ಮೈಸೂರು

ಎಂ.ಟೆಕ್‌ನಲ್ಲಿ ರಂಜನಿ ಶೌರಿಗೆ ರ್ಯಾಂಕ್

Published On :

ಪಿರಿಯಾಪಟ್ಟಣ: ಪಟ್ಟಣದ ಹಿರಿಯ ವಕೀಲ ಸಿ.ಕೆ.ಮಂಜುನಾಥ್ ಅವರ ಪುತ್ರಿ ಸಿ.ಎಂ. ರಂಜನಿಶೌರಿ ಎಂ.ಟೆಕ್ (ಬಯೋ ಇನ್‌ಫಾರ್‌ಮೇಟಿಕ್ಸ್) ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಟಿಯು ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರಿಂದ ಚಿನ್ನದ ಪದಕ ಮತ್ತು ಪ್ರಮಾಣ ಪತ್ರ ಪಡೆದುಕೊಂಡರು. ಕುಲಪತಿ ಎಚ್. ಮಹೇಶ್ವರಪ್ಪ, ಮಾಹಿತಿ ತಂತ್ರಜ್ಞಾನ ಸ್ಯಾಮ್‌ಪೆಟ್ರೋದ ಇದ್ದರು.

ಸೆಸ್ಕ್ ಕಚೇರಿಗೆ ಮುತ್ತಿಗೆ ಇಂದು
ಪಿರಿಯಾಪಟ್ಟಣ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ 3 ಫೇಸ್ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದಿಂದ ಆ.4ರ ಬೆಳಗ್ಗೆ ಪಟ್ಟಣದ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಆರ್.ಟಿ. ಸತೀಶ್ ಹೇಳಿದರು. ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು, ವಿದ್ಯುತ್ ಬಳಕೆದಾರ ರೈತರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ  ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಪಕ್ಷದ ಪದಾಧಿಕಾರಿಗಳಾದ ಲೋಕಪಾಲಯ್ಯ, ಸಿ.ಕೆ.ಪ್ರಸನ್ನಕೇಶವ, ಎಸ್.ಟಿ. ಕೃಷ್ಣಪ್ರಸಾದ್, ವಿಕ್ರಂರಾಜ್, ಮಾಗಳಿ ರವಿ, ಪಿ.ಜೆ. ರವಿ ಇದ್ದರು.

ಕಳ್ಳತನಕ್ಕೆ ವಿಫಲ ಯತ್ನ
ಹುಣಸೂರು: ತಾಲೂಕಿನ ರತ್ನಪುರಿ ಗ್ರಾಮದ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್‌ನ ಕಿಟಕಿಯ ಕಂಬಿ ಮುರಿದು ಹಣ ದೋಚಲು ವಿಫಲ ಯತ್ನ ನಡೆಸಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಕಿಟಕಿ ಸರಳುಗಳನ್ನು ಗ್ಯಾಸ್ ಕಟರ್‌ನಿಂದ ತುಂಡರಿಸಿದ ಕಳ್ಳರು ತಿಜೋರಿ ಬೀಗ ಒಡೆಯಲು ಮುಂದಾದಾಗ ಸೈರನ್ ಕೂಗಿಕೊಂಡ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಸ್ಥಳಕ್ಕೆ ಶ್ವಾನದಳ ಬೆರಳಚ್ಚು ತಜ್ಞರು ಮತ್ತು ಸಿಪಿಐ ಮಲ್ಲೇಶ್ ಭೇಟಿ ನೀಡಿದ್ದರು.

ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿ: ಹಾಡ್ಯ ಮಹದೇವಸ್ವಾಮಿ
ಕೆ.ಆರ್. ನಗರ: ಕಬ್ಬು ಬೆಳೆಯುವ ರೈತರು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರ ಜತೆಗೆ ಕೃಷಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ಪಡೆದುಕೊಳ್ಳುವಂತೆ ತಾಪಂ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಹೇಳಿದರು. ಕೆ.ಆರ್. ತಾಲೂಕಿನ ಕೆಸ್ತೂರ್ ಗೇಟ್‌ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ನಡೆದ ಸುಸ್ಥಿರ ಕಬ್ಬಿನ ವ್ಯವಸಾಯದ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಇಂದಿಗೂ ಹಳೆಯ ಕೃಷಿ ಪದ್ಧತಿಯಲ್ಲಿ ಕಬ್ಬು ಬೆಳೆಯುತ್ತಿರುವುದರಿಂದ ನಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ನಮ್ಮಲ್ಲಿರುವ ಮಾಹಿತಿ ಕೊರತೆ ಕಾರಣವಾಗಿದೆ. ಆದ್ದರಿಂದ ರೈತರು ಕೃಷಿ ಇಲಾಖೆ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಿರ್ದೇಶಕ ಬಿ.ಅಶೋಕ್, ಬಲರಾಮೇಗೌಡ, ಹೊಸೂರು ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷ ಎಚ್.ಆರ್.ದಿನೇಶ್, ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ಸೋಮಶೇಖರ್, ಸಂಸ್ಥೆಯ ಹೈನುಗಾರಿಕೆ ಅಧಿಕಾರಿ ಚಂದ್ರಪ್ಪ, ಮೇಲ್ವಿಚಾರಕಿ ಜಯಶ್ರೀ ಇದ್ದರು.

