ಶಿಕ್ಷಕರಿಗೆ ಕಾರ್ಯ ಒತ್ತಡ ತಪ್ಪಿಸಲಿ
ಕ.ಪ್ರ.ವಾರ್ತೆ ಮೈಸೂರು ಸೆ. 26
ಇಂದು ಶಿಕ್ಷಕರ ಮೇಲೆ ಹೆಚ್ಚಾಗುತ್ತಿರುವ ಒತ್ತಡ ತಪ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ಜೆ. ಜವರೇಗೌಡ ಹೇಳಿದರು.
ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಗುರುವಾರ ಸಂಘದ ವತಿಯಿಂದ ಜಿಲ್ಲೆಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಅಕ್ಷರ ದಾಸೋಹ, ಕ್ಷೀರಭಾಗ್ಯ ಯೋಜನೆಯ ಅನುಷ್ಠಾನ ಹಾಗೂ ದಾಖಲೆಗಳ ಸರಳೀಕರಣ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಹಾಗೂ ಪಠ್ಯೇತರ ಚಟುವಟಿಕೆಗಳ ಕಾರ್ಯದಿಂದ ಶಿಕ್ಷಕರ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ. ಇದರಿಂದಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಮಸ್ಯೆಯಾಗಿದೆ ಎಂದು ವಿಷಾದಿಸಿದರು.
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದರ ಜತೆಗೆ ಅಕ್ಷರ ದಾಸೋಹ ಹಾಗೂ ಕ್ಷೀರಭಾಗ್ಯ ಮುಂತಾದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇದರಿಂದಾಗಿ ಶಿಕ್ಷಕರ ಅಧ್ಯಯನ ಹಾಗೂ ಬೋಧನೆಗೆ ತುಂಬ ತೊಂದರೆ ಉಂಟಾಗಿ, ಅವರ ಕಾರ್ಯಕ್ಷಮತೆ ಕ್ಷೀಣಿಸುತ್ತಿದೆ. ಆದ್ದರಿಂದ ಸರ್ಕಾರದ ಯೋಜನೆಗಳ ನಿರ್ವಹಣೆಯಿಂದ ಶಿಕ್ಷರನ್ನು ಮುಕ್ತಿಗೊಳಿಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವಲ್ಲಿ ಸರ್ಕಾರ ಗಮನ ಹರಿಸಬೇಕು ಎಂದರು.
ಶಿಕ್ಷಕರು ಗಮನಹರಿಸಲಿ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ. ಬಸವರಾಜು ಮಾತನಾಡಿ, ಸಮಾಜದ ಎಲ್ಲಾ ವರ್ಗದ ಮಕ್ಕಳ ಬೆಳವಣಿಗೆಗೆ ಶಿಕ್ಷಕರು ಗಮನ ವಹಿಸಬೇಕು. ದಾಸೋಹಕ್ಕೆ ನೀಡುವ ಅಕ್ಕಿಯ ಗುಣಮಟ್ಟ ಪರಿಶೀಲಿಸಬೇಕು. ಆಹಾರದ ವಿತರಣೆ ಹಾಗೂ ತಯಾರಿಯಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದರು. ಶಿಕ್ಷಕರ ಸಮಸ್ಯೆ ಕುರಿತ ಮನವಿಯನ್ನು ಜಿ.ಪಂ. ಕಾರ್ಯನಿರ್ವಾಹಣಾಧಿಕಾರಿ ಪಿ.ಎ ಗೋಪಾಲ್ ಅವರಿಗೆ ಸಂಘದ ವತಿಯಿಂದ ಸಲ್ಲಿಸಲಾಯಿತು. ಸಂಘದ ರಾಜ್ಯಾಧ್ಯಕ್ಷ ಕೆ. ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಅಶ್ವತ್ಥಯ್ಯ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ. ರಾಮು, ಶಾರದಾ ವಿಲಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ,ಎಸ್. ಪಾರ್ಥಸಾರಥಿ ಅವರು ಮುಖ್ಯ ಅತಿಥಿಯಾಗಿದ್ದರು. ಬಿಇಒಗಳಾದ ಆರ್. ರಘುನಂದನ್, ಆರ್. ಕರೀಗೌಡ, ಪುರುಷೋತ್ತಮ್, ಯೋಜನೆಗಳ ಸಂಯೋಜಕರಾದ ಶೋಭಾ, ಎನ್. ವೆಂಕಟೇಶ್, ಯೋಗರಾಜ್, ರವಿಪ್ರಸನ್ನ, ಎಂ. ಮಾದೇಶ್, ಕಾಳನಾಯಕ. ಮಲ್ಲಿಕಾರ್ಜುನ, ವಿ.ವಿ. ಉಮಾ ಹಾಗೂ ರಾಜು ಇದ್ದರು. ನಂತರ ಆರ್. ರಘುನಂದನ್ ಹಾಗೂ ರಾಜು ಅವರು ಯೋಜನೆಗಳ ಮಾಹಿತಿ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

