ಸೆಸ್ಕ್ ವಿರುದ್ಧ ಬೃಹತ್ ಪ್ರತಿಭಟನೆ
ಕ.ಪ್ರ.ವಾರ್ತೆ ಸಾಲಿಗ್ರಾಮ ಏ.19
ಸೆಸ್ಕ್ ಕಚೇರಿಗೆ ಸೇರಿದ ವಿದ್ಯುತ್ ಪರಿಕರಗಳನ್ನು ಅಧಿಕಾರಿಗಳು ಕದ್ದು ಮಾರಿಕೊಳ್ಳುವ ಮೂಲಕ, ಇಲಾಖೆಗೆ ಮತ್ತು ರೈತರಿಗೆ ಅನ್ಯಾಯವೆಸಗಿದ್ದಾರೆಂದು ಶ್ರೀ ಗುರುರಾಘವೇಂದ್ರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಸಾ.ರಾ. ನಂದೀಶ್ ಆರೋಪಿಸಿದರು.
ಪಟ್ಟಣದ ಸೆಸ್ಕ್ ಕಚೇರಿ ಮುಂದೆ ಶನಿವಾರ ಅಧಿಕಾರಿಗಳ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕಚೇರಿಗೆ ಸಾಲಿಗ್ರಾಮ ಹಾಗೂ ಸುತ್ತಮುತ್ತಲ ಹತ್ತಾರು ಗ್ರಾಮಗಳ ರೈತರು ತಮಗಾಗುತ್ತಿರುವ ವಿದ್ಯುತ್ ಸಮಸ್ಯೆ ಬಗ್ಗೆ ದೂರು ನೀಡಲು ಹೋದರೆ ಅವರೊಂದಿಗೆ ಸೌಜನ್ಯದಿಂದ ವರ್ತಿಸುವುದಿಲ್ಲ. ಇದರ ಬದಲಾಗಿ ಕಚೇರಿಯೇ ಲಂಚಮಯವಾಗಿ ರೂಪುಗೊಂಡು ಯಾರು ಹಣ ಕೊಡುತ್ತಾರೋ ಅಂತಹವರಿಗೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆಂದು ದೂರಿದರು.
ಈ ಭಾಗಗಳಲ್ಲಿ ಹಲವು ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು ಕೆಟ್ಟು ಹಲವು ತಿಂಗಳುಗಳೇ ಕಳೆದರೂ ಯಾವುದೇ ಅಧಿಕಾರಿಗಳು ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಅದಕ್ಕೂ ನಮಗೂ ಸಂಬಂಧವಿಲ್ಲವೆಂಬಂತೆ ತಮ್ಮ ಕಾರ್ಯವೈಖರಿ ಮಾಡುತ್ತಿದ್ದು, ಇದರಿಂದ ರೈತರು ಬೆಳೆಗಾಗಿ ಮಾಡಿರುವ ಸಾಲದ ಶೂಲಕ್ಕೆ ಸಿಲುಕಿ ನಲುಗುತ್ತಿದ್ದಾರೆ. ಇಂತಹ ಅವಘಡಗಳಿಗೆ ಕಾರಣರಾಗಿರುವ ಅಧಿಕಾರಿಗಳು ತಕ್ಷಣವೇ ಕಾರ್ಯೋನ್ಮುಖರಾಗಿ ಸಮರ್ಪಕ ವಿದ್ಯುತ್ ಸರಬರಾಜು ಕಾರ್ಯಕ್ಕೆ ಹಾಗೂ ಕೆಟ್ಟಿರುವ ಟ್ರಾನ್ಸ್ಫಾರ್ಮರ್ಗಳ ಬದಲಾವಣೆಗೆ ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಲಾಖಾ ಅಧಿಕಾರಿಗಳ ನಿವಾಸದ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹಿಗ್ಗಾಮುಗ್ಗಾ ತರಾಟೆ: ವಿವಿಧ ಭಾಗದಿಂದ ಆಗಮಿಸಿದ ರೈತರು ಸೆಸ್ಕ್ ಅಧಿಕಾರಿಗಳನ್ನು ಗಂಗಾಕಲ್ಯಾಣ ಯೋಜನೆ, ಕುಡಿಯುವ ನೀರಿಗೆ ಸಂಬಂಧಿಸಿದ ವಿಷಯಗಳ ಕುರಿತು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಪಟ್ಟಣದ ಗಾಂಧೀಚೌಕದಲ್ಲಿ ಸಮಾವೇಶಗೊಂಡ ನೂರಾರು ಪ್ರತಿಭಟನಾಕಾರರು, ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಸ್ ನಿಲ್ದಾಣ, ಮಿರ್ಲೆ ರಸ್ತೆಯ ಮೂಲಕ ಮೆರವಣಿಗೆ ತೆರಳಿ, ಸೆಸ್ಕ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಸೆಸ್ಕ್ ಎಇಇ ಸಿದ್ದಪ್ಪ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ, ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಸರ್ಕಲ್ ಇನ್ಸ್ಪೆಕ್ಟರ್ ಸಿದ್ದಯ್ಯ ಹಾಗೂ ಎಸ್ಐ ಬಿ.ಜಿ. ಮಹೇಶ್ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಗ್ರಾಪಂ ಅಧ್ಯಕ್ಷೆ ರಾಣಿರಾಜಣ್ಣ, ಉಪಾಧ್ಯಕ್ಷ ನಟರಾಜು, ನಿವೃತ್ತ ಉಪನ್ಯಾಸಕ ಎಸ್.ಆರ್. ರಾಮೇಗೌಡ, ಗ್ರಾಪಂ ಸದಸ್ಯರಾದ ಎಸ್.ವಿ. ನಟರಾಜು, ಎಸ್.ಎಸ್. ಜವರೇಗೌಡ, ಸಾ.ರಾ. ಗುರುಪ್ರಸಾದ್, ಅಯಾಜ್, ಎಸ್.ಟಿ. ರೇವಣ್ಣ, ಲಕ್ಷ್ಮೇಗೌಡ, ತಾಪಂ ಸದಸ್ಯ ರವಿ, ಮುಖಂಡರಾದ ಬಾಬು, ಸಾ.ರಾ. ರವೀಶ್, ಹರ್ಷಕುಮಾರ್ಗೌಡ, ಸಾ.ರಾ. ಸತೀಶ್, ಎಸ್.ಬಿ. ಅಶೋಕ್, ಜಾನ್, ಮೂರ್ತಿ, ಎಸ್.ಪಿ. ರಮೇಶ್, ರೈತರು ಹಾಗೂ ಮಹಿಳಾ ಸಂಘಟನೆಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

