ಮೈಸೂರು

ಗೆದ್ರೂ-ಸೋತ್ರೂ 'ಕೈ' ಸಾಮೂಹಿಕ ಹೊಣೆ

Published On :

ಕ.ಪ್ರ.ವಾರ್ತೆ ಮೈಸೂರು ಏ. 14
ನರೇಂದ್ರ ಮೋದಿ ಅಲೆ ಎಲ್ಲಿದೆ ಅಂತ ಹುಡುಕುತ್ತಿದ್ದೇನೆ. ಇನ್ನೂ ನನಗೆ ಮೋದಿ ಅಲೆ ಸಿಕ್ಕಿಲ್ಲ, ಕಾಣುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವ್ಯಂಗ್ಯವಾಡಿದರು.
ಮೈಸೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ದೇಶದಲ್ಲಿ ಕಾಂಗ್ರೆಸ್ ಅಲೆ ಇದೆ ಎಂದು ಹೇಳುತ್ತಿಲ್ಲ. ಮೋದಿ ಅಲೆ ಎಲ್ಲಿದೆ ಅಂತ ಗೊತ್ತಿಲ್ಲ. ಯಾವುದೇ ಅಲೆ ಇಲ್ಲ ಎಂದರು.
ರಾಷ್ಟ್ರೀಯ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಚುನಾವಣೆಯಲ್ಲಿ ಸೋತರೂ- ಗೆದ್ದರೂ ಕಾಂಗ್ರೆಸ್ ಸಾಮೂಹಿಕ ಹೊಣೆ ಹೊರುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ಥಳೀಯ ವಿಚಾರಗಳು ಪ್ರಸ್ತುತವಾಗುತ್ತವೆ. ನಮ್ಮ ದೇಶದ ಚುನಾವಣೆಯನ್ನು ಇಡೀ ವಿಶ್ವವೇ ನೋಡುತ್ತಿದೆ. 2004, 2009ರಲ್ಲಿ ಕಾಂಗ್ರೆಸ್ ಸತ್ವ ಪರೀಕ್ಷೆ ಎದುರಿಸಿ ಸರ್ಕಾರ ರಚಿಸಿತ್ತು. ಮತ್ತೊಮ್ಮೆ ಸರ್ಕಾರ ಮಾಡಲು ರಾಹುಲ್‌ಗಾಂಧಿ ಅವರು ಮುಂಚೂಣಿಯಲ್ಲಿ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಎಚ್. ವಿಶ್ವನಾಥ್ ಅವರು ಮತ್ತೊಮ್ಮೆ ಸಂಸತ್‌ಗೆ ಹೋಗಬೇಕು. ಇದಕ್ಕಾಗಿ ಅವರಿಗೆ ಜನ ಮತ ನೀಡಿ ಬೆಂಬಲಿಸಬೇಕು. ವಿಶ್ವನಾಥ್ ನನ್ನ ಮಂತ್ರಿಮಂಡಲದಲ್ಲಿ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು.
ನರೇಂದ್ರ ಮೋದಿ ಮತ್ತು ಎಚ್.ಡಿ. ದೇವೇಗೌಡ ಅವರು ಪರಸ್ಪರ ನೀಡಿರುವ ಹೇಳಿಕೆಗಳ ಒಳಹೊಕ್ಕು ನೋಡಬೇಕಿದೆ. ಅವರ ಪರಸ್ಪರ ಹೇಳಿಕೆಗಳಿಗೆ ನನ್ನ ಪ್ರತಿಕ್ರಿಯೆ ಅಪ್ರಸ್ತುತ. ನಾವು (ಕಾಂಗ್ರೆಸ್) ಗೆದ್ದರೂ, ಸೋತರೂ ಮೈಸೂರಿಗೆ ಬರುತ್ತೇವೆ ಎನ್ನುವ ಮೂಲಕ ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿದರು. ಕಾಂಗ್ರೆಸ್ ನಾಯಕರು ಯಾವುದೇ ಕೋಮಿನ ಆಧಾರದ ಮೇಲೆ ಬಂದವರಲ್ಲ. ಯಾರ ಅನುಕಂಪವು ಬೇಕಿಲ್ಲ. ಮಂಡ್ಯದಲ್ಲಿ ಹುಟ್ಟಿ ಬೆಳೆದು, ರಾಜಕೀಯ ಮಾಡಿದ್ದೇನೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಕಳೆದ 10 ತಿಂಗಳಲ್ಲಿ ಬಹಳ ಚೆನ್ನಾಗಿ ಕೆಲಸ ಮಾಡಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿ ಚುನಾವಣೆಯಲ್ಲಿ ವೈಯಕ್ತಿಕ ನಿಂದನೆ ಮಾಡಲಾಗುತ್ತಿದ್ದು, ಇದನ್ನು ಬಿಡಬೇಕಿದೆ. ಸರ್ಕಾರ ಬದಲಾದರೂ ಸಹ ನಮ್ಮ ದೇಶದ ವಿದೇಶಿ ನೀತಿಗಳು ಬದಲಾಗುವುದಿಲ್ಲ. ನಮ್ಮ ವಿದೇಶಿ ನೀತಿಯು ವಿಫಲವಾಗಿಲ್ಲ. ನಮ್ಮ ನೀತಿಯಿಂದಾಗಿ ವಿದೇಶಗಳು ಭಾರತದ ಮಾತನ್ನು ಗೌರವದಿಂದ ಕೇಳುತ್ತೀವೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್, ಶಾಸಕರಾದ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ವಾಸು, ಮಾಜಿ ಶಾಸಕರಾದ ಡಿ. ಮಾದೇಗೌಡ, ಮುಕ್ತಾರುನ್ನೀಸಾ ಬೇಗಂ, ನಗರಾಧ್ಯಕ್ಷ ಸಿ. ದಾಸೇಗೌಡ, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ. ಬಸವೇಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮೀನಾ ತೂಗುದೀಪ ಶ್ರೀನಿವಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.