ಜಿಲ್ಲಾದ್ಯಂತ ಮಳೆ ತನಿಗೊಳ್ಳುತ್ತಿದೆ ಇಳೆ
ಕ.ಪ್ರ.ವಾರ್ತೆ , ಮೈಸೂರು , ಏ. 21
ಮೈಸೂರು ಜಿಲ್ಲಾದ್ಯಂತ ಪೂರ್ವಮಂಗಾರು ಮಳೆ ಉತ್ತಮವಾಗಿ ಬೀಳುತ್ತಿದೆ. ಪರಿಣಾಮ ರೈತರು ಬಿತ್ತನೆಗೆ ಭೂಮಿಯನ್ನು ಹದ ಮಾಡುತ್ತಿದ್ದಾರೆ.
ಜನವರಿ ತಿಂಗಳಲ್ಲಿ ನಂಜನಗೂಡು ತಾಲೂಕಿನಲ್ಲಿ 1 ದಿನ ಮಳೆಯಾಗಿತ್ತು. ಫೆಬ್ರವರಿಯಲ್ಲಿ ಎಲ್ಲಿಯೂ ಮಳೆಯಾಗಿರಲಿಲ್ಲ. ಮಾರ್ಚ್ನಲ್ಲಿ ಎಚ್.ಡಿ. ಕೋಟೆ, ಹುಣಸೂರು, ಪಿರಿಯಾಪಟ್ಟಣದಲ್ಲಿ ತಲಾ 1 ದಿನ, ಟಿ. ನರಸೀಪುರದಲ್ಲಿ 2, ಮೈಸೂರಿನಲ್ಲಿ 3, ನಂಜನಗೂಡಿನಲ್ಲಿ 5 ದಿನಗಳು ಮಳೆಯಾಗಿತ್ತು.
ಏಪ್ರಿಲ್ನಲ್ಲಿ ಭಾನುವಾರದವರೆಗೆ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್. ನಗರದಲ್ಲಿ ತಲಾ 6, ಎಚ್.ಡಿ. ಕೋಟೆಯಲ್ಲಿ 5, ನಂಜನಗೂಡು, ಟಿ.ನರಸೀಪುರದಲ್ಲಿ ತಲಾ 4, ಮೈಸೂರಿನಲ್ಲಿ 3 ಮಳೆ ಬಿದ್ದಿದೆ.
ಕಳೆದ ವಾರದಿಂದೀಚೆಗೆ ಭಾರಿ ಮಳೆಯಿಂದ ಎಚ್.ಡಿ. ಕೋಟೆ, ಹುಣಸೂರು, ಪಿರಿಯಾಪಟ್ಟಣ ಹಾಗೂ ಕೆ.ಆರ್. ನಗರ ತಾಲೂಕುಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಆದರೆ ಈಗ ಬತ್ತ ಮಾತ್ರ ಇರುವುದರಿಂದ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿಲ್ಲ. ಈ ಮಳೆಯಿಂದ ರೈತರು ಭೂಮಿಯನ್ನು ಉಳುಮೆ ಮಾಡಿ, ಹದ ಮಾಡಿಕೊಳ್ಳಲು ಸಹಾಯಕವಾಗಿದೆ. ಎಚ್.ಡಿ. ಕೋಟೆ, ಮೈಸೂರು, ನಂಜನಗೂಡು ತಾಲೂಕಿನಲ್ಲಿ ಹತ್ತಿ ಬಿತ್ತನೆ ಕಾರ್ಯ ಆರಂಭವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಹಾಂತೇಶಪ್ಪ ಅವರು ಸೋಮವಾರ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಬೇಕಾದ ಬಿತ್ತನೆಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಖಾಸಗಿಯವರ ಮೂಲಕ ಹತ್ತಿ ಬಿತ್ತನೆಬೀಜ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಮಹಿಕೋ ಮೇಲಿನ ನಿಷೇಧಕ್ಕೆ ತಡೆ: ಮಹಿಕೋ ಹತ್ತಿ ಬಿತ್ತನೆ ಬೀಜದ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಿತ್ತು. ಆದರೆ ರಾಜ್ಯ ಸರ್ಕಾರ ಯಾವುದೇ ನೋಟಿಸ್ ನೀಡದೇ ನಿಷೇಧ ಹೇರಿರುವ ಬಗ್ಗೆ ಕಂಪನಿ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದೆ. ಹೀಗಾಗಿ ಮಹಿಕೋ ಬಿತ್ತನೆ ಬೀಜದ ಮೇಲಿನ ನಿಷೇಧ ಜಾರಿಯಲ್ಲಿಲ್ಲ. ರೈತರಿಗೆ ಮಹಿಕೋ, ಮಿನರ್ವ, ಪುಲಿ ಸೇರಿದಂತೆ ಲಭ್ಯವಿರುವ ಹತ್ತಿ ಬಿತ್ತನೆಬೀಜ ಒದಗಿಸಲಾಗುತ್ತಿದೆ ಏಂದು ತಿಳಿಸಿದರು. ರೈತರು ಲಭ್ಯವಿರುವ ಬಿತ್ತನೆಬೀಜ ಪಡೆದು, ಬಿತ್ತನೆ ಮಾಡಬೇಕು ಎಂದು ಮನವಿ ಮಾಡಿದ ಅವರು, ಇಂಥ ಕಂಪನಿಯ ಬಿತ್ತನೆ ಬೀಜವೇ ಬೇಕು ಎಂದಾಗ ಮಾತ್ರ ಗೊಂದಲವಾಗುತ್ತದೆ ಎಂದರು.
