ಮೈಸೂರು

ರಾತ್ರೋರಾತ್ರಿ ಬೇರೆ ಹಾಸ್ಟೆಲ್ಗೆ ವಿದ್ಯಾರ್ಥಿನಿಯರ ಶಿಫ್ಟ್

Published On :

ಕ.ಪ್ರ.ವಾರ್ತೆ    ಮೈಸೂರು    ಫೆ. 3
ವಿದ್ಯಾರ್ಥಿಗಳು ವಾಸವಾಗಿದ್ದ ಹಾಸ್ಟೆಲ್ಗೆ ವಿದ್ಯಾರ್ಥಿನಿಯರನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ಸ್ಥಳಾಂತರಿಸಿರುವ ಘಟನೆ ನಗರದಲ್ಲಿ ನಡೆದಿದೆ.
ವಿವಿ ಮೊಹಲ್ಲಾ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ 400ಕ್ಕೂ ಹೆಚ್ಚು ವಿವಿಧ ಪದವಿ ವಿದ್ಯಾರ್ಥಿನಿಯರು ಇದ್ದರು. ಇವರೊಂದಿಗೆ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿಯರು ಸಹ ಇದ್ದಾರೆ. ಈ ಹಾಸ್ಟೆಲ್ನಲ್ಲಿ ಪಿಯುಸಿ ವಿದ್ಯಾರ್ಥಿನಿಯರಿಗೆ ಜಾಗ ಸಾಲುತ್ತಿಲ್ಲ. ಹೀಗಾಗಿ ಪದವಿ ವಿದ್ಯಾರ್ಥಿನಿಯರನ್ನು ಶನಿವಾರ ರಾತ್ರಿ ಬಲವಂತವಾಗಿ ಖಾಲಿ ಮಾಡಿಸಿದ್ದಾರೆ. ರಾತ್ರಿ 10ರ ನಂತರ ಲಾರಿಯಲ್ಲಿ ಬೋಗಾದಿ ಬ್ಯಾಂಕ್ ನೌಕರರ ಬಡಾವಣೆಯಲ್ಲಿರುವ ವರ್ಗಿಕೃತ ಬಾಲಕರ ಕಾನೂನು ವಿದ್ಯಾರ್ಥಿನಿಲಯಕ್ಕೆ ಕರೆತಂದಿದ್ದಾರೆ. ಆದರೆ, ಬೋಗಾದಿ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳು ಇದ್ದದ್ದನ್ನು ಕಂಡು ವಿದ್ಯಾರ್ಥಿನಿಯರು ಗಾಬರಿಯಾಗಿದ್ದಾರೆ.
ವಿದ್ಯಾರ್ಥಿಗಳನ್ನು ಖಾಲಿ ಮಾಡಸದೇ ತಮ್ಮನ್ನು ಇಲ್ಲಿಗೆ ಕರೆ ತಂದಿರುವುದು ಸರಿಯಲ್ಲ ಎಂದು ವಿದ್ಯಾರ್ಥಿನಿಯರು ಪ್ರತಿಭಟಿಸಿದರು. ಇದೇ ವೇಳೆ ವರ್ಗೀಕೃತ ಬಾಲಕರ ಕಾನೂನು ವಿದ್ಯಾರ್ಥಿನಿಲಯದಲ್ಲಿರುವ 52 ಕಾನೂನು ವಿದ್ಯಾರ್ಥಿಗಳು, ತಮಗೆ ಬದಲಿ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಈ ಹಾಸ್ಟೆಲ್ ಖಾಲಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಭಾನುವಾರ ಸಹ ಇದೇ ವಿಚಾರವಾಗಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಮಾಜ ಕಲ್ಯಾಣ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದರು. ಅಧಿಕಾರಿಗಳ ಮಾತಿನಿಂದ ಮನನೊಂದ ಕೆಲವು ವಿದ್ಯಾರ್ಥಿನಿಯರು ವಿವಿ ಮೊಹಲ್ಲಾದಲ್ಲಿರುವ ಹಾಸ್ಟೆಲ್ಗೆ ವಾಪಸ್ ಹೋಗಿದ್ದಾರೆ. ಇಲ್ಲಿನ ವಾರ್ಡನ್ ಸಹ ಈ ವಿದ್ಯಾರ್ಥಿನಿಯರಿಗೆ ಊಟ ಕೊಡದಂತೆ ಸೂಚಿಸಿದ್ದಾರೆ.
ವಿದ್ಯಾರ್ಥಿನಿಯರು ತಮಗಾಗುತ್ತಿರುವ ತೊಂದರೆ ಹಿನ್ನೆಲೆಯಲ್ಲಿ ಬೋಗಾದಿ ಹಾಸ್ಟೆಲ್ನಲ್ಲಿ ಭಾನುವಾರ ರಾತ್ರಿ ಪ್ರತಿಭಟಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸರಸ್ವತಿ ಅವರು ವಿದ್ಯಾರ್ಥಿನಿಯರೊಂದಿಗೆ ವಾಗ್ವಾದ ನಡೆಸಿದರು.
