3ಕ್ಕೆ ಚಾಮರಾಜನಗರದಲ್ಲಿ ಕಬ್ಬು ಬೆಳೆಗಾರರ ಧರಣಿ
ಕ.ಪ್ರ.ವಾರ್ತೆ , ಮೈಸೂರು , ಸೆ. 30
ಮೈಸೂರು- ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಕಬ್ಬು ಬೆಳೆಗಾರರಿಗೆ ಕಬ್ಬಿಗೆ ಅಂತಿಮ ದರ ನಿಗದಿ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘದಿಂದ ಅ.3 ರಂದು ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ಸೋಮವಾರ ನಗರದ ಕಬ್ಬು ಬೆಳೆಗಾರರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅಂತಿಮ ದರ ನಿಗದಿ ಮಾಡದೆ ಮುಂಗಡ ಮಾತ್ರ ನೀಡಿದ್ದು, ಅಂತಿಮ ದರದ ಬಾಬ್ತು ಬಾಕಿ ಹಣ ನೀಡಿಲ್ಲ. ಪ್ರಸಕ್ತ ಸಾಲಿನ ಕಬ್ಬಿನ ದರ ನಿಗದಿಪಡಿಸಿಲ್ಲ. ಈ ಬಗ್ಗೆ ಉಭಯ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದ ಭರವಸೆ ಫಲ ನೀಡಿಲ್ಲ. ಆದ್ದರಿಂದ ಎಲ್ಲಾ ಸಮಸ್ಯೆಗಳನ್ನು ಮುಂದಿಟ್ಟು ಪ್ರತಿಭಟಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಹಲವು ನಿರ್ಣಯಗಳು
1. ಕಬ್ಬಿನ ಬೆಲೆ ನಿಗದಿ ಮಾಡುವಾಗ ಸಕ್ಕರೆ ಇಳುವರಿ ಆದಾಯ ಮತ್ತು ಉಪಉತ್ಪನ್ನಗಳ ಆದಾಯ ಪರಿಗಣಿಸಿ ಬೆಲೆ ನಿಗದಿಗೊಳಿಸಬೇಕು.
2. ಕಬ್ಬಿನ ದರವನ್ನು ರೈತರ ಹೊಲದಲ್ಲಿ ಖರೀದಿ ದರ ಎಂದು ನಿಗದಿಗೊಳಿಸಬೇಕು. ಸಾಗಾಣಿಕೆ ಹಾಗೂ ಕಟಾವು ಕೂಲಿ ಹೊಣೆಯನ್ನು ಕಾರ್ಖಾನೆಗೆ ವಹಿಸಬೇಕು.
3. 2011-12, 2012-13ನೇ ಸಾಲಿನ ಅಂತಿಮ ದರ ಟನ್ನಿಗೆ 500 ಬಾಕಿ ಕೊಡಿಸಬೇಕು (ಈಗಾಗಲೇ ಬೆಳಗಾವಿಯ ಕೃಷ್ಣ ಕಾರ್ಖಾನೆ, ಬಿಜಾಪುರದ ನಂದಿ ಕಾರ್ಖಾನೆಗಳು ಈ ರೀತಿಯಾಗಿ ಪಾವತಿಸಿವೆ).
4. ಕಬ್ಬು ಖರೀದಿ ಮಂಡಲಿಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರಾಗಿದ್ದು ಸರ್ಕಾರದಲ್ಲಿ ಸಚಿವರಾಗಿದ್ದು ಕಬ್ಬು ಖರೀದಿ ಮಂಡಲಿಯಲ್ಲಿ ಸದಸ್ಯರಾಗಿರುವುದು ಸರಿಯಲ್ಲ ಎಂದು ರಾಜಿನಾಮೆ ನೀಡಿರುವ ಸಚಿವ ಎಸ್.ಆರ್. ಪಾಟೀಲ್ ಕ್ರಮಕ್ಕೆ ಸ್ವಾಗತ ಹಾಗೂ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರನ್ನು ಕಬ್ಬು ಖರೀದಿ ಮಂಡಲಿಗೆ ಸದಸ್ಯರನ್ನಾಗಿ ಸರ್ಕಾರ ನೇಮಕ ಮಾಡಿಕೊಂಡಿರುವುದು ರೈತರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಕೂಡನಹಳ್ಳಿ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಸಂಚಾಲಕ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಾರ್ಯಾಧ್ಯಕ್ಷ ಪಿ. ಸೋಮಶೇಖರ್, ಚಿಕ್ಕಲಿಂಗಯ್ಯ, ಕುಪ್ಯ ಜವರಯ್ಯ, ಕುರುಬೂರು ಸಿದ್ದೇಶ್, ಕುಂತೂರ್ ಪ್ರಭುಸ್ವಾಮಿ, ಕುಪ್ಪೇಗಾಲ ಸತೀಶ್, ಮಾಗೂಡ್ಲು ರವಿ, ಆನಂದ್, ನಾಗಣ್ಣ, ನಾರಾಯಣ್, ರವಿ, ರಾಂಪ್ರಸಾದ್, ಸುಬ್ಬಣ್ಣ, ಪುಟ್ಟಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

