ಮೈಸೂರು

ಕೆ.ಆರ್. ನಗರ: ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

Published On :

ಕೆ.ಆರ್. ನಗರ: ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಎಬಿವಿಪಿ ಪದಾಧಿಕಾರಿಗಳು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟಿಸಿದರು. ಪಟ್ಟಣದ ಕಾಲೇಜು ಆವರಣದಲ್ಲಿ ಸಮಾವೇಶಗೊಂಡ ಪರಿಷತ್ ಪದಾಧಿಕಾರಿಗಳು, ಕಾರ್ಯಕರ್ತರು ಗರುಡಗಂಭ ವೃತ್ತ, ವಿ.ವಿ. ರಸ್ತೆ ಮೂಲಕ ಮಿನಿ ವಿಧಾಸೌಧಕ್ಕೆ ಮೆರವಣಿಗೆ ತೆರಳಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರಿದ್ದು ಪ್ರತಿ ತಿಂಗಳು ರು. 8 ಸಾವಿರ ವೇತನ ಪಡೆಯುತ್ತಿದ್ದಾರೆ. ಆದರೆ ವೇತನವನ್ನು 2 ವರ್ಷಕ್ಕೊಮ್ಮೆ 2 ಬಾರಿ ನೀಡಲಾಗುತ್ತದೆ. ಇದರಿಂದ ಉಪನ್ಯಾಸಕರು ಬೋಧಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರ ಇವರ ಬೇಡಿಕೆಗೆ ಸ್ಪಂದಿಸಬೇಕು ಎಂದು  ಅವರು ಒತ್ತಾಯಿಸಿದರು.
ಅಸಮರ್ಪಕ ವೇತನ ನೀಡುತ್ತಿರುವುದರಿಂದ ಪ್ರತಿದಿನ 2 ರಿಂದ 3 ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗಿದೆ. ಅತಿಥಿ ಉಪನ್ಯಾಸಕರಿಗೆ ವಾರಕ್ಕೆ 16 ಗಂಟೆ ಕೆಲಸ ನೀಡಿ ಪ್ರತಿ ತಿಂಗಳು ರು. 25 ಸಾವಿರ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಡಿ.ವಿ. ರುಚಿತಾ, ಡಿ.ಎಚ್. ರಶ್ಮಿ, ಆನಂದ, ಮಂಜುನಾಥ್, ಕೃಷ್ಣವೇಣಿ, ಹೇಮಂತ್, ಮಹೇಶ್, ಕೆ.ಎ. ಪ್ರೀತಿ, ಎಚ್.ಜಿ. ಸಂಧ್ಯಾರಾಣಿ ಇದ್ದರು.
ಇಂದು ವಿಮಾ ಸೇವೆಗಳ ಸವಾಲು ಕುರಿತು ವಿಚಾರ ಸಂಕಿರಣ
ಮೈಸೂರು: ಮೈಸೂರು ವಿಮಾ ಸಂಸ್ಥೆಯು ಊಟಿ ರಸ್ತೆಯ  ಜೆಎಸ್‌ಎಸ್‌ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಫೆ. 