ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಏ. 24
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಪಿ.ಬಲರಾಮ್ ಅವರಿಗೆ ಭ್ರಮರಾಂಭ ಟ್ರಸ್ಟ್ ಕೊಡಮಾಡುವ ವೈ.ಟಿ. ಮತ್ತು ಮಾಧುರಿ ತಾತಾಚಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭ್ರಮರಾಂಭ ಟ್ರಸ್ಟ್ ಮಾನಸ ಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಿಎಫ್ಟಿಆರ್ಐ ನಿರ್ದೇಶಕ ಪ್ರೊ.ರಾಮ್ ರಾಜಶೇಖರನ್ ಅವರು ಡಾ.ಪಿ. ಬಲರಾಮ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಬಳಿಕ ಮಾತನಾಡಿದ ಡಾ.ಪಿ.ಬಲರಾಮ್, ಭಾರತದಲ್ಲಿ ಕಳೆದ ಹತ್ತು ವರ್ಷಗಳಿಂದ ವೈಜ್ಞಾನಿಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. 1970 ರಿಂದ 90 ರವರೆಗೂ ರಾಜಕೀಯ ನಿರ್ಧಾರಗಳು ಸರಿ ಇರಲಿಲ್ಲ. ಆದರೆ ಕಳೆದ ಹತ್ತು ವರ್ಷಗಳಿಂದ ವೈಜ್ಞಾನಿಕವಾಗಿ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಇಂದಿನ ಯುವ ವಿಜ್ಞಾನಿಗಳಿಗೆ ಮತ್ತು ಸಂಶೋಧಕರಿಗೆ ಸಾಕಷ್ಟು ಅವಕಾಶ ತೆರೆದಿದೆ ಎಂದರು.
ಹಿಂದಿಗಿಂತಲೂ ಈಗ ವಿಜ್ಞಾನಕ್ಕೆ ಸಾಕಷ್ಟು ಆದ್ಯತೆ ನೀಡಿ ಮೂಲಸೌಲಭ್ಯ ಕಲ್ಪಿಸುತ್ತಿರುವುದನ್ನು ಗಮನಿಸಿದರೆ ನಾನು ಈಗ 25 ವರ್ಷದ ಯುವಕನಾಗಿದ್ದರೆ ಒಳ್ಳೆಯದಿತ್ತು ಎನಿಸುತ್ತದೆ. ವಿಜ್ಞಾನದ ಅಭಿವೃದ್ಧಿಗೆ ಸಾಕಷ್ಟು ಧನ ಸಹಾಯ ಅಗತ್ಯ ಇದೆ. ಅಂತೆಯೇ ಸಾರ್ವಜನಿಕರು ಮತ್ತು ಸರ್ಕಾರದ ಸಹಾಯವೂ ಬೇಕು. ನಾವು ವಿಜ್ಞಾನವನ್ನು ಜನರಿಗೆ ಅರ್ಥ ಆಗುವಂತೆ ಮಾಡಿದರೆ ಸಾರ್ವಜನಿಕರ ಸಹಕಾರ ತಾನೆ ತಾನಾಗಿ ದೊರಕುತ್ತದೆ. ವೈಜ್ಞಾನಿಕ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವ ಆಸಕ್ತಿ ಉಳ್ಳವರು ಎಂಥದೆ ಸಮಸ್ಯೆಯನ್ನೂ ಬಗೆಹರಿಸುವ ಮನಸ್ಥಿತಿ ಹೊಂದಿರಬೇಕು ಎಂದು ಹೇಳಿದರು.
ಹತ್ತಿರಕ್ಕೆ ತೆಗೆದುಕೊಳ್ಳಲ್ಲ: ಆದರೆ ಕೆಲವು ಮಂದಿ ಯುವ ವಿಜ್ಞಾನಿಗಳು ಅಥವಾ ಸಂಶೋಧಕರು ಸಾರ್ವಜನಿಕರನ್ನು ಸುಲಭವಾಗಿ ಹತ್ತಿರಕ್ಕೆ ತೆಗೆದುಕೊಳ್ಳುವುದಿಲ್ಲ. ಮೊದಲೆ ಕರೆ ಮಾಡಿ ಸಮಯ ನಿಗದಿಪಡಿಸಿಕೊಂಡು ಬನ್ನಿ ಎಂದು ಹೇಳುವ ಸ್ಥಿತಿ ತಲುಪಿದ್ದಾರೆ. ಇದು ಸರಿಯಾದ ಬೆಳವಣಿಗೆ ಅಲ್ಲ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿನ ಡಾ. ರಾಮಚಂದ್ರನ್ ವಿಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ವ್ಯಕ್ತಿ. ಅವರಿಗೆ ನೊಬೆಲ್ ಪ್ರಶಸ್ತಿ ದೊರಕಲಿಲ್ಲ ಎಂಬ ಕಾರಣಕ್ಕೆ ಅವರ ಹೇಳಿಕೆಗಳಿಗೆ ಮೌಲ್ಯ ನೀಡಲಿಲ್ಲ ಎಂದು ಅವರು ವಿಷಾದಿಸಿದರು.
ಸಿಎಫ್ಟಿಆರ್ಐ ನಿರ್ದೇಶಕ ಪ್ರೊ.ರಾಮ್ ರಾಜಶೇಖರನ್ ಮಾತನಾಡಿ, ಡಾ.ಬಿ. ಬಲರಾಮ್ ಅವರು ನೇರ ನಡೆ ನುಡಿಯ ವ್ಯಕ್ತಿ. ತಾವೊಬ್ಬ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡೆ ಸರ್ಕಾರದ ಕೆಲವು ಧೋರಣೆಗಳನ್ನು ಖಂಡಿಸುವ ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ. ಸರಳ ಮತ್ತು ಸಜ್ಜನ ವ್ಯಕ್ತಿಯಾದ ಬಲರಾಮ್ ಅವರಿಗೆ ವೈ.ಟಿ ಮತ್ತು ಮಾಧುರಿ ತಾತಾಚಾರಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು. ವಿಜ್ಞಾನಿ ಡಾ.ಕೆ.ಎಸ್. ಕೃಷ್ಣನ್, ಮಾಧುರಿ ತಾತಾಚಾರಿ, ಡಾ.ಹೇಮಲತಾ ಬಲರಾಮ್, ಪ್ರೊ.ಆಯಾಷ ಷರೀಫ್, ಪ್ರೊ.ಶ್ರೀನಿವಾಸನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

