ವೃತ್ತಿಪರತೆ ಬೆಳೆಸಿಕೊಳ್ಳುವುದು ಅಗತ್ಯ
ಕ.ಪ್ರ.ವಾರ್ತೆ ಮೈಸೂರು ಏ. 2
ಪೊಲೀಸರು ವೃತ್ತಿಪರತೆ ಬೆಳೆಸಿಕೊಂಡು ಜನರ ಆಶೋತ್ತರ ಈಡೇರಿಸುವ ಅಗತ್ಯವಿದೆ ಎಂದು ನಿವೃತ್ತ ಡಿಜಿಪಿ ಡಾ. ಅಜಯ್ ಕುಮಾರ ಸಿಂಗ್ ಸಲಹೆ ನೀಡಿದರು.
ನಗರ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸ್, ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಕೆಎಸ್ಆರ್ಪಿ 5ನೇ ಪಡೆ ಸಂಯುಕ್ತವಾಗಿ ಬುಧವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ವಂದನೆ ಸ್ವೀಕರಿಸಿ ಮಾತನಾಡಿದರು.
ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ ಶಾಂತಿ ನೆಲೆಸುವಂತೆ ಮಾಡುವುದು ಪೊಲೀಸ್ ಇಲಾಖೆಯ ಕರ್ತವ್ಯ. ಇದಕ್ಕಾಗಿ ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ಅಧಿಕಾರ ಇರುವುದು ಜವಾಬ್ದಾರಿ ನಿರ್ವಹಿಸಲಿಕ್ಕೆ ಮಾತ್ರ ಎಂಬ ಅರಿವು ಪೊಲೀಸರಿಗೆ ಇರಬೇಕು. ನಿಷ್ಪಕ್ಷಪಾತ ತನಿಖೆ, ಪ್ರಾಮಾಣಿಕತೆಯನ್ನು ಪೊಲೀಸರಿಂದ ಸಮಾಜ ನಿರೀಕ್ಷಿಸುತ್ತದೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಶೇ.80 ಪೇದೆಗಳಿದ್ದು, ಇವರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಅಧಿಕಾರಿಗಳು ನಡೆದುಕೊಳ್ಳಬೇಕು. ಅಧಿಕಾರಶಾಹಿ ವ್ಯವಸ್ಥೆ ಇರುವುದು ಸಮರ್ಪಕ ಕೆಲಸ ನಿರ್ವಹಣೆಗೆ ಹೊರತು ದಬ್ಬಾಳಿಕೆ ಮಾಡಲಲ್ಲ. ಪೇದೆಗಳು ಆರೋಗ್ಯವಾಗಿದ್ದರೆ ಮಾತ್ರ ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಸಿಬ್ಬಂದಿ ಕೊರತೆಯಿಂದ ಕೆಳ ಹಂತದವರ ಮೇಲೆ ಒತ್ತಡ ಹೆಚ್ಚು. ಈ ಸಮಸ್ಯೆ ಸರಿದೂಗಿಸಲು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪೇದೆಗಳ ಸಲಹೆಯನ್ನೂ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಉತ್ತಮ ಅಭಿಪ್ರಾಯ ಇಲ್ಲ: ಪೊಲೀಸರು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಇಲಾಖೆಯ ಬಗೆಗೆ ಜನತೆಯಲ್ಲಿ ಉತ್ತಮ ಅಭಿಪ್ರಾಯ ಇಲ್ಲ. ಸಮಾಜದ ಪ್ರೀತಿ, ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಪಾರದರ್ಶಕ ವ್ಯವಸ್ಥೆ, ನಿಕಟ ಸಂಪರ್ಕ ಬೆಳೆಸಿಕೊಳ್ಳುವುದು ಮುಖ್ಯ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಪೊಲೀಸ್ ವ್ಯವಸ್ಥೆ ಅತ್ಯುತ್ತಮವಾಗಿದೆ. ಹಲವು ಜನಪರ ಕೆಲಸ ಮಾಡಿದರೂ ಇಲಾಖೆಯ ಬಗ್ಗೆ ನಿರೀಕ್ಷಿತ ಮಟ್ಟದ ಉತ್ತಮ ಅಭಿಪ್ರಾಯ ಸಮಾಜದಲ್ಲಿಲ್ಲ. ಪೊಲೀಸರ ಭ್ರಷ್ಟಾಚಾರ, ದುರ್ನಡತೆ ಹಾಗೂ ಮಾನವಹಕ್ಕು ಉಲ್ಲಂಘನೆಯೇ ಇದಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ ಆಂತರಿಕ ಭದ್ರತೆಗೆ ಪೊಲೀಸರು 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ವರ್ಷ ಕಾನೂನು ಬಾಹಿರ ಶಕ್ತಿಗಳಿಗೆ 800 ಮಂದಿ ಪೊಲೀಸರು ಬಲಿಯಾಗುತ್ತಿದ್ದಾರೆ. ಅವರ ತ್ಯಾಗ, ಬಲಿದಾನಗಳಿಗೆ ಜನ ಗೌರವಿಸಬೇಕು. ಪೊಲೀಸ್ ಇಲಾಖೆಯನ್ನು ನೋಡುವ ದೃಷ್ಟಿಕೋನ ಬದಲಾಯಿಸಿಕೊಳ್ಳಬೇಕು ಎಂದು ಕೋರಿದರು.
ಇದೇ ವೇಳೆ ಇಲಾಖೆಯಿಂದ ನಿವೃತ್ತರಾದ ಬಿ.ಎನ್. ಗಂಡೂರಾವ್, ಕಮಲಮ್ಮ (ನಗರ ಘಟಕ), ಮೊಹಮ್ಮದ್ ದಸ್ತಗಿರಿ ಸಾಬ್, ಎನ್. ಸುಧಾಮಣಿ (ಜಿಲ್ಲಾ ಘಟಕ), ಬಿ.ಎಂ. ತಮ್ಮಯ್ಯ (ಕೆಎಸ್ಆರ್ಪಿ), ಜೆ.ಡಿ. ಪ್ರಕಾಶ್ (ಕೆಪಿಎ), ಟಿ.ಸಿ. ಹನುಮಪ್ಪ, ಎಂ. ಮರಿಯಪ್ಪ, ಬಸವರಾಜು (ಅಶ್ವಾರೋಹಿ ದಳ), ಬಿ. ಮಲ್ಲಯ್ಯ (ಸಿಎಆರ್ ಘಟಕ) ಅವರನ್ನು ಅತಿಥಿಗಳು ಸನ್ಮಾನಿಸಿದರು.
ದಕ್ಷಿಣ ವಲಯದ ಐಜಿಪಿ ಡಾ.ಕೆ. ರಾಮಚಂದ್ರರಾವ್, ಕೆಪಿಎ ನಿರ್ದೇಶಕ ಎ.ಎಸ್.ಎನ್. ಮೂರ್ತಿ, ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿಗಳಾದ ಎ.ಎನ್. ರಾಜಣ್ಣ, ಎಂ.ಎಂ. ಮಹದೇವಯ್ಯ, ಎಸ್ಪಿ ಅಭಿನವ್ ಅಶೋಕ್ ಖರೆ, ಕೆಪಿಎ ಉಪ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ, ಕೆಎಸ್ಆರ್ಪಿ 5ನೇ ಪಡೆ ಕಮಾಂಡೆಂಟ್ ರಾಮೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

