ಲೋಕ ಅದಾಲತ್ನಿಂದ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಿ
ಕ.ಪ್ರ.ವಾರ್ತೆ ಮೈಸೂರು ಫೆ. 2
ನ್ಯಾಯಾಲಯಗಳಲ್ಲಿ ವಿವಿಧ ಪ್ರಕರಣಗಳು ಬಾಕಿ ಉಳಿಸಿಕೊಂಡಿರುವ ಸಾರ್ವಜನಿಕರು ರಾಷ್ಟ್ರ ಮಟ್ಟದ ದ್ವಿತೀಯ ಬೃಹತ್ ಲೋಕ ಅದಾಲತ್ನ (ಜನತಾ ನ್ಯಾಯಾಲಯ) ಪ್ರಯೋಜನ ಪಡೆದು ವ್ಯಾಜ್ಯಗಳ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಹೈಕೋರ್ಟ್ ನ್ಯಾಯಾಧೀಶ ಎನ್.ಕೆ. ಪಾಟೀಲ್ ಕರೆ ನೀಡಿದರು.
ಮೈಸೂರು ಜಿಪಂ ಕಚೇರಿಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು ಮಾನವೀಯತೆಯಿಂದ ಕೆಲಸ ಮಾಡಿದರೆ ಬಹಳಷ್ಟು ಪ್ರಕರಣಗಳು ಶೀಘ್ರವಾಗಿ ಇತ್ಯರ್ಥವಾಗುತ್ತವೆ ಎಂದರು.
ಆರೋಗ್ಯ, ಶಿಕ್ಷಣ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಶೇ.95 ಪ್ರಕರಣಗಳು ಬಾಕಿ ಇವೆ. ಕೇವಲ ಶೇ.5 ಪ್ರಕರಣಗಳು ಮಾತ್ರ ಇತ್ಯರ್ಥವಾಗಿವೆ. ಹೀಗಾಗಿ ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಲು ಅಧಿಕಾರಿಗಳು ಮತ್ತು ಕಕ್ಷಿದಾರರು ಮುಂದಾಗಬೇಕು. ಲೋಕ ಅದಾಲತ್ನಿಂದ ವ್ಯಾಜ್ಯಗಳು ಶೀಘ್ರವಾಗಿ ಇತ್ಯರ್ಥವಾಗುವುದರ ಜೊತೆಗೆ ಪರಿಹಾರ ಕೂಡ ಅಷ್ಟೇ ಬೇಗ ಸಿಗುತ್ತದೆ ಎಂದು ಹೇಳಿದರು.
ಲೋಕ ಅದಾಲತ್ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಫೆ.17 ರಂದು ಬೆಂಗಳೂರಿನಲ್ಲಿ ಎಲ್ಲ ಇಲಾಖೆಯ ಮುಖ್ಯಸ್ಥರ ಸಭೆ ಕರೆದಿದ್ದಾರೆ. ಇದಕ್ಕಾಗಿ ಎಲ್ಲ ಇಲಾಖೆಯವರು ಸಿದ್ಧತೆ ಮಾಡಿಕೊಂಡು, ತಮ್ಮ ಇಲಾಖೆ ಮುಖ್ಯಸ್ಥರಿಗೆ ಇತ್ಯರ್ಥವಾಗದ ವ್ಯಾಜ್ಯಗಳ ಬಗ್ಗೆ ಮಾಹಿತಿ ಸಲ್ಲಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ಗಳು ಖಾತೆ ಬದಲಾವಣೆ ವ್ಯಾಜ್ಯವನ್ನು ಶೀಘ್ರವಾಗಿ ಪರಿಹರಿಸಬೇಕು ಎಂದು ಸೂಚಿಸಿದರು.ಕಾನೂನು ಆರೋಗ್ಯ ಕೇಂದ್ರ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಪ್ರತಿ ತಾಲೂಕಿನ ಕೆಲವು ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡು ಕಾನೂನು ಆರೋಗ್ಯ ಕೇಂದ್ರ ಸ್ಥಾಪಿಸುವ ಮೂಲಕ ಗ್ರಾಮೀಣ ಮಟ್ಟದ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲು ಚಿಂತಿಸಲಾಗಿದೆ ಎಂದು ನ್ಯಾ.ಎನ್.ಕೆ. ಪಾಟೀಲ್ ಹೇಳಿದರು.
ಜಾತಿ, ಜನನ- ಮರಣ ಪ್ರಮಾಣ ಪತ್ರ, ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ಪ್ರಕರಣಗಳನ್ನು ಕಾನೂನು ಆರೋಗ್ಯ ಕೇಂದ್ರ ಮೂಲಕ ಇತ್ಯರ್ಥಗೊಳಿಸಲಾಗುತ್ತದೆ. ಈ ಕೇಂದ್ರಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮುಖ್ಯಸ್ಥರಾಗಿ, ಗ್ರಾಮ ಲೆಕ್ಕಿಗ ಮತ್ತು ಕಾರ್ಯದರ್ಶಿಗಳು ಸದಸ್ಯರಾಗಿ ಕಾರ್ಯ ನಿರ್ವಹಿಸಬೇಕಿದೆ. ಲೋಕ ಅದಾಲತ್ ನಂತರ ಈ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದರು.
