ಮೈಸೂರು

ನಗರಸಭೆಯಲ್ಲಿ ರಸ್ತೆ ಗುಂಡಿಯದ್ದೇ ಕಾರುಬಾರು

Published On :

ಕ.ಪ್ರ.ವಾರ್ತೆ ,  ಮೈಸೂರು ,  ಸೆ. 27
ನಗರಪಾಲಿಕೆ ಚುನಾವಣೆ ನಡೆದು ಆರು ತಿಂಗಳ ಬಳಿಕ ನೂತನವಾಗಿ ಅಸ್ತಿತ್ವಕ್ಕೆ ಬಂದ ಚುನಾಯಿತ ಪ್ರತಿನಿಧಿಗಳ ಮೊದಲ ಸಭೆ ಶುಕ್ರವಾರ ನಡೆಯಿತು. ಈ ಮೂಲಕ ನಗರದ ಆಡಳಿತಕ್ಕೆ ಚುರುಕು ಮುಟ್ಟಿಸಲು ಪ್ರಜಾಪ್ರತಿನಿಧಿಗಳು ಅಧಿಕೃತವಾಗಿ ತೊಡಗಿಸಿಕೊಳ್ಳಲು ಈ ಸಭೆ ಮುನ್ನಡಿಯಾಯಿತು.
ಸಭೆಯ ಆರಂಭದ ಮೊದಲಿಗೆ ಪಾಲಿಕೆ ಹಿರಿಯ ಸದಸ್ಯ ಎಚ್.ಎನ್. ಶ್ರೀಕಂಠಯ್ಯ ಸಭೆಯ ನಡಾವಳಿ ಹಾಗೂ ಘನತೆ ಬಗ್ಗೆ ಹಿತವಚನ ಬೋಧಿಸಿದರು. ಸಾಮಾನ್ಯ ಸಭೆ, ಮುಂದುವರಿದ ಸಭೆ ಹಾಗೂ ತುರ್ತು ಸಭೆಯ ವೈಶಿಷ್ಟತೆ ತಿಳಿಸಿದರು. ಹಾಗೆ ಸಭೆ ನಡೆಯುವಾಗ ಪಾಲಿಕೆ ಪ್ರಮುಖರಾದ ಮೇಯರ್ ಅವರನ್ನು ಉದ್ದೇಶಿಸಿ ಮಾತನಾಡುವಾಗ ಬಳಸುವ ಪದದ ಮೇಲೆ ಹಿಡಿತವಿರುವ ಬಗ್ಗೆ ಹಾಗೂ ಸದಸ್ಯರ ಹಕ್ಕು ಚ್ಯುತಿಯಾಗದಂತೆ ನಡೆದುಕೊಳ್ಳುವಂತೆ ಸದಸ್ಯರಿಗೆ ಕಿವಿಮಾತು ಹೇಳಿದರು.
ಬಳಿಕ ನಗರಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ತಮ್ಮ ಹುದ್ದೆಯ ಸಹಿತ ಪರಿಚಯ ಮಾಡಿಕೊಂಡರು. ಅವರಲ್ಲಿ ಕೆಲವರು ಅತಿ ಬೇಗ ಮುಗಿಸಿದರೆ, ಮತ್ತೆ ಕೆಲವರು ಬರಿ ಹೆಸರನ್ನಷ್ಟೇ ಹೇಳಿ ವೇದಿಕೆಯಿಂದ ಕೆಳಗಿಳಿದರು. ನಂತರ ಮಾತನಾಡಲು ಆರಂಭಿಸಿದ ಸದಸ್ಯರು ನೂತನ ಮೇಯರ್, ಉಪಮೇಯರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಉಳಿದಂತೆ ತಮ್ಮ ತಮ್ಮ ವಾರ್ಡಿನ ಸಮಸ್ಯೆ, ದಸರಾ ಹಬ್ಬ ಆಚರಣೆ ಇತ್ಯಾದಿ ಸಂಗತಿಗಳನ್ನು ಹೇಳಿಕೊಂಡರು.
