ಪಿಡಿಒ ಬಚಾವ್ ಮಾಡಲು ಕಾರ್ಯದರ್ಶಿಗಳ ಕಸರತ್ತು
ಕೊಳ್ಳೇಗಾಲ: ತಾಲೂಕಿನ ಅಜ್ಜಿಪುರ ಪಂಚಾಯ್ತಿಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ನಡೆದಿರುವ ಅವ್ಯವಹಾರದ ಪ್ರಮುಖ ಆರೋಪಿ ಎನ್ನಲಾದ ಅಭಿವೃದ್ಧಿ ಅಧಿಕಾರಿ ರಾಮು ರಕ್ಷಣೆಗೆ ಹಾಗೂ ಹಿರಿಯ ಅಧಿಕಾರಿಗಳು ಕ್ರಮಕೈಗೊಳ್ಳದಂತೆ ಕೆಲ ಪಂಚಾಯ್ತಿ ಕಾರ್ಯದರ್ಶಿಗಳು ಕಸರತ್ತು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಮಹದೇಶ್ವರ ಬೆಟ್ಟ ಪಂಚಾಯ್ತಿ ಕಾರ್ಯದರ್ಶಿ ಮಕ್ಸೂದ್, ರಾಮಾಪುರ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ ಒಳಗೊಂಡಂತೆ ಐದಾರು ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಅಧಿಕಾರಿಗಳು ಈ ಪ್ರಕರಣದಲ್ಲಿ ರಾಮು ಪರ ವಕಾಲತ್ತು ವಹಿಸಿದ್ದಾರೆ.
ರಾಮುರನ್ನು ಬಿಟ್ಟು ಬೇರೆಯವರ ಬಗ್ಗೆ ಕ್ರಮ ಕೈಗೊಳ್ಳಿ. ರಾಮು ಬಹಳ ಒಳ್ಳೆಯವರು. ಕೆಲವರ ಮಾತು ಕೇಳಿ ತಪ್ಪು ಮಾಡಿಬಿಟ್ಟಿದ್ದಾರೆ. ಮುಂದೆ ಬಡ್ತಿ ಇರುವ ಕಾರಣ ದಯವಿಟ್ಟು ಅವರನ್ನು ರಕ್ಷಿಸಿ ಎಂದು ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಮೊರೆ ಹೊಕ್ಕಿದ್ದಾರೆ.
ಮಾತ್ರವಲ್ಲ, ಇವರ ಮೇಲೆ ಕಠಿಣ ಕ್ರಮ ಕೈಗೊಂಡರೆ ಇನ್ನು ಕೆಲ ಪಂಚಾಯ್ತಿ ಹಗರಣ ಹೊರಬರಲಿದ್ದು ಎಲ್ಲಿ ತಮ್ಮಗಳ ತಪ್ಪು ಕೂಡಾ ಬಹಿರಂಗಗೊಂಡು ತಮ್ಮ ಮೇಲೂ ಹಿರಿಯ ಅಧಿಕಾರಿಗಳ ಕ್ರಮಕ್ಕೆ ಮುಂದಾಗಬಹುದು ಎಂದು ಎಚ್ಚೆತ್ತು ರಾಮು ರಕ್ಷಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಆದರೆ ಪ್ರಭಾವಿ ರಾಜಕಾರಣಿಗಳಿಬ್ಬರು ಈ ಪ್ರಕರಣದಲ್ಲಿ ಉಪ್ಪು ತಿಂದವರು ನೀರು ಕುಡಿಯಲಿ ಬಿಡಿ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲಿ ಎಂದು ಜಾರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ತನಿಖಾ ವರದಿ ಪ್ರಮುಖ ಅಂಶ: ಅಜ್ಜಿಪುರ ಪಂಚಾಯ್ತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಜಿಲ್ಲಾ ಸಕ್ಷಮ ಪ್ರಾಧಿಕಾರದ ಅಧಿಕಾರಿ ಓಂಬಡ್ಸ್ಮನ್ ರತ್ನನಾಯಕ್ ಪ್ರಾಮಾಣಿಕವಾಗಿ 37ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ.