ಏನು ಸಮಸ್ಯೆ: ಸಮಾಜ ಕಲ್ಯಾಣ ಇಲಾಖೆಯು ರಾಮಕೃಷ್ಣನಗರ, ವಿವಿ ಮೊಹಲ್ಲಾ ಮತ್ತು ಆನಂದೂರು ಹಾಸ್ಟೆಲ್ಗಳಲ್ಲಿದ್ದ ಪದವಿ ವಿದ್ಯಾರ್ಥಿನಿಯರನ್ನು ಬೋಗಾದಿ ಹಾಸ್ಟೆಲ್ಗೆ ವರ್ಗಾಯಿಸಿದೆ. ಮೂರು ಹಾಸ್ಟೆಲ್ಗಳಿಂದ 670 ವಿದ್ಯಾರ್ಥಿನಿಯರಿದ್ದು, ಇಷ್ಟು ಮಂದಿಗೆ ಬೋಗಾದಿ ಹಾಸ್ಟೆಲ್ನಲ್ಲಿ ಜಾಗ ಸಾಲುತ್ತಿಲ್ಲ. ಅಲ್ಲದೆ, ಕೆಲವು ವಿದ್ಯಾರ್ಥಿನಿಯರಿಗೆ ಕಾಲೇಜುಗಳು ದೂರವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹಾಗೂ ಹಾಸ್ಟೆಲ್ ವಾರ್ಡನ್ಗಳ ವರ್ತನೆ ವಿರುದ್ಧ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಜಂಟಿಯಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.
ವಿದ್ಯಾರ್ಥಿನಿಯರು ಹೇಳುವುದು ಏನು: ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಬೋಗಾದಿಯಲ್ಲಿ ಉಳಿದುಕೊಳ್ಳಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅಂತಿಮ ವರ್ಷದ ವಿದ್ಯಾರ್ಥಿನಿಯರು ವಿವಿ ಮೊಹಲ್ಲಾ ಹಾಸ್ಟೆಲ್ನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಬೇಕು. ನಮ್ಮ ಪದವಿ ಮುಗಿಯಲು ಇನ್ನೂ 3 ತಿಂಗಳು ಮಾತ್ರವಿದೆ. ಈಗಾಗಲೇ ಟ್ಯೂಷನ್, ಕಂಪ್ಯೂಟರ್ ಕ್ಲಾಸ್ ಸೇರಿಕೊಂಡಿರುವವರಿಗೆ ಬೋಗಾದಿ ಹಾಸ್ಟೆಲ್ನಲ್ಲಿ ಉಳಿದುಕೊಳ್ಳುವುದು ಸಾಧ್ಯವಿಲ್ಲ ಎಂದು ವಿದ್ಯಾರ್ಥಿನಿಯರು ಹೇಳಿದರು. ವಿದ್ಯಾರ್ಥಿನಿಯರಾದ ರೂಪಾ, ಬಿ.ಎ. ಸರಸ್ವತಿ, ಪಿ.ಶೋಭಾ, ವಿ.ತ್ರಿವೇಣಿ, ಆರ್. ಮಧು, ದಯಾಮಣಿ, ಡಿ. ಪೂರ್ಣಿಮಾ, ಕಾವ್ಯಶ್ರೀ, ಪಿ.ಅಂಜು, ಅಭಿಲಾಷ, ಸಂಗೀತ, ಚೈತ್ರಾ, ಲೀಲಾವತಿ, ಮೇಘಾ, ಸ್ವಾತಿ, ಮಮತಾ, ಶಾಲಿನಿ, ಜಿ.ಎಂ. ರೂಪ, ಕಾಂಚನ, ಜಯ, ಕಾವ್ಯ, ನಂದಿನಿ, ರೇಖಾ, ಪಿ.ಎಸ್. ಸಿಂಧೂ, ರಮ್ಯಾ ಇದ್ದರು.
ವಿದ್ಯಾರ್ಥಿಗಳು ಹೇಳುವುದು ಹೀಗೆ: ಬೋಗಾದಿ ವರ್ಗೀಕೃತ ಬಾಲಕರ ಕಾನೂನು ವಿದ್ಯಾರ್ಥಿನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡದೇ ಏಕಾಏಕಿ ವಿವಿಧ ಹಾಸ್ಟೆಲ್ಗಳಿದ್ದ ವಿದ್ಯಾರ್ಥಿನಿಯರನ್ನು ವರ್ಗಾಯಿಸಿದ್ದಾರೆ. ನಾವು ಹಾಸ್ಟೆಲ್ನಲ್ಲಿ ಇಲ್ಲದಿರುವ ಸಮಯದಲ್ಲಿ, ಯಾವುದೇ ಮಾಹಿತಿ ನೀಡದೇ ಕೊಠಡಿಗಳ ಬೀಗ ಮುರಿದು ಒಳ ಪ್ರವೇಶಿಸಿದ್ದಾರೆ. ನಮ್ಮ ಅಂಕಪಟ್ಟಿ ಸೇರಿದಂತೆ ಹಲವು ವಸ್ತುಗಳು ಮಾಯವಾಗಿವೆ ಎಂದು ವಿದ್ಯಾರ್ಥಿಗಳು ದೂರಿದರು.
ಸಮಾಜ ಕಲ್ಯಾಣಾಧಿಕಾರಿಗಳು ವಿದ್ಯಾರ್ಥಿಗಳನ್ನು ಅವಾಚ್ಯವಾಗಿ ನಿಂದಿಸಿ, ಅಸಭ್ಯವಾಗಿ ವರ್ತಿಸಿದ್ದಾರೆ. ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಯವರು ಶಿಸ್ತು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಸೂಕ್ತ ಹಾಸ್ಟೆಲ್ ದೊರಕಿಸಬೇಕು ಎಂದುಅವರು ಆಗ್ರಹಿಸಿದರು.
ವಿದ್ಯಾರ್ಥಿಗಳಾದ ಎಂ.ಶಿವಕುಮಾರ್, ಜಿ.ಸುರೇಶ, ಬಿ.ಮಹೇಶ, ಶಿವವೆಂಕಟಯ್ಯ, ಕಾರ್ತಿಕ್, ಎಸ್. ಸುರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.