ಮನ ತಣಿದ ತೇಜಸ್ವಿ ಪಕ್ಷಿಲೋಕ
ಕ.ಪ್ರ.ವಾರ್ತೆ ಮೈಸೂರು ಏ. 26
ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಕೇವಲ ಲೇಖನಿ ಹಿಡಿದು ಪರಿಸರ ಕುರಿತು ಬರೆದವರಲ್ಲ, ಕ್ಯಾಮೆರಾವನ್ನು ಬಗಲಿಗೇರಿಸಿಕೊಂಡು ಪಕ್ಷಿಗಳ ಲೋಕವನ್ನು ಸೆರೆಹಿಡಿದ ಅದ್ಭುತ ಛಾಯಾಚಿತ್ರಗಾರ.
ರಾಷ್ಟ್ರಕವಿ ಕುವೆಂಪು ಅವರ ಪುತ್ರರೂ ಆದ ತೇಜಸ್ವಿ ಅವರು, ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನೆಲೆಸದೆ, ಚಿಕ್ಕಮಗಳೂರಿನ ಆ ಸುಂದರ ತಾಣದಲ್ಲಿ ತೋಟ ನಿರ್ಮಿಸಿಕೊಂಡು ಬದುಕು ನಡೆಸುವ ಮೂಲಕ ಪರಿಸರಕ್ಕೆ ಹತ್ತಿರವಾದವರು ಹಾಗೂ ನಿಸರ್ಗ ಪ್ರೇಮ ಮೆರೆದವರು.
ಬರಹಗಾರರಾಗಿ ಅನೇಕ ಕೃತಿಗಳನ್ನು ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿರುವಂತೆ, ಪ್ರಕೃತಿಯ ಸೊಬಗನ್ನೂ, ಪ್ರಾಣಿ ಪಕ್ಷಿಗಳ ಜೀವನ ವಿಧಾನವನ್ನೂ ತಮ್ಮ ಕ್ಯಾಮೆರಾ ಕಣ್ಣಿನಿಂದ ಸೆರೆಹಿಡಿದವರು. ವಿಶೇಷವಾಗಿ ಕಾನನದಲ್ಲಿ ಸಂಚರಿಸಿ ತೇಜಸ್ವಿಯವರು ಸೆರೆ ಹಿಡಿದಿರುವ ಪಕ್ಷಿ ಸಂಕುಲಗಳ ವೈವಿಧ್ಯಮಯ ಛಾಯಾಚಿತ್ರಗಳನ್ನು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಪ್ರದರ್ಶಿಸಲಾಗಿದೆ. ನಾನಾ ಪಕ್ಷಿಗಳ ಛಾಯಾಚಿತ್ರದ ಜತೆಗೆ ತೇಜಸ್ವಿ ಅವರ ಭಾವಚಿತ್ರ, ಕುಟುಂಬ ಮತ್ತು ಸ್ನೇಹಿತರೊಂದಿಗೆ ತೆಗೆಸಿರುವ ಅಪರೂಪದ ಕಪ್ಪು ಬಿಳುಪಿನ ಛಾಯಾಚಿತ್ರಗಳು ಇರುವುದು ವಿಶೇಷ.
ಅಭಿಯಂತರರು ವೇದಿಕೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಲೋಕದಲ್ಲಿ ತೇಜಸ್ವಿ ಒಂದು ಅವಲೋಕನ ಎಂಬ ಎರಡು ದಿನದ ಕಾರ್ಯಕ್ರಮದಲ್ಲಿ ಶನಿವಾರ ಬೆಳಗ್ಗೆ ಏರ್ಪಡಿಸಿದ್ದ ಈ ಪ್ರದರ್ಶನವನ್ನು ತೇಜಸ್ವಿ ಸ್ನೇಹಿತ ಹಾಗೂ ಪ್ರಕಾಶಕ ಪ್ರೊ.ಬಿ.ಎನ್. ಶ್ರೀರಾಮ್ ಉದ್ಘಾಟಿಸಿದರು. ನಂತರ ಮಾತನಾಡಿದ ಪ್ರೊ.ಬಿ.ಎನ್. ಶ್ರೀರಾಮ್, ಪೂರ್ಣಚಂದ್ರ ತೇಜಸ್ವಿ ಅವರು, ತಮ್ಮ ಛಾಯಾಚಿತ್ರದ ಮೂಲಕ ಪರಿಸರವನ್ನು ಹೊರ ಜಗತ್ತಿಗೆ ಪರಿಚಯಿಸಿದವರು. ಯಾವುದೇ ತಂತ್ರಜ್ಞಾನದ ಸೌಲಭ್ಯ ಇಲ್ಲದ ಕಾಲದಲ್ಲಿಯೂ ಅದ್ಭುತವಾಗಿ ಪಕ್ಷಿಗಳ ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಿ.ಎಂ. ರಾಮಚಂದ್ರ ಹಾಗೂ ಮೈಸೂರು ವಿವಿಯ ಪ್ರಸಾರಾಂಗದ ಮಾಜಿ ನಿರ್ದೇಶಕ ಪ್ರೊ.ಕೆ.ಟಿ.ವೀರಪ್ಪ ಮುಖ್ಯ ಅತಿಥಿಗಳಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

