ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರ
ಬಿ. ಶೇಖರ್ ಗೋಪಿನಾಥಂ
ಕ.ಪ್ರ.ವಾರ್ತೆ ಮೈಸೂರು ಏ. 18
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ 15 ಅಭ್ಯರ್ಥಿಗಳ ಭವಿಷ್ಯವಿರುವ ಮತಯಂತ್ರಗಳನ್ನು ಸ್ಟ್ರಾಂಗ್ ರೂಮಿನಲ್ಲಿ ಭದ್ರವಾಗಿ ಇರಿಸಲಾಗಿದೆ.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರವಷ್ಟೇ ಮತದಾನ ನಡೆಯಿತು. ಆಯಾ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಡಿಮಸ್ಟರಿಂಗ್ ಕೇಂದ್ರದಲ್ಲಿ ಸಂಗ್ರಹಿಸಿದ ಬಳಿಕ ಎಲ್ಲ ಮತಯಂತ್ರಗಳನ್ನು ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಎಸ್ಜೆಸಿಇ ಸುವರ್ಣ ಮಹೋತ್ಸವ ಭವನಕ್ಕೆ ತರಲಾಗಿದೆ.
ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳ ಮತದಾರರು ಮತದಾನ ಮಾಡಿರುವ ಮತಯಂತ್ರಗಳನ್ನು ಪ್ರತ್ಯೇಕವಾಗಿ 8 ಕೊಠಡಿಗಳಲ್ಲಿ ಇರಿಸಿ, ಬಿಗಮುದ್ರೆ ಹಾಕಲಾಗಿದೆ.
ಮೇ 16ರ ಬೆಳಗ್ಗೆ 8 ರಿಂದ ಎಸ್ಜೆಸಿಇ ಸುವರ್ಣ ಮಹೋತ್ಸವ ಭವನದಲ್ಲಿ ಮತ ಎಣಿಕೆ ನಡೆಯಲಿದ್ದು, ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಸಿ.ಶಿಖಾ, ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಮತ್ತು ಇತರೆ ಅಧಿಕಾರಿಗಳು ಮತಯಂತ್ರಗಳನ್ನು ಇರಿಸಲಾಗಿರುವ ಎಸ್ಜೆಸಿಇ ಸುವರ್ಣ ಮಹೋತ್ಸವ ಭವನಕ್ಕೆ ಶುಕ್ರವಾರ ಭೇಟಿ ನೀಡಿ, ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು.
120 ಸಿಬ್ಬಂದಿ, ಸಿಸಿ ಕ್ಯಾಮರಾ: ಮತಯಂತ್ರಗಳನ್ನು ಎಸ್ಜೆಸಿಇ ಸುವರ್ಣ ಮಹೋತ್ಸವ ಭವನದಲ್ಲಿ ಮೂರು ಸ್ತರದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮೊದಲ ಸ್ತರದಲ್ಲಿ ಅಂದರೆ ಸ್ಟ್ರಾಂಗ್ ರೂಂ ಬಳಿ ಸಿಐಎಸ್ಎಫ್ ಸಿಬ್ಬಂದಿ, ಎರಡನೆ ಸ್ತರದಲ್ಲಿ ಕೆಎಸ್ಆರ್ಪಿ ಹಾಗೂ ಮೂರನೇ ಸ್ತರದಲ್ಲಿ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ. ಮತಯಂತ್ರಗಳ ಭದ್ರತೆಗಾಗಿ ಒಟ್ಟು 120 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ 24 ಗಂಟೆಯೂ ನಿಯೋಜಿಸಲಾಗಿದೆ. ಜೊತೆಗೆ 30 ಸಿಸಿ ಕ್ಯಾಮರಾಗಳನ್ನು ಸಹ ಅಳವಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದರು.
ಅಭ್ಯರ್ಥಿಗಳು...: ಎಚ್. ವಿಶ್ವನಾಥ್ (ಕಾಂಗ್ರೆಸ್), ಚಂದ್ರಶೇಖರಯ್ಯ (ಜೆಡಿಎಸ್), ಪ್ರತಾಪ್ ಸಿಂಹ (ಬಿಜೆಪಿ), ಸಿ. ಮೋಹನ್ಕುಮಾರ್ (ಬಿಎಸ್ಪಿ), ತಿಮ್ಮೇಗೌಡ (ಸರ್ವ ಜನತಾ ಪಕ್ಷ), ಡಿ.ಎಸ್. ನಿರ್ವಾಣಪ್ಪ (ಸಿಪಿಐಎಂಎಲ್), ಎಂ.ವಿ. ಪದ್ಮಮ್ಮ (ಎಎಪಿ), ಎಸ್.ಪಿ. ಮಹದೇವಪ್ಪ (ಜೆಡಿಯು), ರತಿ ಪೂವಯ್ಯ (ಕರುನಾಡು ಪಕ್ಷ), ಹುಣಸೂರು ಕೆ. ಚಂದ್ರಶೇಖರ್ (ಡೆಮಾಕ್ರಟಿಕ್ ಪ್ರಜಾಕ್ರಾಂತಿ ಪಾರ್ಟಿ ಸೆಕ್ಯೂಲರಿಸ್ಟ್), ಪಕ್ಷೇತರ ಅಭ್ಯರ್ಥಿಗಳಾಗಿ ಡಿ. ಈಶ್ವರ್ ತೊರೆಮಾವು, ಬನ್ನೂರು ಕುಮಾರ್, ಎಂ.ಎಸ್. ಪ್ರವೀಣ್, ಬೋಜಣ್ಣ ಸೋಮಯ್ಯ ಹಾಗೂ ಎನ್. ಸಂಪತ್ತು ಸ್ಪರ್ಧಿಸಿದ್ದು, ಇವರ ಭವಿಷ್ಯವು ಮೇ 16 ರಂದು ನಿರ್ಧಾರವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

