ತೊಣಚಿಕೊಪ್ಪಲಿನಲ್ಲಿ ಪ್ರತಾಪ್ ಪಾದಯಾತ್ರೆ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಬುಧವಾರ ನಗರದ ತೊಣಚಿಕೊಪ್ಪಲಿನಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಮೊದಲಿಗೆ ಪಾಲಿಕೆ ಮಾಜಿ ಸದಸ್ಯ ಕೆ.ಎಂ. ಶಂಕರ್ ಮನೆಗೆ ತೆರಳಿ ಬೆಳಗಿನ ಉಪಹಾರ ಸೇವಿಸಿದ ನಂತರ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ಕೈಗೊಂಡರು. ರಸ್ತೆಗಳಲ್ಲಿ ಸಂಚರಿಸಿ, ಮತಯಾಚಿಸಿದ ಅವರು, ಕೇಂದ್ರದಲ್ಲಿ ಬಲಿಷ್ಠ ಸರ್ಕಾರದ ಅಗತ್ಯತೆ ಇರುವುದರಿಂದ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲವಿಗೆ ಸಹಕರಿಸುವಂತೆ ಕೋರಿದರು. ಇದೇ ವೇಳೆ ಮೈಲ್ಯಾಕ್ ಮಾಜಿ ಅಧ್ಯಕ್ಷ ಮೈ.ವಿ. ರವಿಶಂಕರ್, ಬಿ.ವಿ. ಮಂಜುನಾಥ್ ಇದ್ದರು.
ಪ್ರತಾಪ ಪರ ಪ್ರಚಾರ ಇಂದು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಪರ ಸಂಸದ ಅನಂತಕುಮಾರ್, ಮಾಜಿ ಸಚಿವ ವಿ.ಸೋಮಣ್ಣ ಏ.3 ರಂದು ಮೈಸೂರು ಜಿಲ್ಲಾದ್ಯಂತ ಪಾದಯಾತ್ರೆ ನಡೆಸುವರು.ಬೆಳಗ್ಗೆ 10ಕ್ಕೆ ನಂಜನಗೂಡಿನಲ್ಲಿ ಪಾದಯಾತ್ರೆ, ಮಧ್ಯಾಹ್ನ 12ಕ್ಕೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ, ಮಧ್ಯಾಹ್ನ 12.30ಕ್ಕೆ ನಗರದ ವಕೀಲರ ಸಂಘಕ್ಕೆ ಭೇಟಿ, ಮಧ್ಯಾಹ್ನ 2.30ಕ್ಕೆ ಬೆಮಲ್ ಕಾರ್ಮಿಕರ ಭೇಟಿ, ಮಧ್ಯಾಹ್ನ 3.30ಕ್ಕೆ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಆರ್ಬಿಐ ನೋಟು ಮುದ್ರಣಾಲಯದ ಆವರಣದಲ್ಲಿ ಮತಯಾಚಿಸುವರು. ಸಂಜೆ 5.30ಕ್ಕೆ ಚಾಮರಾಜ ಕ್ಷೇತ್ರದ ಶಿವರಾಂಪೇಟೆ, ಚಿಕ್ಕ ಗಡಿಯಾರ, ದೇವರಾಜ ಅರಸು ರಸ್ತೆನಲ್ಲಿ ರೋಡ್ ಶೋ, ಸಂಜೆ 7ಕ್ಕೆ ಕೃಷ್ಣರಾಜ ಕ್ಷೇತ್ರದ ಚಾಮುಂಡಿಪುರಂ ವೃತ್ತದಲ್ಲಿ ಸಾರ್ವಜನಿಕ ಸಭೆಯಲ್ಲಿ ಅಭ್ಯರ್ಥಿ ಪರ ಮತಯಾಚಿಸುವರು.