ಜಿಲ್ಲೆಯಲ್ಲಿ 2014ನೇ ಸಾಲಿನಲ್ಲಿ ಆಗಿರುವ ತಾಲೂಕುವಾರು ಮಳೆ ವಿವರ. (ಏ. 20 ರವರೆಗೆ)
2013 2014 2013 2014
ತಾಲೂಕು ಮಳೆ ವಾಡಿಕೆ ಮಿ.ಮೀ.ಗಳಲ್ಲಿ ಮಳೆ ದಿನಗಳು ಮಳೆ ಶೇ.
ಎಚ್.ಡಿ. ಕೋಟೆ 67.5 64.1 62.9 5 6 93
ಹುಣಸೂರು 51.1 38.9 50.3 2 7 98
ಕೆ.ಆರ್. ನಗರ 47.9 33.6 57.8 4 6 121
ಮೈಸೂರು 50.6 31.7 44.6 3 6 88
ನಂಜನಗೂಡು 47.8 41.1 61.8 4 10 129
ಪಿರಿಯಾಪಟ್ಟಣ 39.6 51.9 52.8 4 7 133
ಟಿ. ನರಸೀಪುರ 50.1 50.7 39.9 4 6 80
ಜಿಲ್ಲಾ ಸರಾಸರಿ 52.6 45.5 54.6 4 7 104
ನಾಗನಹಳ್ಳಿಯಲ್ಲಿ ಕೃಷಿ ತರಬೇತಿ ಕೇಂದ್ರ
ಮೈಸೂರು ತಾಲೂಕು ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಆವರಣಧಲ್ಲಿ 4.5 ಕೋಟಿ ವೆಚ್ಚದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ತಲೆ ಎತ್ತುತ್ತಿದೆ. ಈವರೆಗೆ ಟಿ.ನರಸೀಪುರ ತಾಲೂಕು ರಂಗಸಮುದ್ರದಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ ಫಾರಂನಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು. ಆದರೆ ಈಗ ನಾಗನಹಳ್ಳಿಯಲ್ಲಿ ಸುಸಜ್ಜಿತ ಕೇಂದ್ರವನ್ನು ಲೋಕೋಪಯೋಗಿ ಇಲಾಖೆ ನಿರ್ಮಾಣ ಮಾಡುತ್ತಿದೆ. ಅಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ, ರೈತರಿಗೆ, ರೈತ ಅನುವುಗಾರರಿಗೆ ತರಬೇತಿ ನೀಡಲಾಗುವುದು. ನೂತನ ಕೇಂದ್ರದಲ್ಲಿ ತರಬೇತಿ ಕೊಠಡಿಗಳು, ಸಭಾಂಗಣ, ಅಡುಗೆ ಮನೆ, ತರಬೇತಿಗೆಂದು ಬಂದವರ ವಾಸ್ತವ್ಯಕ್ಕೆ ಕೊಠಡಿಗಳು, ಗ್ರಂಥಾಲಯ ಸೌಲಭ್ಯ ಇರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಮಹಾಂತೇಶಪ್ಪ ತಿಳಿಸಿದರು.
-ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

