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪ್ರವಾಸಿಗರಿಗೆ ತೆರಿಗೆ ವಿನಾಯಿತಿ ನೀಡಿದೆ. ಇದನ್ನು ವರ್ಷಪೂರ್ತಿ ಮುಂದುವರಿಸಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಪಕ್ಕದ ಕೇರಳ ಹಾಗೂ ತಮಿಳುನಾಡು ರಾಜ್ಯಗಳು ಅತ್ಯಂತ ಕಡಿಮೆ ತೆರಿಗೆ ವಿಧಿಸಿವೆ. ನಮ್ಮ ರಾಜ್ಯದಲ್ಲಿ ಪ್ರವಾಸಿಗರಿಗೆ ತಲಾ 700 ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಪ್ರವಾಸಿಗರು ಪಕ್ಕದ ರಾಜ್ಯಗಳತ್ತ ಮುಖ ಮಾಡುತ್ತಿದ್ದಾರೆ ಎಂದರು. ಸಂಘದ ಕಾರ್ಯದರ್ಶಿ ಎ.ಸಿ. ರವಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.