ತಿಲಕ್ನಗರದಲ್ಲಿ ಚಂದ್ರಶೇಖರಯ್ಯ ಪ್ರಚಾರ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನ್ಯಾ.ಚಂದ್ರಶೇಖಯ್ಯ ಬುಧವಾರ ತಿಲಕ್ನಗರದಲ್ಲಿ ಎಸ್ಡಿಪಿಐ ಕಾರ್ಯಕರ್ತರ ಜತೆಗೂಡಿ ಪ್ರಚಾರ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ನಿಂದ ಜನ ವಿಮುಖರಾಗುತ್ತಿದ್ದು, ಜೆಡಿಎಸ್ಗೆ ಸ್ವಯಂ ಪ್ರೇರಿತರಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈ ಬಾರಿ ಅತಿ ಹೆಚ್ಚಿನ ಮತ ತಮಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಪ್ರೊ.ಶಬ್ಬೀರ್ ಮುಸ್ತಫಾ, ಶಾಸಕ ಸಂದೇಶ್ ನಾಗರಾಜ್, ಮಾಜಿ ಮೇಯರ್ ಸಂದೇಶ್ಸ್ವಾಮಿ, ನಗರಾಧ್ಯಕ್ಷ ರಾಜಣ್ಣ, ಕಾರ್ಯಾಧ್ಯಕ್ಷ ಎಸ್.ಬಿ.ಎಂ. ಮಂಜು, ಪಾಲಿಕೆ ಸದಸ್ಯರಾದ ಬಿ.ಎಂ. ನಟರಾಜು, ಮಹದೇವಪ್ಪ, ಎಂ.ಜೆ. ರವಿಕುಮಾರ್, ಕೆ.ವಿ. ಮಲ್ಲೇಶ್, ಚನ್ನಪ್ಪ ಇದ್ದರು.
ವೆಚ್ಚ ವಿವರ ಸಲ್ಲಿಸದವರಿಗೆ ನೋಟಿಸ್
ಮೈಸೂರು: ಮೈಸೂರು- ಕೊಡಗು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ 6 ಅಭ್ಯರ್ಥಿಗಳು ಚುನಾವಣಾ ವೆಚ್ಚದ ವಿವರ ಸಲ್ಲಿಸದಿರುವ ಹಿನ್ನೆಲೆ 24 ಗಂಟೆಯೊಳಗಾಗಿ ವಿವರಣೆ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ.ಶಿಖಾ ಹೇಳಿದ್ದಾರೆ. ಅಭ್ಯರ್ಥಿಗಳಾದ ತಿಮ್ಮೇಗೌಡ, ಡಿ.ಎಸ್. ನಿರ್ವಾಣಪ್ಪ, ಎಸ್.ಪಿ. ಮಹದೇವಪ್ಪ, ಹುಣಸೂರು ಕೆ.ಚಂದ್ರಶೇಖರ್, ಡಿ. ಈಶ್ವರ್ ಹಾಗೂ ಎನ್.ಸಂಪತ್ತು ಏ.1ರಂದು ಸಲ್ಲಿಸಬೇಕಿದ್ದ ಚುನಾವಣಾ ವೆಚ್ಚದ ವಿವರಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ವೆಚ್ಚ ನಿರ್ವಹಣಾ ಘಟಕಕ್ಕೆ ಸಲ್ಲಿಸಿಲ್ಲ. ಇದು ಭಾರತ ದಂಡಸಂಹಿತೆ 171ಐ ರಂತೆ, ಜನತಾ ಪ್ರತಿನಿಧ್ಯ ಅಧಿನಿಯಮ 1950ರ ಪ್ರಕರಣ 77 ಮತ್ತು 78ರ ಉಲ್ಲಂಘನೆಯಾಗಿದೆ. ಅಭ್ಯರ್ಥಿಗಳಿಗೆ ಮಾ.29 ರಂದು ನಡೆದ ಜಿಲ್ಲಾಧಿಕಾರಿ ಸಭೆ ಹಾಗೂ ಮಾ.30 ರಂದು ನಡೆದ ಚುನಾವಣಾ ವೀಕ್ಷಕರ ಸಭೆಯಲ್ಲಿ ಅಭ್ಯರ್ಥಿಗಳು ಏ.1ರಿಂದ ಅನ್ವಯವಾಗುವಂತೆ ಚುನಾವಣಾ ವೆಚ್ಚದ ವಿವರವನ್ನು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ವೆಚ್ಚ ನಿರ್ವಹಣಾ ಘಟಕಕ್ಕೆ ಪರಿಶೀಲನೆಗಾಗಿ ಸಲ್ಲಿಸುವಂತೆ ತಿಳಿಸಲಾಗಿತ್ತು. ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಅಭ್ಯರ್ಥಿಗಳ ವೆಚ್ಚದ ವಿವರವನ್ನು ನಿರ್ವಹಿಸುವ ಸಂಬಂಧ ಎ.