8ರ ಬೆಳಗ್ಗೆ 10ಕ್ಕೆ ವಿಮಾ ಸೇವೆಗಳ ಮುನ್ನಡೆ ಮತ್ತು ಸವಾಲುಗಳು ಕುರಿತು ಒಂದು ದಿನದ ವಿಚಾರ ಸಂಕಿರಣ ಆಯೋಜಿಸಿದೆ. ಅಂದು ಬೆಳಗ್ಗೆ 10ಕ್ಕೆ ರಾಷ್ಟ್ರಮಟ್ಟದ ವಿಮಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಜಾಗತಿಕ ಕಾರ್ಮಿಕ ಹಕ್ಕುಗಳ ಸಂಸ್ಥೆಯ ದಕ್ಷಿಣ ಏಷ್ಯಾ ಕಾರ್ಯದರ್ಶಿ ಅಮಾನುಲ್ಲಾ ಖಾನ್ ಕಾರ್ಯಕ್ರಮ ಉದ್ಘಾಟಿಸುವರು. ಪ್ರೊ.ಎಸ್.ಪಿ. ಮಂಜುನಾಥ್ ಅಧ್ಯಕ್ಷತೆ ವಹಿಸುವರು. ಮುಂಬೈನ ವಿಮಾ ಕಾಲೇಜಿನ ನಿರ್ದೇಶಕ ಡಾ. ಜಾರ್ಜ್ ಥಾಮಸ್ ಗೌರವ ಅತಿಥಿಯಾಗಿ ಆಗಮಿಸುವರು. ಉದಾರೀಕರಣದ ನಂತರದಲ್ಲಿ ಜೀವ ವಿಮೆ, ಸಾಮಾನ್ಯ ವಿಮೆ ಸ್ಥಿತಿಗತಿಬಗ್ಗೆ ಚರ್ಚೆ ನಡೆಯಲಿದೆ. ಎಲ್‌ಐಸಿಮೈಸೂರು ವಿಭಾಗೀಯ ಹಿರಿಯ ವ್ಯವಸ್ಥಾಪಕ ಪಿ. ಶ್ರೀಧರ್, ಡಾ.ಎ. ಬಾಲಸುಬ್ರಮಣ್ಯನ್ ಡಾ.ಜಿ. ಕೊಟ್ರೇಶ್ವರ ಇತರರು ಭಾಗವಹಿಸುವರು.
ಸಂಸದರಿಂದ ರೈಲ್ವೆ ಕಾಮಗಾರಿ ಪರಿಶೀಲನೆ
ಮೈಸೂರು: ಸಂಸದ ಆರ್. ಧ್ರುವನಾರಾಯಣ್ ಚಾಮರಾಜನಗರ ಸಮೀಪ ರೈಲ್ವೆ ಕಾಮಗಾರಿ ಪರಿಶೀಲಿಸಿದರು.
ಚಾಮರಾಜನಗರ ಸಮೀಪದ ಮರಿಯಾಲ ಬಳಿ ರೈಲ್ವೆ ನಿಲ್ದಾಣ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಸದ್ಯದಲ್ಲಿಯೆ ಕಾರ್ಯರೂಪಕ್ಕೆ ಬರಲಿದೆ ಎಂದು ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ರಾಜ್‌ಕುಮಾರ್ ಲಾಲ್ ಸಂಸದರಿಗೆ ಮಾಹಿತಿ ನೀಡಿದರು.
ರೈಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಚಾಮರಾಜನಗರದಿಂದ ಕೊಳ್ಳೇಗಾಲ, ಮಳವಳ್ಳಿ, ಕನಕಪುರ ಮಾರ್ಗವಾಗಿ ಬೆಂಗಳೂರು ಸಂಪರ್ಕಿಸುವ ಕಾಮಗಾರಿಗೆ ಸದ್ಯದಲ್ಲಿಯೆ ಚಾಲನೆ ನೀಡುವರು. ಅಲ್ಲದೆ ಚಾಮರಾಜನಗರದಿಂದ ಬೆಂಗಳೂರಿಗೆ ಮುಂಜಾನೆಯ ರೈಲು ವ್ಯವಸ್ಥೆ ಬೇಕಿದೆ. ಬೆಂಗಳೂರಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರ ಹಿತದೃಷ್ಟಿಯಿಂದ ಈ ಹೊಸ ರೈಲು ಸಂಪರ್ಕ ಅಗತ್ಯ ಎಂದು ಹೇಳಿದರು. ನಂಜನಗೂಡು ಮತ್ತು ಮೈಸೂರು ನಡುವೆ ಮತ್ತಷ್ಟು ರೈಲು ಸಂಚರಿಸಬೇಕಾದ ಅಗತ್ಯವಿದೆ. ಆ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು.
ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
ಮೈಸೂರು: ರೈತ ಆಕ್ರೋಶ ದಿನದ ಅಂಗವಾಗಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದವರು ಶುಕ್ರವಾರ ಮೈಸೂರು ರೈಲು ನಿಲ್ದಾಣ ಎದುರು ಶುಕ್ರವಾರ ಪ್ರತಿಭಟಿಸಿದರು.
ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು. ಜಿಲ್ಲೆಯ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಾರಂಭಿಸಬೇಕು. ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ರೈತರು ವೇಬ್ರಿಡ್ಜ್ ನಿರ್ಮಾಣಕ್ಕೆ ಅವಕಾಶ ನೀಡಬೇಕು. ಅವೈಜ್ಞಾನಿಕವಾಗಿ ಏರಿಸಿರುವ ರಸಗೊಬ್ಬರ ಬೆಲೆ ಇಳಿಸಬೇಕು. ಎಲ್ಲ ಬೆಳೆಗಳಿಗೆ ಸಮರ್ಪಕವಾದ ಬೆಲೆ ನಿಗದಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂಬಂಧ ಸರ್ಕಾರಕ್ಕಾಗಿ ಈಗಾಗಲೇ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ, ಕಾರ್ಯಕರ್ತರು ರೈಲು ತಡೆಯಲು ಯತ್ನಿಸಿದರು. ಆದರೆ, ಪೊಲೀಸರುಅವಕಾಶ ನೀಡಲಿಲ್ಲ.
ಬಿಜೆಪಿ ಜಿಲ್ಲಾಧ್ಯಕ್ಷ ಹೇಮಂತ್‌ಕುಮಾರ್‌ಗೌಡ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಜೋಗಿಗೌಡ, ಹೂಟಗಳ್ಳಿ ದೇವರಾಜು, ಗೋಪಾಲರಾವ್ ಇದ್ದರು.
ಎಲ್ಲ ಉಪ ನೋಂದಣಾಧಿಕಾರಿ ಕಚೇರಿ ಸ್ಥಳಾಂತರಿಸಲು ಆಗ್ರಹಿಸಿ ಪ್ರತಿಭಟನೆ
ಮೈಸೂರು: ಮೈಸೂರಿನಲ್ಲಿರುವ ನಾಲ್ಕು ಉಪ ನೋಂದಣಾಧಿಕಾರಿಗಳ ಕಚೇರಿಗಳನ್ನು ಒಂದೇ ಸೂರಿನಡಿಯಲ್ಲಿ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು. ನಾಲ್ಕು ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ನಗರದ ನಾಲ್ಕು ದಿಕ್ಕಿನಲ್ಲಿ ಸ್ಥಾಪಿಸಲಾಗಿದೆ. ಆದರೆ, ಇದರಿಂದ ನಗರದ ವಿವಿಧ ಬಡಾವಣೆಯ ನಿವಾಸಿಗಳಿಗೆ ಹಾಗೂ ಮೈಸೂರು ತಾಲೂಕಿನ ಗ್ರಾಮಸ್ಥರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲ ಉಪ ನೋಂದಣಾಧಿಕಾರಿಗಳ ಕಚೇರಿಗಳನ್ನು ಮಿನಿಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಅವರು ಒತ್ತಾಯಿಸಿದರು. ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಪ್ರಧಾನ ಕಾರ್ಯದರ್ಶಿ ಆರ್. ಮನಮೋಹನ್, ಮುಖಂಡರಾದ ಜೆ.ಪಿ. ಗೌಡ, ನಾರಾಯಣಗೌಡ, ಪ್ರಭುಶಂಕರ್, ಜಗದೀಶ್, ಕೃಷ್ಣ, ದೇವರಾಜು, ಭರತ್, ಪ್ರಶಾಂತ್, ಸುಬ್ಬೇಗೌಡ, ನಂಜುಂಡಸ್ವಾಮಿ, ಗುರು, ರಮೇಶ್, ಪ್ರೀತಮ್, ಅಜಿತ್, ವಿಜಯ್, ಮನು, ನಿಖಿಲ್, ಸ್ವಾಮಿ, ತಿಲಕ್, ಸಂತೋಷ್, ಮದನ್, ನವೀನ್ ಇದ್ದರು.