ಗುಂಡಿಯ ಸದ್ದು: ಮೈಸೂರು ಪ್ರವಾಸಿ ಕೇಂದ್ರವಾಗಿದ್ದರೂ ಇಲ್ಲಿನ ರಸ್ತೆಗಳು ಹಾಳು ಬಿದ್ದಿವೆ. ಪ್ರಜಾಪ್ರತಿನಿಧಿಗಳ ಇಲ್ಲದ ವೇಳೆ ಆಡಳಿತ ನಿರ್ವಹಿಸಿರುವ ಅಧಿಕಾರಿ ವರ್ಗ ಯಾವುದೇ ಕೆಲಸ ಮಾಡಿಲ್ಲ. ಮುಖ್ಯಮಂತ್ರಿಗಳೇ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವಂತೆ ಹೇಳಿಸಿಕೊಳ್ಳುವಷ್ಟರ ಮಟ್ಟಕ್ಕೆ ಅಧಿಕಾರಿ ವರ್ಗ ನಿದ್ದೆ ಮಾಡುತ್ತಿದೆ ಎಂಬ ಧಾಟಿಯಲ್ಲಿ ಹಲವು ಸದಸ್ಯರನ್ನು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜೆಡಿಎಸ್ ಸದಸ್ಯ, ಮಾಜಿ ಮೇಯರ್ ಸಂದೇಶ್ ಸ್ವಾಮಿ ಮಾತನಾಡಿ, ಇವು ಇದ್ದಷ್ಟು ದಿನ ಮೈಸೂರಿನ ಅಭಿವೃದ್ಧಿಗೆ ಕೊಡುಗೆ ನೀಡಲು ಮುಂದಾಗಬೇಕು. ಆಗ ನಮ್ಮನ್ನು ಆರಿಸಿ ಕಳುಹಿಸಿದವರ ಋಣ ತೀರಿಸಿದಂತಾಗುತ್ತದೆ. ಪಾಲಿಕೆಯಲ್ಲಿ ಅಧಿಕಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಅವರಿಂದ ಹೇಳಿಕೊಳ್ಳುವಂತ ಕೆಲಸಗಳು ಆಗುತ್ತಿಲ್ಲ. ಮುಂದಿನ ದಿನಗಳಲ್ಲಾದರೂ ಪ್ರಾಮಾಣಿಕವಾಗಿ ಮೈಸೂರನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದರು.
ಏನೇನೂ ಕೆಲಸವಾಗಿಲ್ಲ: ಮಾಜಿ ಮೇಯರ್, ಕಾಂಗ್ರೆಸ್‌ನ ಪುರುಷೋತ್ತಮ್ ಮಾತನಾಡಿ, ಕಳೆದ ಏಳು ತಿಂಗಳಿಂದ 65 ವಾರ್ಡುಗಳಲ್ಲಿ ಏನೇನೂ ಕೆಲಸ ಆಗಿಲ್ಲ. ಎಲ್ಲೆಲ್ಲೂ ದುರಾಡಳಿತ ನಡೆಯುತ್ತಿದೆ. ಅಧಿಕಾರಿಗಳು ಸರಿಯಾಗಿ ತೆರಿಗೆ ಸಂಗ್ರಹಿಸುತ್ತಿಲ್ಲ. ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುತ್ತಿಲ್ಲ. ಎಲ್ಲಿ ನೋಡಿದರೂ ಗುಂಡಿ ಬಿದ್ದ ರಸ್ತೆಗಳ ನರಕ ಸದೃಶ್ಯವಾಗುತ್ತಿದೆ. ದೀನ ದಲಿತರಿಗೆ ಸಿಗಬೇಕಾದ 22:75 ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ. ಈ ಹಿಂದಿನ ಕೌನ್ಸಿಲ್ ಅವಧಿಯಲ್ಲಿ 137 ಸಿಆರ್ ನೀಡಿದ್ದರೆ, ಕಳೆದ ಏಳು ತಿಂಗಳಿಂದ 400 ಸಿಆರ್ ನೀಡಿದ್ದಾರೆ ಎಂದರು. ಮಜಿ ಮೇಯರ್ ಅಯೂಬ್‌ಖಾನ್ ಮಾತನಾಡಿ, ನಗರ ಅಭಿವೃದ್ಧಿ ಹೊಂದುವ ಬದಲಾಗಿ ಹಿಂದಕ್ಕೆ ಹೋಗಿದೆ. ಎಲ್ಲೆಲ್ಲೂ ಕಸವೇ ಕಾಣುತ್ತಿದೆ. ಮುಂದೊಂದು ದಿನ ಬೆಂಗಳೂರಿನ ಸ್ಥಿತಿ ಬಂದರೂ ಬರಬಹುದು. ಕಾಮಗಾರಿಗೆ ಗುತ್ತಿಗೆ ನೀಡುವಾಗ ಏನನ್ನು ಪರಿಶೀಲಿಸದೆ ಕೇವಲ ಅರ್ಧ ಗಂಟೆಯಲ್ಲಿ ನೀಡುವಂತ ಪರಿಸ್ಥಿತಿ ಬಂದೊದಗಿದೆ. ಇದು ತಪ್ಪಬೇಕು ಎಂದರು.
ಜೆಡಿಎಸ್‌ನ ಹಿರಿಯ ಸದಸ್ಯ ಕೆ.ಟಿ. ಚಲುವೇಗೌಡ ಮಾತನಾಡಿ, ನಗರಕ್ಕೆ ನೀರು ಪೂರೈಸುವ ಬಹುತೇಕ ಟ್ಯಾಂಕ್‌ಗಳು ಶುಚಿಯಾಗಿಲ್ಲ. ಈ ಬಗ್ಗೆ ಆಯುಕ್ತರು ಗಮನ ಹರಿಸಬೇಕು. ರಸ್ತೆ ಗುಂಡಿ ಬಿದ್ದಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಸ್ವಚ್ಛತೆಗೆ 20 ಕೋಟಿ ನೀಡಿದ್ದರೂ ಮರೆತಂತಿದೆ. ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ನಾವೆಲ್ಲ ಪಣ ತೊಡಬೇಕು ಎಂದರೆ, ಕಾಂಗ್ರೆಸ್‌ನ ಡಿ. ನಾಗಭೂಷಣ್ ಮಾತನಾಡಿ, ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ನಮ್ಮದೇ ಜಿಲ್ಲೆಯವರು ಮುಖ್ಯಮಂತ್ರಿಯಾಗಿದ್ದಾರೆ. ಪಾಲಿಕೆಯಿಂದ ಅವರಿಗೆ ಪೌರ ಸಮ್ಮಾನ ಹಮ್ಮಿಕೊಳ್ಳುವುದು ಔಚಿತ್ಯವಿದೆ ಎಂದರು.
ಮಾತು ಆರಂಭಿಸಿದ ಹೊಸಬರು
ಹೊಸದಾಗಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿ ಬಂದವರ ಪೈಕಿ ಮಾತನಾಡಿದ ಬಿಜೆಪಿ ಸದಸ್ಯ ಸ್ನೇಕ್ ಶ್ಯಾಮ್, ಮತದಾರ ದೇವರುಗಳು ಆರಿಸಿ ಕಳುಹಿಸಿದ್ದಾರೆ. ಅವರ ಋಣ ತೀರಿಸಲು ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಹೇಳಿ, ಹಾವು ಹಿಡಿಯಲು ಕರೆ ಬಂದಿದ್ದರಿಂದ ಸಭೆಯಿಂದ ನಿರ್ಗಮಿಸಿದರು. ಕಾಂಗ್ರೆಸ್ ಸದಸ್ಯೆ ಮಂಜುಳಾ ಮಾನಸ ಮಾತನಾಡಿ, ಸಭೆಯಲ್ಲಿ ನಮಗೆ ಪಕೋಡ, ಟೀ- ಕಾಫಿ, ನೀರು ಬಂದು ತಲುಪುವ ವೇಗದಲ್ಲಿ ಕೇಳಿದ ಪ್ರಶ್ನೆಗೆ ಅಧಿಕಾರಿಗಳು ಉತ್ತರ ನೀಡುವುದಿಲ್ಲ. ಬೆಳಗ್ಗೆ ಏಳುತ್ತಿದ್ದಂತೆ ಸಾರ್ವಜನಿಕರು ನೀರು ಬಂದಿಲ್ಲ ಎಂಬ ದೂರು ದುಮ್ಮಾನ ಹೇಳುತ್ತಾರೆ ಎಂದರು.