ಬಿ.ಸಿ ರಿಜಿಸ್ಟರುಗಳು ಹಾಗೂ ಭಾರತ ಚುನಾವಣಾ ಆಯೋಗದ ನಿರ್ದೇಶನದ ಪ್ರತಿಯನ್ನು ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿಸುವಂತೆ ದ್ಯಾವಪ್ಪನಾಯಕ ಮನವಿ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್. ವಿಶ್ವನಾಥ್ಗೆ ಜನಾಂಗದವರು ಮತ ನೀಡುವಂತೆ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ ಮನವಿ ಮಾಡಿದರು. ಯುಪಿಎ ಸರ್ಕಾರ ಹೊಸ ತಂತ್ರಜ್ಞಾನದೊಂದಿಗೆ ಹೊಸ- ಹೊಸ ಆವಿಷ್ಕಾರಗಳನ್ನು ಪರಿಚಯ ಮಾಡುವುದರಲ್ಲಿ ಮುಂದಾಗಿದೆ. ಮಾಹಿತಿ ಹಕ್ಕು ಕಾಯಿದೆ, ಶಿಕ್ಷಣ ಹಕ್ಕು ಕಾಯಿದೆ, ಆಹಾರ ಭದ್ರತಾ ಕಾಯಿದೆ, ಜನಲೋಕಪಾಲ್ ಮಸೂದೆಯಂತಹ ಜನಪರ ಯೋಜನೆಗಳನ್ನು ಹಮ್ಮಿಕೊಂಡಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಪರ ಕಾಳಜಿ ತೋರಿಸುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿ ಕಾಂಗ್ರೆಸ್ ಬೆಂಬಲಿಸಬೇಕಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಭ್ಯರ್ಥಿ ಎಚ್.ವಿಶ್ವನಾಥ್ ಈ ಹಿಂದೆ ಶಿಕ್ಷಣ ಮಂತ್ರಿಯಾಗಿ, ಸಹಕಾರ ಸಚಿವರಾಗಿ ಕೊಡುಗೆ ನೀಡಿದ್ದಾರೆ. ನಮ್ಮ ಜನಾಂಗದ ಪರವಾಗಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ಹೆಚ್ಚಿನ ಮತ ನೀಡಿ ಭಾರಿ ಅಂತರದಿಂದ ಗೆಲ್ಲಿಸಲು ಎಲ್ಲರೂ ಸಹಕರಿಸಬೇಕು ಎಂದು ಕೋರಿದರು. ಪದಾಧಿಕಾರಿಗಳಾದ ವೆಂಕಟಯ್ಯ, ಅರವಿಂದ್ ಉದಯಗಿರಿ, ವೆಂಕಟೇಶ್ ಹಿನಕಲ್, ಜವರಪ್ಪ, ಶಿವಲಿಂಗನಾಯಕ ಹಿನಕಲ್ ಇದ್ದರು.
ಟಿ. ನರಸೀಪುರಕ್ಕೆ ಈಶ್ವರಪ್ಪ ಇಂದು
ಟಿ. ನರಸೀಪುರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಏ.3ರ ಸಂಜೆ 5ಕ್ಕೆ ಇಲ್ಲಿಗೆ ಆಗಮಿಸುವರು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಮಾತನಾಡಿದ ಅವರು, ಲಿಂಕ್ ರಸ್ತೆ ಬಳಿ ಇರುವ ಹಳೇ ಹೆರಿಗೆ ಆಸ್ಪತ್ರೆ ಆವರಣದಲ್ಲಿ ನಡೆಯಲಿರುವ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಈಶ್ವರಪ್ಪ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಪರ ಮತಯಾಚಿಸುವರು. ಅವರೊಂದಿಗೆ ಮಾಜಿ ಸಚಿವಸೋಮಣ್ಣ, ಶಾಸಕ ಸಿದ್ದರಾಜು, ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