ಆರೋಗ್ಯ ತಪಾಸಣೆ ಉಚಿತ ಶಿಬಿರ ನಾಳೆ
ಮೈಸೂರು: ಜಿಪಂ, ಆಯುಷ್ ಇಲಾಖೆಯಿಂದ ಫೆ. 9ರ ಬೆಳಗ್ಗೆ 10ಕ್ಕೆ ಅಶೋಕ ರಸ್ತೆಯ ಮಸ್ಜಿದ್ ಎ ಅಹಲೆ ಹದೀಸ್ ಅಲ್- ಸಲಫಿಯ ಹತ್ತಿರ ಲಷ್ಕರ್ ಮೊಹಲ್ಲಾದಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರ ಏರ್ಪಡಿಸಲಾಗಿದೆ. ಮೊ. 98452 51004 ಸಂಪರ್ಕಿಸಬಹುದು. ಹೆಬ್ಬಾಳಿನಲ್ಲಿರುವ ರೀವರ್ ವ್ಯೂ ಆಸ್ಪತ್ರೆಯಲ್ಲಿ ಫೆ. 9ರ ಬೆಳಗ್ಗೆ 10ಕ್ಕೆ ಮೂಳೆ, ಕೀಲು ಸಮಸ್ಯೆಗಳಿಗೆ ಆಯುರ್ವೇದ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದ್ದು, ಮೊ. 96202 20024 ಸಂಪರ್ಕಿಸಬಹುದು. ಶಾರದಾದೇವಿನಗರದಲ್ಲಿರುವ ಮಹರ್ಷಿ ಧ್ಯಾನ ಮತ್ತು ವ್ಯಕ್ತಿ ವಿಕಾಸ ಕೇಂದ್ರದಲ್ಲಿ ಫೆ. 9ರ ಬೆಳಗ್ಗೆ 10ಕ್ಕೆ ಆಕ್ಯುಪಂಕ್ಚರ್ ತರಬೇತಿ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಿದ್ದು, ಮೊ. 99728 30013 ಸಂಪರ್ಕಿಸಬಹುದು.
ಕಾರ್ಯಾಗಾರ ಮುಂದೂಡಿಕೆ
ಚಾಮರಾಜ ಮೊಹಲ್ಲಾದಲ್ಲಿರುವ ನವೋದಯ ಫೌಂಡೇಷನ್‌ನಲ್ಲಿ ಫೆ. 9 ರಂದು ಏರ್ಪಡಿಸಿದ್ದ ಮನೋ ಸಾಮರ್ಥ್ಯ ಕಾರ್ಯಾಗಾರವನ್ನು ಫೆ. 16ಕ್ಕೆ ಮುಂದೂಡಲಾಗಿದೆ ಎಂದು ಡಾ.ಎಸ್.ಆರ್. ರವಿ ತಿಳಿಸಿದ್ದಾರೆ. ಮೊ. 96860 72224 ಸಂಪರ್ಕಿಸಬಹುದು.
ಹಣ್ಣು ಹಂಪಲು ವಿತರಣೆ ನಾಳೆ
ಜನರಿಂದ ಜನರಿಗೆ ಸಂಸ್ಥೆಯಿಂದ ಫೆ. 9ರ ಬೆಳಗ್ಗೆ 9ಕ್ಕೆ ಮಾನಂದವಾಡಿ ರಸ್ತೆಯಲ್ಲಿರುವ ಜೈನ್ ಎಜುಕೇಷನ್ ಟ್ರಸ್ಟ್‌ನ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎನ್. ವಿಠಲ್ ತಿಳಿಸಿದ್ದಾರೆ.
