ಮೈಸೂರು

ಸಂಗೀತಗಾರರಿಗೆ ಸಾಹಿತ್ಯ ಜ್ಞಾನ ಅಗತ್ಯ

Published On :

ಕ.ಪ್ರ.ವಾರ್ತೆ ಮೈಸೂರು ಏ. 9
ಯಾವುದೇ ಸಂಗೀತಗಾರರಿಗೆ ಸಾಹಿತ್ಯ ಜ್ಞಾನವೂ ಅವಶ್ಯಕ ಎಂದು ಕರ್ನಾಟಕ ಸಂಸ್ಕೃತ ವಿವಿಯ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಹೇಳಿದರು.
ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕನ್ನಡ- ಪ್ರದರ್ಶಕ ಕಲೆಗಳು (ಸಂಗೀತ, ನೃತ್ಯ) ಎಂಬ ವಿಷಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ಧಾತು ಹಾಗೂ ಸಾಹಿತ್ಯ ಮಾತು ಇದ್ದಂತೆ. ಅವೆರಡರ ಸಂಗಮವೂ ಅವಶ್ಯಕ. ಸಂಗೀತ ಹಾಗೂ ನೃತ್ಯಗಾರರಿಗೆ ಸಾಹಿತ್ಯದ ಪರಿಚಯ ಇರಬೇಕು. ಸಾಹಿತ್ಯದ ಸಂಪೂರ್ಣ ಅರಿವು ಇಲ್ಲದೆ ಸಂಗೀತದ ಖಚಿತತೆಯ ಸಾಧನೆ ಆಸಾಧ್ಯ. ಹಾಗೆಯೇ ಇದು ಅಂತರ್ಶಿಸ್ತ್ರೀಯ ಅಧ್ಯಯನವೂ ಆಗಿದೆ ಎಂದರು.
1987 ರಲ್ಲಿ ಸಂಗೀತ ವಿದ್ವಾಂಸ ವಾಸುದೇವಾಚಾರ್ಯರು ಆಕಾಶವಾಣಿ ಸಂದರ್ಶನವೊಂದರಲ್ಲಿ ಸಂಗೀತ ಮತ್ತು ಸಾಹಿತ್ಯ ಸಮಾಗಮ ಹಾಗೂ ಸಂಗೀತಗಾರನಿಗೆ ಸಾಹಿತ್ಯ ಅರಿವು ಕುರಿತು ನುಡಿದದ್ದನ್ನು ಸ್ಮರಿಸಬಹುದು. ಅಂತೆಯೇ ಯಾವುದಾದರೂ ಒಂದು ಭಾಷೆಯ ಅರಿವಿರಬೇಕು ಹಾಗೂ ಭಾಷೆಯ ಸೂಕ್ಷ್ಮ ಅಂತರಂಗದ ತಿಳಿವಳಿಕೆ ಉಳ್ಳವರಾಗಿರಬೇಕು ಎಂದು ತಿಳಿಸಿದರು.
ಸಂಸ್ಕೃತಿ ತಿಳಿದಿರಬೇಕು: ಕನ್ನಡ ಹಾಗೂ ಸಂಸ್ಕೃತದಲ್ಲಿ ಅನೇಕ ಸಂಗೀತ ರಚನೆಗಳಿವೆ. ದೀಕ್ಷಿತರ ರಚನೆ ತಿಳಿಯಬೇಕಾದರೆ ಸಂಸ್ಕೃತ ಗೊತ್ತಿರಬೇಕು. ಭಾಗವತರ ಕೃತಿ ಅರಿಯಬೇಕಾದರೆ ತೆಲುಗಿನ ಭಾಷೆ ಅರಿತಿರಬೇಕು. ಕೇವಲ ಪ್ರದರ್ಶಕ ಕಲೆಗಳು ಗೊತ್ತಿದ್ದರೆ ಸಾಲದು. ಅದಕ್ಕೆ ಕಾರಣವಾಗಿರುವ ಸಾಹಿತ್ಯವೂ ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಅಧ್ಯಾಪಕ ಹೊಂದುವುದು ಅವಶ್ಯಕ ಎಂದರು.
ಮೈಸೂರು ವಿವಿಯ ಲಲಿತ ಕಲೆಗಳ ಕಾಲೇಜಿನ ಪ್ರಾಂಶುಪಾಲೆ ಡಾ.ಆರ್.ಎನ್. ಶ್ರೀಲತಾ ಆಶಯ ನುಡಿಗಳಾಡಿದರು. ಕುಲಸಚಿವ ಪ್ರೊ.ವೈ.ಎಸ್. ಸಿದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾಂಗ ಕುಲಸಚಿವ ಡಾ.ಎಂ.ಎಸ್. ಶೇಖರ್ ಸ್ವಾಗತಿಸಿದರು. ಹಾ.ಮ. ನಟರಾಜ್ ನಿರೂಪಿಸಿದರು.
ನಂತರ ನಡೆದ ವಿಚಾರ ಸಂಕಿರಣದಲ್ಲಿ ಕನ್ನಡ ಸಂಪ್ರದಾಯವನ್ನು ಪ್ರತಿನಿಧಿಸುವ ಸಂಗೀತಶಾಸ್ತ್ರ ಗ್ರಂಥಗಳು ಎಂಬ ವಿಷಯ ಕುರಿತು ಡಾ.ಆರ್.ಎನ್. ಶ್ರೀಲತಾ, ಕರ್ನಾಟಕದಲ್ಲಿ ಸಂಗೀತ ನಡೆದು ಬಂದ ಘಟ್ಟಗಳು ಎಂಬ ವಿಷಯ ಕುರಿತು ಡಾ.ಸರ್ವಮಂಗಳಾ ಶಂಕರ್, ಕನ್ನಡ ಸಾಹಿತ್ಯವನ್ನು ಸಂಗೀತದಲ್ಲಿ ಅಳವಡಿಸುವಿಕೆ ಎಂಬ ವಿಷಯ ಕುರಿತು ಡಾ.ಸುಕನ್ಯಾ ಪ್ರಭಾಕರ್, ಕರ್ನಾಟಕ ನೃತ್ಯ ಸಂಪ್ರದಾಯವನ್ನು ಪ್ರತಿನಿಧಿಸುವ ಸಂಗೀತಶಾಸ್ತ್ರ ಗ್ರಂಥಗಳು ಎಂಬ ವಿಷಯ ಕುರಿತು ಡಾ.ಶೀಲಾ ಶ್ರೀಧರ್, ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ನೃತ್ಯ ಪ್ರಸಂಗಗಳು ಎಂಬ ವಿಷಯ ಕುರಿತು ಡಾ.ತುಳಸಿ ರಾಮಚಂದ್ರ ಹಾಗೂ ಆಧುನಿಕ ಕನ್ನಡ ಸಾಹಿತ್ಯದ ನರ್ತನ ರೂಪಾಂತರ ಸಾಧ್ಯತೆಗಳು ಎಂಬ ವಿಷಯ ಕುರಿತು ಡಾ.ವಿ. ಲಲಿತಾ ಶ್ರೀನಿವಾಸನ್ ಪ್ರಬಂಧ ಮಂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.