33,388 ಪ್ರಕರಣಗಳು ವರ್ಗೀಕರಣ: ಮೈಸೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾ.ಕೆ.ಎಸ್. ಮುದಗಲ್ ಮಾತನಾಡಿ, 2013ರಲ್ಲಿ ನಡೆದ ಬೃಹತ್ ಲೋಕ ಅದಾಲತ್ನಲ್ಲಿ ರಾಜ್ಯದಲ್ಲಿ 95,170 ಪ್ರಕರಣಗಳು ಇತ್ಯರ್ಥವಾಗಿವೆ. ಅದೇ ರೀತಿ ಜಿಲ್ಲೆಯ 4,830 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥವಾಗಿ, 1.65 ಕೋಟಿ ಪರಿಹಾರ ವಿತರಿಸಲಾಗಿದೆ ಎಂದರು.
ಮೈಸೂರು ನಗರ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಸುಮಾರು 70 ಸಾವಿರ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಈ ಪೈಕಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಸೇರಿದಂತೆ 33,388 ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಪರಿಹರಿಸಲು ವರ್ಗೀಕರಿಸಲಾಗಿದೆ ಎಂದರು.
ಬೃಹತ್ ಲೋಕ ಅದಾಲತ್ನಲ್ಲಿ ಕ್ರಿಮಿನಲ್ ಕಾಂಪೌಡೇಬಲ್, ಚೆಕ್ ಬೌನ್ಸ್, ವಾಹನ ಅಪಘಾತ, ಕೌಟುಂಬಿಕ ವಿವಾದ, ಕಾರ್ಮಿಕ ವಿವಾದ, ಭೂ ಅರ್ಜನೆ- ಆಕ್ಷೇಪಣೆ, ನೀರು ಮತ್ತು ವಿದ್ಯುತ್ ಬಿಲ್, ಮಾರಾಟ ತೆರಿಗೆ, ಆದಾಯ ತೆರಿಗೆ, ಸೇವಾ ವಿಷಯಗಳು, ಅರಣ್ಯ ಕಾಯ್ದೆ, ರೇಲ್ವೆ ಕ್ಲೇಮ್, ಸಣ್ಣಪುಟ್ಟ ಅಪರಾಧ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದು ಎಂದು ಹೇಳಿದರು.
ಹೆಚ್ಚುವರಿ ಡಿಸಿ ಎಂ.ಎಸ್. ಅರ್ಚನಾ, ವಿಶೇಷ ಭೂ ಸ್ವಾಧೀನಾಧಿಕಾರಿ ಅನಿತಾ, ಡಿಸಿಪಿ ಎ.ಎನ್. ರಾಜಣ್ಣ, ಡಿಸಿಎಫ್ ಕಮಲಾ ಕರಿಕಾಳನ್, ಒರಿಯೆಂಟಲ್ ಇನ್ಸೂರೆನ್ಸ್ ವ್ಯವಸ್ಥಾಪಕ ಮುರಳೀಧರನ್ ಅವರು ಲೋಕ ಅದಲಾತ್ಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಕರ್ನಾಟಕ ವಕೀಲರ ಪರಿಷತ್ತಿನ ಸದಸ್ಯರಾದ ಸಿ.ಎಂ. ಜಗದೀಶ್, ಅಪ್ಪಾಜಿಗೌಡ, ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಬಸವರಾಜು ಇದ್ದರು. 1ನೇ ಹೆಚ್ಚುವರಿ ನ್ಯಾಯಾಧೀಶ ರುದ್ರಮುನಿ ಸ್ವಾಗತಿಸಿದರು.
ಬಾಕಿಯಿರುವ ಪ್ರಕರಣಗಳ ವಿವರ....
ಸಿವಿಲ್ ಪ್ರಕರಣಗಳು ಮೈಸೂರು ನಗರ ತಾಲೂಕುಗಳಲ್ಲಿ
ಸಾಲ ವಸೂಲಿ ಬಾಕಿ 1468 1223
ಪಾಲು ವ್ಯಾಜ್ಯ 3324 2353
ವಾಹನ ಅಪಘಾತ 1171 322
ಭೂ ಸ್ವಾಧೀನ ಪರಿಹಾರ 598 474
ಕಾರ್ಯಗತ ಪ್ರಕರಣಗಳು 6255 2504
ಒಟ್ಟು 12,816 6876
ಕ್ರಿಮಿನಲ್ (ಅಪರಾಧಿಕ) ಪ್ರಕರಣಗಳು
ರಾಜಿಯಾಗುವ ಅಪರಾಧ 970 1615
ಎನ್ಐ ಕಾಯ್ದೆ (ಕಲಂ-138) 7055 4010
ಲಘು ಅಪರಾಧ 0 46
ಒಟ್ಟು 8025 5671
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