ಕಚೇರಿ ಉದ್ಘಾಟನೆ
ಕರ್ನಾಟಕ ದಲಿತ ವೇದಿಕೆಯ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಫೆ. 9ರ ಬೆಳಗ್ಗೆ 11ಕ್ಕೆ ಕೆಎಸ್‌ಆರ್‌ಟಿಸಿ ಬಿಲ್‌ಡಿಂಗ್ 2ನೇ ಮಹಡಿಯಲ್ಲಿ ಏರ್ಪಡಿಸಲಾಗಿದೆ ಎಂದು ನಾಗನಹಳ್ಳಿ ಎಂ. ರೇವಣ್ಣ ತಿಳಿಸಿದ್ದಾರೆ.
ಟಿಕೆಟ್ ರಹಿತ ರೈಲು ಪ್ರಯಾಣ: 85 ಜನರಿಂದ ದಂಡ ವಸೂಲು
ಮೈಸೂರು: ನಗರದ ರೈಲು ನಿಲ್ದಾಣದಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ 85 ಮಂದಿಯ ವಿರುದ್ಧ ನೈಋತ್ಯ ರೈಲ್ವೆ ಮೈಸೂರು ವಿಭಾಗದ ಅಧಿಕಾರಿಗಳು ಮತ್ತು ಆರ್‌ಪಿಎಫ್ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿ, 45,585 ರು. ದಂಡ ವಸೂಲಿ ಮಾಡಿದ್ದಾರೆ.
ಟಿಕೆಟ್ ರಹಿತ ಪ್ರಯಾಣ ಮತ್ತು ಇತರೆ ಅಕ್ರಮಗಳ ವಿರುದ್ಧ ರೈಲು ನಿಲ್ದಾಣದಲ್ಲಿ ಕಾರ್ಯಾಚರಣೆ ಕೈಗೊಂಡು, ಒಟ್ಟಾರೆ 205 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪೈಕಿ ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ 85 ಮಂದಿ ಸಿಕ್ಕಿಬಿದ್ದಿದ್ದಾರೆ.
ಸಹಾಯಕ ವಾಣಿಜ್ಯ ವ್ಯವಸ್ಥಾಪಕ ಜಿ. ಯಶೋದ್‌ಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ರೈಲ್ವೆ ಸಿಬ್ಬಂದಿ ಮತ್ತು ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಭಾಗವಹಿಸಿದ್ದರು.
ರೈಲ್ವೆ ನಿಯಮಗಳ ಪ್ರಕಾರ ದಂಡ ಅಥವಾ ಶಿಕ್ಷೆ ಕೂಡ ವಿಧಿಸಬಹುದಾಗಿದೆ. ಹೀಗಾಗಿ, ರೈಲಿನಲ್ಲಿ ಪ್ರಯಾಣಿಸವು ಸಾರ್ವಜನಿಕರು ನಿಯಮಗಳನ್ನು ಪಾಲಿಸಿ, ಟಿಕೆಟ್ ಪಡೆದು ಪ್ರಯಾಣಿಸುವಂತೆ ನೈಋತ್ಯ ರೈಲ್ವೆ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕೆ. ಅನಿಲ್‌ಕುಮಾರ್ ಕೋರಿದ್ದಾರೆ.
ಇಬ್ಬರು ಮಹಿಳೆಯರು ಪರಾರಿ
ಮೈಸೂರು: ನಗರದ ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮದಲ್ಲಿ ಆಶ್ರಯ ಪಡೆದಿದ್ದ ಇಬ್ಬರು ಮಹಿಳೆಯರು ಪರಾರಿಯಾಗಿದ್ದಾರೆ.ಅಜೀಜ್ ಉಲ್ಲಾ ರೆಹಮಾನ್ ಎಂಬವರ ಪತ್ನಿ ಸಲೀನಾ (25) ಮತ್ತು ಶಹಿನ್ ಎಂಬುವರ ಪತ್ನಿ ಶರ್ಮಿನತ್ತರ್ ರೂನಿ (20) ಪರಾರಿಯಾದವರು. ಈ ಇಬ್ಬರನ್ನು ನಜರ್‌ಬಾದ್ ಠಾಣೆ ಪೊಲೀಸರು ಜ.13 ರಂದು ಶಕ್ತಿಧಾಮಕ್ಕೆ ಸೇರಿಸಿದ್ದರು. ಅದೇ ದಿನ ರಾತ್ರಿ ಇಬ್ಬರು ಪರಾರಿಯಾಗಿದ್ದಾರೆ. ಸಲೀನಾ ಚಹರೆ- 5 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು. ರೂನಿ ಚಹರೆ- 5 ಅಡಿ ಎತ್ತರ, ಬಿಳಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು. ಈ ಇಬ್ಬರು ಹಿಂದಿ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418319, 519 ಸಂಪರ್ಕಿಸಲು ಕೆ.ಆರ್. ಠಾಣೆ ಪೊಲೀಸರು ಕೋರಿದ್ದಾರೆ.