ರವೀಂದ್ರ ಆರ್ಭಟ, ಮಂಕಾದ ಆಯುಕ್ತರು
ಸಿವಿಲ್ ಎಂಜಿನಿಯರ್ ರಾಮ್‌ಕುಮಾರ್ ಅವರನ್ನು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಕಾರ್ಯಕ್ಕೆ ನಿಯೋಜಿಸಿರುವುದು ತಪ್ಪು. ಅಲ್ಲದೇ ಮಾರ್ಚ್‌ನಲ್ಲಿ ನಿಯೋಜಿಸಿದ್ದರೂ, ಅವರು ಸೆಪ್ಟೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗೆ ಅರ್ಹತೆ ಇಲ್ಲದ ಹುದ್ದೆಗೆ ನೇಮಿಸುವುದು ಸರಿಯೇ ಎಂದು ಪಕ್ಷೇತರ ಸದಸ್ಯ ಆರ್. ರವೀಂದ್ರಕುಮಾರ್ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಅಷ್ಟೆ ಅಲ್ಲದೆ ಈ ರೀತಿ ನಿಯೋಜಿಸಲು ತಮಗೆ ಅಧಿಕಾರ ಉಂಟೆ ಎಂದು ಆರ್ಭಟಿಸಿದರು. ತಮಗೆ ಅನ್ಯಾಯವಾಯಿತು ಎಂದಾಗ ಕೆಎಟಿ ಮೊರೆ ಹೋಗುತ್ತೀರಿ. ಈ ಎಂಜಿನಿಯರುಗಳು ಯಾರ ಮೊರೆ ಹೋಗಬೇಕು. ಈ ನಿಯೋಜನೆ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದರು. ಇವರ ಆರ್ಭಟಕ್ಕೆ ತಬ್ಬಿಬ್ಬಾದ ಆಯುಕ್ತ ಪಿ.ಜಿ. ರಮೇಶ್ ಏನು ಹೇಳಬೇಕೆಂಬುದೇ ತಿಳಿಯದೆ ಕುಳಿತು, ತಕ್ಷಣ ಎಚ್.ಎನ್. ಶ್ರೀಕಂಠಯ್ಯ ಅವರು ಕೌನ್ಸಿಲ್ ಕಾಯಿದೆಯನ್ನು ಓದಿ ಆಯುಕ್ತರಿಗೆ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿದೆ ಎಂದು ಆಯುಕ್ತರ ಪರ ಸಮಜಾಯಾಷಿ ನೀಡಿದರು. ನಂತರ ರವೀಂದ್ರ ಸುಮ್ಮನಾದರು. ಇದೇ ವೇಳೆ ಬಿಜೆಪಿ ಸದಸ್ಯ ನಂದೀಶ್ ಪ್ರೀತಂ, ಜೆಡಿಎಸ್ ಸದಸ್ಯ ಆರ್. ಲಿಂಗಪ್ಪ ಆಯುಕ್ತರ ಪರ ನಿಂತರೆ, ಮತ್ತೆ ಕೆಲವರು ರವೀಂದ್ರಗೆ ಬೆಂಬಲವಾಗಿ ನಿಂತರು. ಕೊನೆಗೆ ಶ್ರೀಕಂಠಯ್ಯ, ಅಯೂಬನ್ ಖಾನ್ ತಿಳಿಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.