ವರದಿಯಲ್ಲಿ ಕ್ರಿಮಿನಲ್ ಹಿನ್ನೆಲೆ ಪ್ರಕರಣದಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಮು ಪಾಲ್ಗೊಂಡಿದ್ದಾರೆ. ರಾಮು ರಸ್ತೆ ಕಾಮಗಾರಿ ನಡೆಸದೆ ಸುಮಾರು 3.42 ಲಕ್ಷಕ್ಕೂ ಅಧಿಕ ಹಣಕ್ಕೆ ನಕಲಿ ಬಿಲ್ ತಯಾರಿಸಿ ಸರ್ಕಾರದ ಹಣ ದುರ್ಬಳಕೆಗೆ ಸಹಕರಿಸಿದ್ದಾರೆ.
ಮಾತ್ರವಲ್ಲ ಇವರ ಅವಧಿಯಲ್ಲಿ ಇನ್ನು ಹೆಚ್ಚಿನ ಹಣ ಹಾಗೂ ಅಧಿಕಾರ ದುರ್ಬಳಕೆ ಪ್ರಕರಣಗಳಾಗಿದ್ದು ಇನ್ನಷ್ಟು ಅಕ್ರಮಗಳಿಗೆ ಸಂಬಂಧಿಸಿದಂತೆ ಸಾಕ್ಷಿ ನಾಶಪಡಿಸುವ ಸಾಧ್ಯತೆ ಇರುವುದರಿಂದ ತಕ್ಷಣ ಕ್ರಮಕೈಗೊಳ್ಳಿ. ಒಂದು ಪಂಚಾಯ್ತಿಯಲ್ಲಿ ಯಾವ ರೀತಿ ಚಾಣಾಕ್ಷತನದಿಂದ ಅವ್ಯವಹಾರ ನಡೆಸಬಹುದು ಎಂಬುದಕ್ಕೆ ಅಜ್ಜಿಪುರ ಪಂಚಾಯ್ತಿ ಮಾದರಿ ಪಂಚಾಯ್ತಿಯಾಗಿದೆ ಉಲ್ಲೇಖಿಸಿದ್ದಾರೆ.
ವ್ಯಾಪಕ ಚರ್ಚೆಗೆ ಆಸ್ಪದ: ಅಜ್ಜಿಪುರ ಪಂಚಾಯ್ತಿ ಹಗರಣಕ್ಕೆ ಸಂಬಂಧಿಸಿದಂತೆ ಪಿಡಿಓ ರಾಮು ಒಬ್ಬರನ್ನು ಬಿಟ್ಟು ಇತರರ ಮೇಲೆ ಕ್ರಮಕೈಗೊಳ್ಳಲಿ ಎಂದು ರಾಮು ರಕ್ಷಣೆಗೆ ಕೆಲ ಕಾರ್ಯದರ್ಶಿಗಳು ಹಿರಿಯ ಅಧಿಕಾರಿಗಳ ಮೊರೆ ಹೋಗುತ್ತಿದ್ದಂತೆ ಹಗರಣದಲ್ಲಿ ಭಾಗಿಯಾಗಿರುವ ಇತರರಿಗೆ ಕೆಲ ಕಾರ್ಯದರ್ಶಿ ವರ್ತನೆ ಬೇಸರಕ್ಕೆ ಕಾರಣವಾಗಿದೆ. ಅಲ್ಲದೇ ಈ ಬೆಳವಣಿಗೆ ವ್ಯಾಪಕ ಚರ್ಚೆ ಹಾಗೂ ಹಲವು ಅನುಮಾನಗಳಿಗೆ ಏಡೆಮಾಡಿ ಕೊಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

