ಸಾರಿಗೆ ಬಸ್- ಕಾರು ಡಿಕ್ಕಿ, ಇಬ್ಬರು ಸಾವು
ಕ.ಪ್ರ.ವಾರ್ತೆ ಕೆ.ಆರ್. ನಗರ ಫೆ. 2
ಕೆಎಸ್ಆರ್ಟಿಸಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೆ ಮೃತಪಟ್ಟು, ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಸಿದ್ದನಕೊಪ್ಪಲು ಗೇಟ್ ಬಳಿ ಭಾನುವಾರ ನಡೆದಿದೆ.
ಕೆ.ಆರ್. ನಗರದಿಂದ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ ಬಸ್ಸೊಂದು ನಾಡಪ್ಪನಹಳ್ಳಿಯಿಂದ- ಕೆ.ಆರ್. ನಗರಕ್ಕೆ ಆಗಮಿಸುತ್ತಿದ್ದ ಆಲ್ಟೊ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಹಾರಂಗಿ ನೀರು ಬಳಕೆದಾರರ ಸಹಕಾರ ಸಂಘದ ಉಪಾಧ್ಯಕ್ಷ ನಾಡಪ್ಪನಹಳ್ಳಿ ಎನ್.ಪಿ. ಮಹದೇವಪ್ಪ ಮತ್ತು ನಾಡಪ್ಪನಹಳ್ಳಿ ಚಿತ್ರಶೇಖರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿಯಲ್ಲಿ ಕುಳಿತಿದ್ದ ಶಿವಮ್ಮ, ಮಹಾದೇವಿ ಮತ್ತು ರಾಜು ಅವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೆ ರಸ್ತೆಯಲ್ಲಿ ಒಕ್ಕಣೆ ಮಾಡಲು ಹಾಕಿದ್ದ ರಾಗಿ ಹುಲ್ಲು ಕಾರಣ ಎನ್ನಲಾಗಿದ್ದು, ರಭಸದಲ್ಲಿ ಬರುತ್ತಿದ್ದ ಬಸ್ ಬ್ರೇಕ್ ಹಾಕಿದಾಗ ಹುಲ್ಲಿನ ಮೇಲೆ ಜಾರಿದ್ದರಿಂದ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಹದೇವಪ್ಪ ಅವರ ದೇಹ ಅಪ್ಪಚ್ಚಿಯಾಗಿದ್ದರೆ, ಚಿತ್ರಶೇಖರ್ ಕಾರಿನಿಂದ ಹೊರಗೆಸೆಯಲ್ಪಟ್ಟಿದ್ದರು.
ಸಾರ್ವಜನಿಕರು, ಬಂಧುಗಳ ಆಕ್ರೋಶ: ಅಪಘಾತ ನಡೆಯಲು ರಸ್ತೆಯಲ್ಲಿ ಒಕ್ಕಣೆ ಮಾಡಲು ಹಾಕಿದ್ದ ರಾಗಿ ಹುಲ್ಲು ಕಾರಣವಾಗಿದ್ದು ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಮತ್ತು ಮೃತರ ಪೋಷಕರು ರಸ್ತೆ ತಡೆ ನಡೆಸಿ ಸಂಚಾರ ಬಂದ್ ಮಾಡಿದರು. ರಸ್ತೆ ಒಕ್ಕಣೆಯಿಂದ ಇನ್ನೆಷ್ಟು ಮಂದಿ ಪ್ರಾಣ ಕಳೆದುಕೊಳ್ಳಬೇಕು ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಾ.ರಾ. ಮಹೇಶ್ ಉದ್ರಿಕ್ತರನ್ನು ಸಮಾಧಾನಪಡಿಸಿ ಶವಗಳನ್ನು ತೆಗೆಸಿದರಲ್ಲದೆ ಮೃತರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸುವುದು ಹಾಗೂ ವೈಯುಕ್ತಿಕವಾಗಿಯು ಸಹಾಯ ಮಾಡುವ ಭರವಸೆ ನೀಡಿದರು. ನಂತರ ಶವಗಳನ್ನು ವಾರಸುದಾರರಿಗೆ ಒಪ್ಪಿಸಲಾಯಿತು.
ತಾಲೂಕು ಆಡಳಿತಕ್ಕೆ ಮತ್ತು ಪೊಲೀಸರಿಗೆ ಎಚ್ಚರಿಕೆ ನೀಡಿದ ಸಾ.ರಾ. ಮಹೇಶ್, ಇನ್ನು ಮುಂದೆ ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ತಡೆಯದಿದ್ದರೆ ಅಂತಹವರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದರು. ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಮಾಜಿ ಸದಸ್ಯ ಡಿ. ರವಿಶಂಕರ್, ತಾಪಂ ಮಾಜಿ ಉಪಾಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಸದಸ್ಯ ನಾಗಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶ್ರೀಹರಿ ಬರಗೂರು, ಸಿಪಿಐ ಸಿದ್ದಯ್ಯ, ಪಿಎಸ್ಐಗಳಾದ ಷಣ್ಮುಗಂ, ಮಹೇಶ್, ಪರಶುರಾಮ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂಬಂಧ ಕೆ.ಆರ್. ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಂತ್ಯ ಸಂಸ್ಕಾರ: ಅಪಘಾತದಲ್ಲಿ ಮೃತಪಟ್ಟ ಎನ್.ಪಿ. ಮಹದೇವಪ್ಪ ಮತ್ತು ಚಿತ್ರಶೇಖರ್ ಅವರ ಅಂತ್ಯಕ್ರಿಯೆಯು ನಾಡಪ್ಪನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

