ಅಂಬೇಡ್ಕರರ ಜೀವನಗಾಥೆ..
ಕ.ಪ್ರ.ವಾರ್ತೆ , ಮೈಸೂರು , ಏ. 21
ಪುರಾಣ ಪ್ರಸಿದ್ಧ ಕಥೆಗಳನ್ನು ಸಾರುವ ಕೀರ್ತನೆಗಳನ್ನೂ ಕೇಳಿದ್ದೇವೆ, ಶ್ರೀರಾಮ, ಶ್ರೀಕೃಷ್ಣ ಮುಂತಾದ ಮಹನೀಯರ ವೃತ್ತಾಂತ ತಿಳಿಸುವ ಕಥಾಮೃತಗಳಿವೆ. ಅಂತೆಯೇ ರಾಜ ಮಹಾರಾಜರ ಮಹಿಮೆ ತಿಳಿಸುವ ಕೀರ್ತನೆಗಳಿಗೂ ಬರವಿಲ್ಲ. ಹೀಗಿರುವಾಗ ಮಾನವನಾಗಿ ಜನಿಸಿ ನಮ್ಮ ನಡುವೆ ಸಾಧನೆ ಮಾಡಿದ ಮಹನೀಯರ ಕಥಾ ಕೀರ್ತನೆಗಳು ತುಂಬ ಕಡಿಮೆ ಎನ್ನಬಹುದು.
ಕುಗ್ರಾಮವೊಂದರಲ್ಲಿ ಬಡತನದಿಂದ ಜನಿಸಿದ ಭೀಮರಾವ್ ಅವರು ಮುಂದೆ ಈ ದೇಶದ ಸಂವಿಧಾನ ಶಿಲ್ಪಿಯಾದರು. ಇಂತಹ ಸಾಧಕರ ಕುರಿತು ತುಮಕೂರು ಜಿಲ್ಲೆಯ ಮಲ್ಲಸಂದ್ರ ಗ್ರಾಮದ ಡಾ.ಲಕ್ಷ್ಮಣದಾಸ್ ಭೀಮಕಥಾ ಕೀರ್ತನ ಎಂಬ ಕಥೆಯನ್ನು ಕಟ್ಟಿ ದೇಶ, ವಿದೇಶಗಳ ನಾನಾ ಭಾಗಗಳಲ್ಲಿ ಕೀರ್ತನಾ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಅಂಗವಾಗಿ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ಜಯಂತಿ ಕಾರ್ಯಕ್ರಮದಲ್ಲಿ ಅವರ ಭೀಮಕಥಾ ಕೀರ್ತನೆ ಸಭಿಕರ ಕುತೂಹಲಕ್ಕೆ ಕಾರಣವಾಗಿತ್ತು.
ಹರಿಕಥೆ ದಾಸರಂತೆ ತಲೆಗೆ ರುಮಾಲು ಕಟ್ಟಿಕೊಂಡು ಕೈಯಲ್ಲಿ ತಾಳ ಹಿಡಿದು ನಿಂತು, ಬುದ್ಧ ಭಗವಾನರ ಪಾದರವಿಂದಗಳಿಗೆ ನಮನ ಸಲ್ಲಿಸಿ ಕಥೆಯನ್ನು ಆರಂಭಿಸಿದರು...
ಅಂಬೇಡ್ಕರ್ ಶುಭ ಚರಿತನ, ಸಿರಿ ಚರಣಕೆ ವಂದಿಪೆ, ದಿನಮಾನದ ಶೋಷಣೆಯ ಅಳಿಸಲು ಎಲ್ಲೆಲ್ಲಿಯೂ ಸಮಾನತೆ ಶಾಂತಿ ಹರಡಲು, ನಿನ್ನ ತತ್ವ ಚಿಂತನೆಗಳು ದಾರಿ ದೀಪವಾಗಲಿ. ಅನವರತವೂ, ಅನುಕ್ಷಣವೂ ಎಲ್ಲೆಲ್ಲಿಯೂ ಹರಡಲಿ ಎಂಬ ಕೀರ್ತನೆಯೊಂದಿಗೆ ಅವರು ಕಥೆ ಹೇಳ ತೊಡಗಿದರು.
