ಶೋಷಿತರು ಸಮಾಜಮುಖಿ ಚಿಂತನೆಗೆ ಮುಂದಾಗಲಿ
ಮೈಸೂರು: ಎಲ್ಲಾ ಶೋಷಿತ ವರ್ಗಗಳು ಒಗ್ಗೂಡಿ ಸಮಾಜಮುಖಿ ಹಾಗೂ ವೈಜ್ಞಾನಿಕ ಚಿಂತನೆಗೆ ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಕರೆ ನೀಡಿದರು.
ಜಿಲ್ಲಾಡಳಿತ ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಎಂಜಿನಿಯರಗಳ ಸಂಸ್ಥೆಯ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಕುಲಕಸಬು ನಡೆಸುತ್ತಿರುವ ಎಲ್ಲಾ ಸಮುದಾಯವನ್ನು ಗೌರವದಿಂದ ಕಾಣುವಂತಾಗಬೇಕು. ಹಾಗೂ ಅವುಗಳು ಅದೇ ವೃತ್ತಿಗಳಲ್ಲಿಯೇ ಮುಂದುವರೆಯಬೇಕೆ ಎಂಬುದರ ಬಗ್ಗೆ ಚರ್ಚೆಯಾಗಬೇಕು. ಶ್ರಮಿಕರು ಹಾಗೂ ಶೋಷಿತರಿಗೆ ಇತರರಂತೆ ಶಿಕ್ಷಣ, ಉದ್ಯೋಗ, ಆಸ್ತಿಗಳಲ್ಲಿ ಸಮಾನತೆಯ ಹಕ್ಕು ದೊರಕಿ ಮುಖ್ಯವಾಹಿನಿಗೆ ಬರುವಲ್ಲಿ ಈ ಸಮುದಾಯಗಳು ಜಾತಿರಹಿತ ಚಿಂತನೆ ನಡೆಸಬೇಕು ಎಂದು ಅವರು ಕರೆ ನೀಡಿದರು.
ಸುಮಾರು 2, 500 ವರ್ಷಗಳ ಹಿಂದೆ ಬುದ್ಧ ಸಮ ಸಮಾಜದ ಕನಸು ಕಂಡವರು. 12 ನೇ ಶತಮಾನದಲ್ಲಿ ಬಸವಣ್ಣ ಸೇರಿದಂತೆ ಅನೇಕ ಶರಣರು ಸಮಾಜದ ತಾರತಮ್ಯ ಹಾಗೂ ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ವಚನ ಚಳವಳಿ ನಡೆಸಿದವರು. ಎಲ್ಲಾ ಶೋಷಿತರ ಶ್ರೇಯಸ್ಸಿಗಾಗಿ ಸಾಮಾಜಿಕ ಕ್ರಾಂತಿ ನಡೆಸಿದರು. ಆದರೆ ಇಂದು ವಿದ್ಯಾವಂತರು ಹಾಗೂ ಬುದ್ಧಿವಂತರು ಹೆಚ್ಚಾಗಿರುವ ಈ ಸಮಾಜದಲ್ಲಿ ಅಸಮಾನತೆ ನಿವಾರಣೆಯಾಗಿಲ್ಲ ಎಂದು ಅವರು ವಿಷಾದಿಸಿದರು.
ಬಸವಣ್ಣ, ಅಕ್ಕಮಹಾದೇವಿ ಮುಂತಾದ ಶರಣರ ಸಮಕಾಲೀನರಾದ ಶಿವಯೋಗಿ ಸಿದ್ಧರಾಮೇಶ್ವರರು ಕೇವಲ ಬೋವಿ ಜನಾಂಗದ ಏಳಿಗೆಗಾಗಿ ಶ್ರಮಿಸಿದವರಲ್ಲ, ಲೋಕಕಲ್ಯಾಣಕ್ಕಾಗಿ ವಚನ ಸಾಹಿತ್ಯದ ಮೂಲಕ ಚಳವಳಿ ನಡೆಸಿದವರು. ವಚನಕಾರರ ಧಾರ್ಮಿಕ ಚಿಂತನೆಯನ್ನು ಮಾನವ ಕುಲದ ಒಳತಿಗಾಗಿ ಬಳಸಿಕೊಳ್ಳಬೇಕು. ಆದರಿಂದ ಜಾತಿಯ ಬಂಧನದಿಂದ ಜಯಂತಿಗಳು ಮುಕ್ತವಾಗಬೇಕು. ಆ ದಿಕ್ಕಿನಲ್ಲಿ ಸಮಾಜ ಬದಲಾವಣೆಯಾಗಬೇಕು ಎಂದು ಅವರು ಆಶಿಸಿದರು.
ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿದ ಫಲವಾಗಿ ದಲಿತರು ಸೇರಿದಂತೆ 101 ಉಪಜಾತಿಗಳು ಪರಿಶಿಷ್ಟ ಜಾತಿಯ ಸೌಲಭ್ಯ ಪಡೆಯುತ್ತಿವೆ. ಬೋವಿ, ಕೊರಮ, ಲಂಬಾಣಿ ಮುಂತಾದ ಜನಾಂಗ ಪರಿಶಿಷ್ಟ ಜಾತಿಗೆ ಸೇರಿವೆ. ಕಳೆದ 50 ವರ್ಷಗಳಿಂದ ಈ ಸಮುದಾಯಗಳ ಅಭಿವೃದ್ಧಿ ಹೇಗೆ ಸಾಗಿದೆ. ಹಾಗೂ ಅದರ ಹಿನ್ನೆಡೆಗೆ ಕಾರಣವೇನೆಂಬ ಆತ್ಮಾವಲೋಕನ ನಡೆಯಬೇಕು. ಇದಕ್ಕೆ ಶೋಷಿತ ಸಮುದಾಯದ ಮಠಗಳ ಜತೆಗೆ ಮುಂದುವರೆದ ಸಮುದಾಯಗಳ ಮಠಗಳ ಮಾರ್ಗದರ್ಶನವೂ ಹಾಗೂ ಸಹಕಾರ ಅಗತ್ಯವಾಗಿದೆ ಎಂದರು.
ಬಾಗಲಕೋಟೆ ಸಿದ್ದರಾಮೇಶ್ವರ ಬೋವಿ ಗುರುಪೀಠದ ಸಿದ್ಧರಾಮೇಶ್ವರ ಸ್ವಾಮೀಜಿ ಹಾಗೂ ಬಸವಕೇಂದ್ರದ ಬಸವಲಿಂಗಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಾಮರಾಜ ಕ್ಷೇತ್ರ ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು. ಚಾಮುಂಡೇಶ್ವರಿ ಕ್ಷೇತ್ರ ಶಾಸಕ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಜಿ.ಪಂ. ಅಧ್ಯಕ್ಷ ಎಂ. ಮಹದೇವು, ತಾ.ಪಂ. ಅಧ್ಯಕ್ಷೆ ನಿರ್ಮಲ ಮುಖ್ಯ ಅತಿಥಿಗಳಾಗಿದ್ದರು.
ಕನ್ನಡ ಪಂಡಿತ ಪ್ರೊ. ಶಿವರಾಮೇಗೌಡ ಮುಖ್ಯ ಭಾಷಣಕಾರರಾಗಿದ್ದರು. ಜಿಲ್ಲಾಧಿಕಾರಿ ಸಿ. ಶಿಖಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ನಿರ್ಮಲ ಮಠಪತಿ, ಜನಾಂಗದ ಮುಖಂಡ ಟಿ. ಗೋಪಾಲ್, ಡಿ. ಗೋಪಾಲ್, ರಾಮಕೃಷ್ಣಪ್ಪ, ಸಿದ್ದರಾಮಯ್ಯ, ಜಿ. ನಾಗರಾಜು ಇದ್ದರು. ಉಪವಿಭಾಗಾಧಿಕಾರಿ ಬಸವರಾಜು ಸ್ವಾಗತಿಸಿದರು. ಜಿಲ್ಲಾ ಬೋವಿ ಜನಾಂಗದ ಅಧ್ಯಕ್ಷ ಸೀತಾರಾಮು ಪ್ರಾಸ್ತಾವಿಕ ಮಾತುಗಳಾಡಿದರು. ಇದಕ್ಕೂ ಮುನ್ನ ನವೀನ್ ತಂಡದವರು ವಚನ ಗಾಯನ ನಡೆಸಿಕೊಟ್ಟರು.
ಮೆರವಣಿಗೆ: ಶಿವಯೋಗಿ ಸಿದ್ಧರಾಮ ಜಯಂತಿ ಅಂಗವಾಗಿ ಅರಮನೆ ಮುಂಭಾಗ ಏರ್ಪಡಿಸಿದ್ದ ಮೆರವಣಿಗೆಯನ್ನು ಮೇಯರ್ ಎನ್.ಎಂ. ರಾಜೇಶ್ವರಿ ಉದ್ಘಾಟಿಸಿದರು. ಶಾಸಕ ವಾಸು, ಜಿಲ್ಲಾಧಿಕಾರಿ ಸಿ. ಶಿಖಾ ಇದ್ದರು. ನಂತರ ಅಲ್ಲಿಂದ ಕಲಾತಂಡಗಳೊಂದಿಗೆ ತೆರಳಿದ ಉತ್ಸವವು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಭಾ ಭವನ ತಲುಪಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