ಚಿರತೆಗೆ ಬಲಿಯಾದ ಹಸು
ಬೈಲಕುಪ್ಪೆ: ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಸುವೊಂದರ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಪಿರಿಯಾಣಪಟ್ಟಣ ತಾಲೂಕಿನ ಕಣಗಾಲ್ ಗ್ರಾಮದಲ್ಲಿ ನಡೆದಿದೆ. ಕಣಗಾಲ್ ಗ್ರಾಮದ ದೊಡ್ಡರಾಜೇಗೌಡ ಎಂಬವರಿಗೆ ಸೇರಿದ ಹಸು ಸಾವಿಗೀಡಾಗಿದೆ. ಶನಿವಾರ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಸುವಿನ ಕುತ್ತಿಗೆ ಭಾಗಕ್ಕೆ ಕಚ್ಚಿ ಸಾಯಿಸಿ, ಕಿರುಚಾಡುವ ಸಂದರ್ಭದಲ್ಲಿ ಕುಟುಂಬದ ಜನ ಎದ್ದು ಸದ್ದುಮಾಡಿದ ತಕ್ಷಣ ಚಿರತೆ ಪರಾರಿಯಾಗಿದೆ ಎಂದು ಕುಟುಂಬದವರು ತಿಳಿಸಿದರು. ಕಣಗಾಲ್ ಗ್ರಾಮದ ಪಶುವೈದ್ಯಾಧಿಕಾರಿ ಡಾ.ಚಾಮರಾಜ್ ಪರಿಶೀಲಿಸಿ ಸುಮಾರು ಹನ್ನೆರಡು ಸಾವಿರ ಬೆಲೆಬಾಳುವ ಹಸು ಎಂದು ತಿಳಿಸಿದ್ದಾರೆ. ಅರಣ್ಯ ಅಧಿಕಾರಿ ರವೀಂದ್ರ  ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ವಿಜಯನಗರದಲ್ಲಿ ಮನೆ ನುಗ್ಗಿ ದರೋಡೆ
ಮೈಸೂರು: ನಾಲ್ಕು ಮಂದಿ ದುಷ್ಕರ್ಮಿಗಳು ಮನೆಗೆ ನುಗ್ಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ 1.50 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿರುವ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ. ವಿಜಯನಗರ 2ನೇ ಹಂತ ಸ್ನೇಕ್ ಶ್ಯಾಮ್ ರಸ್ತೆ ನಿವಾಸಿ ಸುಜಿತ್ (30) ಗಾಯಗೊಂಡವರು. ಬೆಳಗಿನ ಜಾವ 2.30ಕ್ಕೆ ನಾಲ್ವರು ದುಷ್ಕರ್ಮಿಗಳು ಸುಜಿತ್ ಇದ್ದ ಮನೆ ಬಾಗಿಲು ಬಡಿದಿದ್ದಾರೆ. ಯಾರೋ ಪರಿಚಿತರು ಇರಬೇಕು ಎಂದು ಸುಜಿತ್ ಬಾಗಿಲು ತೆಗೆದಿದ್ದಾರೆ. ಈ ವೇಳೆ ನಾಲ್ವರು ಸುಜಿತ್‌ನನ್ನು ಮನೆಯೊಳಗೆ ಎಳೆದುಕೊಂಡು ಹೋಗಿ, 78 ಗ್ರಾಂ. ಚಿನ್ನಾಭರಣ ಹಾಗೂ 8,000 ದೋಚಿದ್ದಾರೆ. ಮನೆಯಿಂದ ಹೊರ ಹೋಗುವ ವೇಳೆ ಸುಜಿತ್ ಕೂಗಿಕೊಂಡಾಗ ರಾಡಿನಿಂದ ತಲೆಗೆ ಹೊಡೆದಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಸುಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದಾದ ಕೆಲವು ಹೊತ್ತಿನ ನಂತರ ನಾಲ್ವರು ದುಷ್ಕರ್ಮಿಗಳು ಹೂಟಗಳ್ಳಿ ಎಸ್‌ಆರ್‌ಎಸ್ ಕಾಲೋನಿಯಲ್ಲಿರುವ ಮನೆಯೊಂದರ ಬಾಗಿಲು ಬಡಿದಿದ್ದಾರೆ. ಮನೆಯಲ್ಲಿದ್ದ ವಸಂತ ಎಂಬವರು ಬಾಗಿಲು ಬಳಿಗೆ ಬಂದಿದ್ದು, ದುಷ್ಕರ್ಮಿಗಳ ಕೈಯಲ್ಲಿ ಕಲ್ಲು, ದೊಣ್ಣೆ ಕಂಡು ಕೂಗಿಕೊಂಡಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಕಲ್ಲು ತೂರಿದ್ದರಿಂದ ವಸಂತ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಸ್ಥಾನದಲ್ಲಿ ಕಳವು
ಮೈಸೂರು: ಅರವಿಂದನಗರದಲ್ಲಿರುವ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಕಿಟಕಿ ಬಾಗಿಲು ಮುರಿದು ಒಳ ನುಗ್ಗಿ ಬೆಳ್ಳಿ ಆಭರಣ ಹಾಗೂ 2 ಹುಂಡಿ ಕಳವು ಮಾಡಿರುವ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ. ದೇವಸ್ಥಾನ ಟ್ರಸ್ಟ್‌ನವರು ಬೆಲೆ ಬಾಳುವ ಆಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇರಿಸಿದ್ದರಿಂದ ಎಲ್ಲವೂ ಸುರಕ್ಷಿತವಾಗಿದೆ. 2 ಸಣ್ಣ ಹುಂಡಿಯಲ್ಲಿದ್ದ ಹಣ ಹಾಗೂ ಪೂಜೆಗೆ ಬಳಸುವ ಬೆಳ್ಳಿ ವಸ್ತುಗಳು ಕಳವಾಗಿದೆ. ಈ ಸಂಬಂದ ಕುವೆಂಪುನಗರ ಠಾಣೆ ಇನ್ಸ್‌ಪೆಕ್ಟರ್ ಜಿ.ಶೇಖರ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಗುಚಿ ಬಿದ್ದ ಲಾರಿ
ಮೈಸೂರು: ಬಟ್ಟೆ ತುಂಬಿದ ಲಾರಿ ಮಗುಚಿ ಬಿದ್ದು ಚಾಲಕ ಗಾಯಗೊಂಡಿರುವ ಘಟನೆ ಮೈಸೂರು- ನಂಜನಗೂಡು ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಚಾಲಕ ಕೆಂಪಣ್ಣ ಗಾಯಗೊಂಡವರು. ತಮಿಳುನಾಡಿನ ತಿರುಪುರಿನಿಂದ ಬಟ್ಟೆ ತುಂಬಿದ ಲಾರಿ ಮೈಸೂರಿಗೆ ಬರುತ್ತಿದ್ದ ವೇಳೆ ಮಂಡಕಳ್ಳಿ ಕೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಇದರಿಂದ ನಂಜನಗೂಡು ರಸ್ತೆಯಲ್ಲಿ 3-4 ಗಂಟೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಕಲಾವಿದರಿಂದ ಅರ್ಜಿ
ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಸುವ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಚ್ಛಿಸುವ ಸಂಗೀತ, ನೃತ್ಯ, ಹರಿಕಥೆ, ಜನಪದ, ಗಮಕ, ಕಲಾವಿದರು ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾಮಂದಿರ, ಮೈಸೂರು ಇವರಿಂದ ನಿಗದಿತ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆ.16 ರೊಳಗೆ ಸಲ್ಲಿಸಬೇಕು. ದೂ. 0821- 2513225 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.