ಒಂದೂವರೆ ಗಂಟೆ ಕಥೆ: ಭೀಮರಾವ್ ಆಗಿ ದಲಿತ ಸಮುದಾಯದಲ್ಲಿ ಜನಿಸಿದ ಬಾಲಕ ಸಮಾಜದ ಎಲ್ಲಾ ಶೋಷಣೆಗಳನ್ನು ಎದುರಿಸಿ ಶಿಕ್ಷಣ ಪಡೆಯುವುದು, ಬಡತನ, ಹಸಿವು ಮುಂತಾದವುಗಳ ನಡುವೆಯೂ ಹಲವು ಪದವಿ ಪಡೆದು ವಿದ್ವಾಂಸರಾಗುವುದು, ಪಾಂಡಿತ್ಯ ಗಳಿಸಿ ರಾಜಕೀಯ ಪ್ರವೇಶಿಸಿ ಸಚಿವರಾಗುವುದು, ಸಂವಿಧಾನ ಶಿಲ್ಪಿಯಾಗುವುದು, ಬೌದ್ಧ ಧರ್ಮ ಸ್ವೀಕರಿಸುವುದು ನಂತರ ಪರಿನಿರ್ವಾಣ ಹೊಂದುವುದರ ತನಕ ಇರುವ ಜೀವನ ಸಾರವನ್ನು ಸುಮಾರು ಒಂದೂವರೆ ಗಂಟೆಗಳ ಕಥೆಯಲ್ಲಿ ಸಾದರಪಡಿಸಿದರು.
ಕೀರ್ತನೆಯ ಮಧ್ಯೆ ಮಧ್ಯೆ ಪ್ರಸ್ತುತ ಸಮಾಜದಲ್ಲಿನ ಅಸ್ಪೃಶ್ಯತೆ, ಜಾತೀಯತೆ, ಗುರು ಶಿಷ್ಯರ ಸಂಬಂಧ ಇವುಗಳನ್ನು ಉಪಕಥೆಯ ಮೂಲಕ ತೆರೆದಿಟ್ಟರು. ಒಟ್ಟಾರೆ, ಪುಸ್ತಕ, ನಾಟಕ, ಸಿನಿಮಾ, ಸೀಡಿ ಹಾಗೂ ಸಾಕ್ಷ್ಯ ಚಿತ್ರಗಳ ಮೂಲಕ ಕಂಡಿದ್ದ ಅಂಬೇಡ್ಕರ್ ಜೀವನಗಾಥೆಯನ್ನು ಕಲಾವಿದ ಲಕ್ಷ್ಮಣದಾಸ್ ಅವರು ವಿನೂತನ ಪ್ರಯೋಗದಲ್ಲಿ ಕಟ್ಟಿಕೊಟ್ಟಿದ್ದಾರೆ.
ಗೌರವ ಡಾಕ್ಟರೇಟ್
ಮೂಲತಃ ರಂಗಭೂಮಿ ಹಾಗೂ ಹರಿಕಥೆ ಕಲಾವಿದರಾದ ಲಕ್ಷ್ಮಣದಾಸ್ ಅವರು, ಸುಮಾರು ನಾಲ್ಕು ದಶಕಗಳಿಂದಲೂ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಭೀಮಾಕಥಾ ಕೀರ್ತನೆ ನಡೆಸಿಕೊಡುತ್ತಿದ್ದಾರೆ. ಅಮೆರಿಕದ ಅಕ್ಕ ಸಮ್ಮೇಳನದಲ್ಲಿಯೂ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ದೇಶದ ನಾನಾ ಭಾಗಗಳಲ್ಲಿ ಕಲಾ ಪ್ರತಿಭೆ ಮೆರೆದಿದ್ದಾರೆ. ಇವರ ಗಣನೀಯ ಕಲಾಸೇವೆಗಾಗಿ ತುಮಕೂರು ವಿವಿಯು ಗೌರವ ಡಾಕ್ಟರೇಟ್ ನೀಡಿದೆ.
-ಮಾ. ವೆಂಕಟೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

