ಮೈಸೂರು

ಸ್ವಾಭಿಮಾನ ಚಿಗುರೊಡೆದರೆ ಮಾತ್ರ ಕನ್ನಡದ ಏಳ್ಗೆ

Published On :

ಷಡಕ್ಷರ ದೇವ ವೇದಿಕೆ, ಯಳಂದೂರು: ಕನ್ನಡಿಗರಲ್ಲಿ ಭಾಷೆ ಬಗ್ಗೆ ಸ್ವಾಭಿಮಾನ ಚಿಗುರೊಡೆದರೆ ಮಾತ್ರ ಕನ್ನಡ ಕಲ್ಪವೃಕ್ಷವಾಗಲು ಸಾಧ್ಯ ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ. ಪ್ರಶಾಂತ ನಾಯಕ ಹೇಳಿದರು.
 ತಾಲೂಕಿನ ಕಂದಳ್ಳಿ ಗ್ರಾಮದ ಸುವರ್ಣಾವತಿ ನದಿ ಅಂಚಿನಲ್ಲಿರುವ ಮಹದೇಶ್ವರ ದೇವಾಲಯ ಆವರಣದಲ್ಲಿ ಮಹದೇಶ್ವರ ಸಭಾ ಮಂಟಪ ಷಡಕ್ಷರ ದೇವ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಮಾತನಾಡಿದ ಅವರು, ರಾಷ್ಟಕವಿ ಕುವೆಂಪು, ರಾಷ್ಟ್ರಪಿತ ಮಹಾತ್ಮ ಗಾಂಧಿ ಅಂತವರು ಕಂಡ ರಾಮರಾಜ್ಯ, ಪುಣ್ಯಕೋಟಿ, ಭಾಗೀರಥಿಯಂತಹ ಕಥೆಗಳಿಂದ ಭಾಷೆಗೆ ಸ್ವಾಭಿಮಾನ ತಂದು ಕೊಟ್ಟಿತ್ತು. ಆದರೆ, ಇಂದಿನ ದಿನಗಳಲ್ಲಿ ಅರಾಜಕತೆಯಿಂದ ಭಾಷೆ ನಾಶವಾಗುವ ಸ್ಥಿತಿಗೆ ಬಂದಿದೆ ಎಂದು ವಿಷಾದಿಸಿದರು.
ಯುವ ಪೀಳಿಗೆಯ ಇಂಗ್ಲಿಷ್ ವ್ಯಾಮೋಹ:  ಇಂದಿನ ಯುವ ಪೀಳಿಗೆ ಇಂಗ್ಲಿಷ್ ವ್ಯಾಮೋಹದಿಂದ ಕಾನ್ವೆಂಟ್‌ಗಳಿಗೆ ಮಕ್ಕಳನ್ನು ದಾಖಲಿಸಲು ಲಕ್ಷಾಂತರ ರು. ವಂತಿಕೆ ನೀಡುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಕನ್ನಡ ಭಾಷೆ ತಿಳಿವಳಿಕೆ ಕಡಿಮೆಯಾಗಿ, ಕನ್ನಡ ಅಕ್ಷರ ಜ್ಞಾನ ಕೂಡಾ ಮರೆತು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ರಾಜ್ಯದ ಗಡಿ ಅಂಚಿನಲ್ಲಿರುವ ಚಾಮರಾಜನಗರ, ಕೋಲಾರ, ಬೆಳಗಾವಿ ಇತರೆ ಜಿಲ್ಲೆಗಳಲ್ಲಿ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಕೇರಳದಂತಹ ನೆರೆ ರಾಜ್ಯದ ಭಾಷಿಕರು ವ್ಯಾಪಾರ ವ್ಯವಹಾರಗಳಿಂದ ರಾಜ್ಯದ ಜಾಗ ಆಕ್ರಮಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಭಾಷೆ, ನೆಲ, ಜಲ ಸಮಸ್ಯೆ ಎದುರಿಸಲು ಮತ್ತೆ  ಗೋಕಾಕ್‌ನಂತಹ ಚಳವಳಿಗೆ ಜನರು ಮುಂದಾಗ ಬೇಕಾಗುತ್ತದೆ ಎಂದು ಹೇಳಿದರು.
 ಟಿವಿಯಲ್ಲಿ ಪ್ರಸಾರವಾಗುವ ಕೆಲ ಕಾರ್ಯಕ್ರಮಗಳಿಂದ ಸಾಂಸ್ಕೃತಿಕ  ಸೊಗಡಿಗೆ ಸಂಚಕಾರ ಬಂದಿದೆ. ಇದರಿಂದ ಜನಪದ ಕಲೆಗಳಾದ ಕಂಸಾಳೆ ಕುಣಿತ, ವೀರಗಾಸೆ, ಡೊಳ್ಳು ಕುಣಿತ  ಕಲೆಗಳು ನಮ್ಮ ಮುಂದೆಯೇ  ನಶಿಸಿ ಹೋಗುತ್ತಿವೆ ಎಂದು ವಿಷಾದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.