ಜಾಗತೀಕರಣದಲ್ಲಿ ಹಣ ಗಳಿಕೆಗೆ ಪ್ರಾಶಸ್ತ್ಯ
ಕ.ಪ್ರ.ವಾರ್ತೆ ಮೈಸೂರು ಏ. 6
ಇತ್ತೀಚಿನ ದಿನಗಳಲ್ಲಿ ಸಂಬಂಧಗಳನ್ನು ಹಣದಿಂದ ಅಳೆಯುವಂತಾಗಿದ್ದು, ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡುತ್ತಿಲ್ಲ ಎಂದು ಮಂಗಳೂರಿನ ಹಂಪನಕಟ್ಟೆ ವಿವಿಯ ಆಂಗ್ಲ ಭಾಷಾ ವಿಭಾಗದ ಪ್ರೊ.ಪಟ್ಟಾಭಿರಾಮ ಸೋಮಯಾಜಿ ವಿಷಾದಿಸಿದರು.
ಕುಂಚಿಟಿಗರ ಸಂಘದ ಧರ್ಮಪರಾಯಣಿ ಶ್ರೀಮತಿ ಆಲಮ್ಮನವರ ವಿದ್ಯಾರ್ಥಿನಿಲಯದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಟಿ.ಆರ್. ಪ್ರಕೃತಿ, ಟಿ.ಆರ್. ತ್ರಿಣೇಶ್ ಹಾಗೂ ಬಿ.ಇ. ಭಾನುಪ್ರಕಾಶ್ ಅವರ ಸೇವೆಗಳ ನಿರ್ವಹಣೆ ಹಾಗೂ ವ್ಯಾಪಾರ ಮೂಲಸೌಲಭ್ಯ ನಿರ್ವಹಣೆ ಎಂಬ ಎರಡು ಆಂಗ್ಲಭಾಷೆಯ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಾಗತೀಕರಣ ಭರಾಟೆಯಲ್ಲಿ ಹಣ ಗಳಿಕೆಯೇ ಮುಖ್ಯವಾಗಿದೆ. ಮನುಷ್ಯನಲ್ಲಿನ ಮಾನವೀಯ ಮೌಲ್ಯಗಳು ಊರ್ಜಿತವಾಗುತ್ತಿಲ್ಲ. ಎಲ್ಲಕ್ಕೂ ಬೆಲೆ ಕಟ್ಟಿ ನಾಶಗೊಳಿಸಲಾಗುತ್ತಿದೆ. ಎಲ್ಪಿಜಿ (ಉದಾರೀಕರಣ, ಖಾಸಗೀಕರಣ, ಜಾಗತೀಕರಣ) 1990ರಲ್ಲಿ ದೇಶಕ್ಕೆ ಕಾಲಿಟ್ಟ ಮೇಲೆ ನಮ್ಮ ಸಮಾಜದ ಸಂರಚನೆಯೇ ಬದಲಾಗಿದೆ. ಜಾಗತೀಕರಣ ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುವಷ್ಟರ ಮಟ್ಟಿಗೆ ಗಟ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಭಿವೃದ್ಧಿಯಲ್ಲ: ಜಾಗತೀಕರಣ ಎಂದರೆ ಅಭಿವೃದ್ಧಿಯಲ್ಲ. ಎಷ್ಟೋ ಮಂದಿ ಈ ವಿಚಾರವಾಗಿ ಗೊಂದಲದಲ್ಲಿದ್ದು, ಜನರನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ. ನಮಗೆ ಬೇಕಿರುವುದು ದೊಡ್ಡ ದೊಡ್ಡ ಬಂಗಲೆಯಲ್ಲ. ಬದಲಾಗಿ ಪ್ರತಿಸ್ಪಂದನೆ. ಎಲ್ಲರೊಡನೆ ಒಟ್ಟಾಗಿ ಸೇರಿ ಬಾಳುವ ವಿವೇಕ. ಅಭಿವೃದ್ಧಿ ಹೆಸರಿನಲ್ಲಿ ಮಾನವ ಸಂಬಂಧಗಳನ್ನು ಒಡೆಯಬಾರದು ಎಂದು ಮನವಿ ಮಾಡಿದರು.
ಹಳ್ಳಿಗಳ ದೇಶ ಎನಿಸಿರುವ ಭಾರತದಲ್ಲಿ ಜಾತಿಯ ಆಧಾರದ ಮೇಲೆ ಉದ್ಯಮಗಳು ನೆಲೆಗೊಂಡಿದ್ದವು. ಜಾಗತೀಕರಣ ಪ್ರವೇಶದಿಂದ ಇವುಗಳ ಬುಡಕ್ಕೆ ಕೊಡಲಿಪೆಟ್ಟು ಬಿದ್ದಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಅವನತಿಯ ಹಾದಿ ಹಿಡಿದಿವೆ. ಬಂಡವಾಳ ಶಾಹಿಗಳ ಮಾರ್ದನಿ ಹೆಚ್ಚಾಗುತ್ತಿದ್ದು, ಸಂಸ್ಕೃತಿಯ ಸರ್ವನಾಶಕ್ಕೆ ಎಡೆ ಮಾಡಿಕೊಡುತ್ತಿವೆ. ಸಾಮಾನ್ಯ ಜನರಿಗೆ ತೆರಿಗೆ ವಿಧಿಸುವ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ 10 ವರ್ಷಗಳ ವಿನಾಯಿತಿ ನೀಡಿದೆ. ಇದು ಯಾವ ಪುರುಷಾರ್ಥಕ್ಕಾಗಿ ಎಂಬುದೇ ಅರ್ಥವಾಗುತ್ತಿಲ್ಲ ಎಂದರು. ಡಿ.ಬನುಮಯ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಜಯದೇವ, ಕುಂಚಿಟಿಗರ ಸಂಘದ ಅಧ್ಯಕ್ಷ ಡಾ.ಎಂ.ಎನ್. ನರಸಿಂಹಣ್ಣ, ಕಾರ್ಯದರ್ಶಿ ಆರ್.ರಘು, ಪದಾಧಿಕಾರಿ ಎಸ್.ಚಂದ್ರಪ್ಪ, ಪುಸ್ತಕಗಳ ಕರ್ತೃಗಳಾದ ಟಿ.ಆರ್. ಪ್ರಕೃತಿ, ಟಿ.ಆರ್. ತ್ರಿಣೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

