ಖಾಸಗಿ ದರ್ಬಾರ್ ಹಾಲ್‌ನಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ
ಕ.ಪ್ರ.ವಾರ್ತೆ , ಮೈಸೂರು , ಸೆ. 29
ವಿಶ್ವವಿಖ್ಯಾತ ದಸರಾ ಮಹೋತ್ಸವ ಅಂಗವಾಗಿ ಮೈಸೂರಿನ ಅಂಬಾವಿಲಾಸ ಅರಮನೆಯ ಖಾಸಗಿ ದರ್ಬಾರ್ ಹಾಲ್‌ನಲ್ಲಿ ರತ್ನಖಚಿತ ಸಿಂಹಾಸನವನ್ನು ಭಾನುವಾರ ಜೋಡಿಸಲಾಯಿತು.
ಈ ಸಿಂಹಾಸನವನ್ನು ಅ.5 ರಿಂದ 14 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗುತ್ತದೆ. ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಈ ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ಒಡೆಯರ್ ಅವರ ಆಪ್ತ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಮತ್ತು ಅರಮನೆ ಅಧಿಕಾರಿಗಳು ಸಿಂಹಾಸನವನ್ನು ಮೂಲಸ್ಥಾನದಿಂದ ಹೊರತೆಗೆದು ಪೂಜೆ ಸಲ್ಲಿಸಿದರು. ನಂತರ ಅಧಿಕಾರಿಗಳ ಸಮ್ಮುಖದಲ್ಲಿ ಪೊಲೀಸರ ಬಿಗಿ ಭದ್ರತೆಯಲ್ಲಿ ಸಿಂಹಾಸನವನ್ನು ಖಾಸಗಿ ದರ್ಬಾರ್ ಹಾಲ್‌ನಲ್ಲಿ ಜೋಡಿಸಲಾಯಿತು.
ಸಂಪ್ರದಾಯದಂತೆ ಮೈಸೂರು ತಾಲೂಕಿನ ಗೆಜ್ಜಗಳ್ಳಿ ವೀರಶೈವರು ಮಡಿ ಬಟ್ಟೆ ತೊಟ್ಟು ದೇವರಿಗೆ ಕೈಮುಗಿದು, ಸಿಂಹಾಸನದ 6 ಭಾಗಗಳನ್ನು ತಂದು ಅಂಬಾವಿಲಾಸ ರತ್ನಗಂಬಳಿಯ ಮೇಲೆ 15 ಅಡಿ ಅಗಲ ಮತ್ತು ಉದ್ದವಿರುವ ಜಾಗದಲ್ಲಿ ಕೂರ್ಮಾವತಾರ ಆಸನವನ್ನು ಜೋಡಿಸಿ, ಕಾಲುಗಳನ್ನು ಅಳವಡಿಸಿದರು. ನಂತರ ಪುರೋಹಿತರು ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಬಿಳಿ ಬಟ್ಟೆಯಿಂದ ಮುಚ್ಚಿದರು.
ಅ.5 ರಿಂದ 24 ರವರೆಗೆ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತದೆ. ದಸರೆ ಮುಗಿದ ನಂತರ ಸಂಪ್ರದಾಯದಂತೆ ಗೆಜ್ಜಗಳ್ಳಿ ವೀರಶೈವರೇ ಈ ಸಿಂಹಾಸನವನ್ನು ಮೂಲ ಸ್ಥಾನಕ್ಕೆ ತೆಗೆದುಕೊಂಡು ಹೋಗಿ ಇರಿಸುತ್ತಾರೆ.
ಸಿಂಹಾಸನ ಇರಿಸಲಾಗಿರುವ ಖಾಸಗಿ ದರ್ಬಾರ್ ಹಾಲ್‌ನಲ್ಲಿ 6-7 ಸಿಸಿಟಿವಿ ಕ್ಯಾಮರಾಗಳನ್ನು ಸಹ ಅಳವಡಿಸಲಾಗಿದೆ. ಜಿಲ್ಲಾಧಿಕಾರಿ ಸಿ. ಶಿಖಾ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗಾನಾಯಕ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿಗಳಾದ ಎ.ಎನ್. ರಾಜಣ್ಣ, ಎಂ.ಎಂ. ಮಹದೇವಯ್ಯ, ಪ್ರಭಾಶಂಕರ, ಅರಮನೆ ಎಸಿಪಿ ಚೆನ್ನಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

