ಮತ ಪ್ರಭು ಓಲೈಕೆಗೆ ಕೊನೆ ಕಸರತ್ತು
ಕ.ಪ್ರ.ವಾರ್ತೆ ಮೈಸೂರು ಏ. 16
ಲೋಕಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಆಮ್ ಆದ್ಮಿ ಪಕ್ಷಗಳ ಅಭ್ಯರ್ಥಿಗಳು ಬುಧವಾರ ಮನೆ ಮನೆಗೆ ತೆರಳಿ ಮತಯಾಚಿಸಿದರು. ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ತಂತ್ರಗಾರಿಕೆಯಲ್ಲಿ ತೊಡಗಿದ್ದರೆ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಮನೆ ಮನೆಗೆ ತೆರಳಿ ಕರಪತ್ರಗಳನ್ನು ಹಂಚಿ ಮತಯಾಚಿಸಿದರು. ನಗರದ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಕರ್ತರು ಮತದಾರರ ಮನೆ ಮನೆಗೆ ಕರಪತ್ರ ಹಂಚಿದರು. ಈ ವೇಳೆ ಜೆಡಿಎಸ್ ನಗರಾಧ್ಯಕ್ಷ ರಾಜಣ್ಣ, ಕೆ.ಆರ್. ಬಂಗಾರಪ್ಪ ಬ್ಲಾಕ್ ಅಧ್ಯಕ್ಷ ಸಂತೋಷ, ಬಸವರಾಜು, ಜೆಡಿಎಸ್ ಸ್ಲಂ ಘಟಕದ ಅಧ್ಯಕ್ಷ ಎಸ್. ನಾಗರಾಜ್, ಉಪಾಧ್ಯಕ್ಷ ಎಸ್. ರವಿಕುಮಾರ್, ಸುಧಾಕರ್, ರಾಧಾಕೃಷ್ಣ, ರಾಮು, ಎಸ್ಬಿಎಂ ಮಂಜು, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಕುಮಾರಿ ಇದ್ದರು. ಆಮ್ ಆದ್ಮಿ ಅಭ್ಯರ್ಥಿ ಎಂ. ವಿ. ಪದ್ಮಮ್ಮ, ಬೋಗಾದಿ, ವಿಜಯನಗರ, ರೂಪಾನಗರ, ರಾಜರಾಜೇಶ್ವರಿ ನಗರ, ಆಂದೋಲನ ವೃತ್ತ, ಕುವೆಂಪುನಗರ, ವಿವೇಕಾನಂದ ವೃತ್ತ, ಶ್ರೀರಾಮಪುರ, ನಾಚನಹಳ್ಳಿಪಾಳ್ಯ, ವಿದ್ಯಾರಣ್ಯಪುರಂ, ಚಾಮುಂಡಿಪುರಂ, ಅಗ್ರಹಾರ,ರಾಮಸ್ವಾಮಿ ವೃತ್ತ, ವಿನಾಯಕನಗರ, ಕಾಳಿದಾಸರಸ್ತೆ ಮತ್ತು ಸಿದ್ಧಾರ್ಥನಗರದಲ್ಲಿ ಬುಧವಾರ ಪ್ರಚಾರ ನಡೆಸಿದರು. ಮನೆ ಮನೆಗೆ ತೆರಳಿ ಮತಯಾಚಿಸುವುದಲ್ಲದೆ, ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರನ್ನು ಭೇಟಿಯಾಗಿ ಮತಯಾಚಿಸಿದರು. ಅಲ್ಲದೆ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಐದು ತಂಡಗಳಾಗಿ ಆಪ್ ಕಾರ್ಯಕರ್ತರು ಮತಯಾಚಿಸಿದರು.
ಬಿಜೆಪಿ ಅಭ್ಯರ್ಥಿ ಮಾತುಕತೆ
ಬಿಜೆಪಿ ಅಭ್ಯರ್ಥಿ ಪ್ರತಾಪ್ಸಿಂಹ, ಬೆಳಗ್ಗೆ ಬಿಜೆಪಿ ಕಚೇರಿಯಲ್ಲಿ ಪಕ್ಷದ ಪ್ರಮುಖರು ಮತ್ತು ವಿವಿಧ ಸಮಾಜದ ಪ್ರಮುಖರನ್ನು ಸಂಪರ್ಕಿಸಿ ಮಾತನಾಡಿದರು. ಕಳೆದ ಒಂದು ತಿಂಗಳಿನಿಂದ ಕ್ಷೇತ್ರದಾದ್ಯಂತ ಸಂಚರಿಸಿ ಪ್ರಚಾರ ನಡೆಸಿದ್ದ ಪ್ರತಾಪ್ಸಿಂಹ ಇಂದು ರಸ್ತೆಗಿಳಿದು ಮತಯಾಚಿಸಲಿಲ್ಲ.
ಕಾಂಗ್ರೆಸ್ ಮತ ಬೇಟೆ
ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್, ನಗರದ ಕೈಗಾರಿಕಾ ಪ್ರದೇಶಕ್ಕೆ ತೆರಳಿ ಮತಯಾಚಿಸಿದರು. ಬಳಿಕ ವಿಶ್ರಾಂತಿಗೆ ಜಾರಿದರು. ಆದರೆ ಪಕ್ಷದ ಕಾರ್ಯಕರ್ತರು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮನೆ ಮನೆಗೆ ತೆರಳಿ ಮತಯಾಚಿಸಿದ್ದಾರೆ. ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಎ. ವೆಂಕಟೇಶ್ ಮತ್ತು ತಂಡದವರು ನಗರದ ಕೆ.ಆರ್. ವೃತ್ತದಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ ಮತಯಾಚಿಸಿದರು. ಮತ್ತೊಂದೆಡೆ ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಪರ ಸಿದ್ದಾರ್ಥನಗರದ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಜೆಡಿಎಸ್ ಮನೆ-ಮನೆ ಭೇಟಿ
ಜೆಡಿಎಸ್ ಅಭ್ಯರ್ಥಿ ಚಾಮುಂಡೇಶ್ವರಿ ಕ್ಷೇತ್ರದ ವಿವಿಧೆಡೆ ತೆರಳಿ ಮತಯಾಚಿಸಿದರು. ಜೆಡಿಎಸ್ನ ಪಾಲಿಕೆ ಸದಸ್ಯರು ಚುನಾವಣಾ ಏಜೆಂಟರ್ಗಳನ್ನು ಸಜ್ಜುಗೊಳಿಸುವುದು ಮತ್ತು ಬಹಿರಂಗ ಪ್ರಚಾರದ ವೇಳೆ ಬಿಟ್ಟುಹೋದ ಬಡಾವಣೆಗೆ ತೆರಳಿ ಮತಯಾಚಿಸಿದರು. ನಗರ ಪಾಲಿಕೆ ಉಪ ಮೇಯರ್ ವಿ. ಶೈಲೇಂದ್ರ ಮತ್ತಿತರರು ನಗರದ ವಿವಿಧ ಬಡಾವಣೆಯ ಸ್ಲಂಗಳ ಮನೆ ಮನೆಗೆ ತೆರಳಿ ಮತಯಾಚಿಸಿದರು. ನಿವೃತ್ತ ನ್ಯಾ.ಚಂದ್ರಶೇಖರಯ್ಯ ಪರ ಮತಚಲಾಯಿಸಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