ಸರ ಅಪಹರಣ
ಮೈಸೂರು: ನಗರದಲ್ಲಿ ಮತ್ತೆ ಎರಡು ಕಡೆ ಸರ ಅಪಹರಣ ನಡೆದಿದೆ. ಶಿವರಾತ್ರೀಶ್ವರನಗರದ ಮೀನಾಕ್ಷಿ ಎಂಬವರು ಶುಕ್ರವಾರ ಮುಂಜಾನೆ ಅಂಗಡಿ ಬಾಗಿಲು ತೆಗೆದಾಗ ಹಾಲು ಖರೀದಿಸುವ ನೆಪದಲ್ಲಿ ಬಂದ ವ್ಯಕ್ತಿ 35 ಗ್ರಾಂ. ಚಿನ್ನದ ಮಾಂಗಲ್ಯ ಎಗರಿಸಿದ್ದಾನೆ. ನಂತರ ಓಡಿ ಹೋಗಿ ಸಮೀಪದಲ್ಲಿ ಬೈಕಿನಲ್ಲಿ ನಿಂತಿದ್ದ ತನ್ನ ಸಹಚರನೊಂದಿಗೆ ಪರಾರಿಯಾಗಿದ್ದಾನೆ. ಈ ಸಂಬಂಧ ಎನ್.ಆರ್. ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಗುರುವಾರ ಸಂಜೆ ವಿಶ್ವೇಶ್ವನಗರದಲ್ಲಿರುವ ದೇವಸ್ಥಾನಕ್ಕೆ ತೆರಳಿ ವಾಪಸ್ ಮನೆಗೆ ಹೋಗುತ್ತಿದ್ದ ಮಂಜುಳಾ ಎಂಬವರ 15 ಗ್ರಾಂ. ಚಿನ್ನದ ಸರವನ್ನು ಬೈಕಿನಲ್ಲಿ ಬಂದ ವ್ಯಕ್ತಿ ಎಗರಿಸಿಕೊಂಡು ಹೋಗಿದ್ದಾನೆ.ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿದ್ಯಾರ್ಥಿ ನಾಪತ್ತೆ
ಮೈಸೂರು: ನಗರದ ಬಿಜಿಎಸ್ ಪ್ರೌಢಶಾಲೆ ಬಾಲಕರ ವಿದ್ಯಾರ್ಥಿನಿಲಯದಲ್ಲಿದ್ದ ನಾಗೇಗೌಡ ಎಂಬವರ ಪುತ್ರ ಪಿ.ಎನ್. ಮನೋಜ್ (14) ಬುಧವಾರ ಸಂಜೆಯಿಂದ ನಾಪತ್ತೆಯಾಗಿದ್ದಾನೆ. ಹಾಸ್ಟೆಲ್‌ನಲ್ಲಿ 4 ವರ್ಷಗಳಿಂದ ವಾಸವಾಗಿರುವ ಮನೋಜ್, ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ. ಬುಧವಾರ ಸಂಜೆ ಶಾಲೆಯಿಂದ ಬಂದ ನಂತರ ಸ್ಪೇಷಲ್ ಕ್ಲಾಸ್‌ಗೆ ಹೋದ ಮನೋಜ್ ನಾಪತ್ತೆಯಾಗಿರುವುದಾಗಿ ವಾರ್ಡನ್ ಮುಕುಂದ ಪೊಲೀಸರಿಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.