ಲ್ಯಾನ್ಸ್ಡೌನ್ ಕಟ್ಟಡ ಶೀಘ್ರ ನವೀಕರಣ
ಕ.ಪ್ರ.ವಾರ್ತೆ ಮೈಸೂರು ಫೆ. 10
ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಲ್ಯಾನ್ಸ್ ಡೌನ್ ಕಟ್ಟಡ ನವೀಕರಣಕ್ಕೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಹೇಳಿದರು.
ಸೋಮವಾರ ಸ್ಥಳ ಪರಿಶೀಲಿಸಿದ ಅವರು ಅಲ್ಲಿನ ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಿಥಿಲಾವಸ್ಥೆಯಲ್ಲಿರುವ ಈ ಪಾರಂಪರಿಕ ಕಟ್ಟಡವನ್ನು ನೆಲಸಮ ಮಾಡಿ ಹೊಸದಾಗಿ ಕಟ್ಟಡ ನಿರ್ಮಿಸಬಹುದು ಹಾಗೂ ಕಟ್ಟಡ ವಿನ್ಯಾಸವನ್ನು ಉಳಿಸಿಕೊಂಡು ತಾರಸಿ ಮೇಲ್ಭಾಗ ಸೇರಿದಂತೆ ನವೀಕರಣ ಕಾರ್ಯ ನಡೆಸಬಹುದು ಎಂಬ ಎರಡು ರೀತಿಯ ವರದಿಗಳನ್ನು ತಜ್ಞರು ನೀಡಿದ್ದಾರೆ. ಸರ್ಕಾರ ಪಾರಂಪರಿಕ ಕಟ್ಟಡದ ವಿನ್ಯಾಸ ಉಳಿಸಿಕೊಂಡು ನವೀಕರಣ ಕಾರ್ಯಕ್ಕೆ ಮುಂದಾಗಿದೆ ಎಂದರು.
ಈ ನಿರ್ಮಾಣ ಕಾರ್ಯಕ್ಕೆ 8 ಕೋಟಿ ಅಂದಾಜು ವೆಚ್ಚವಾಗಲಿದ್ದು, ಈಗಾಗಲೇ ನಗರ ಪಾಲಿಕೆ ಸಭೆಯು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದೆ. ಸಂಪುಟ ಸಭೆಯಲ್ಲೂ ಈ ವಿಚಾರ ಪ್ರಸ್ತಾಪಿಸಿ, ಬಜೆಟ್ನಲ್ಲಿ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯನ್ನು ಕೋರಲಾಗುವುದು ಎಂದು ತಿಳಿಸಿದರು.
ಸುಮಾರು 132 ವರ್ಷಗಳ ಇತಿಹಾಸ ಹೊಂದಿರುವ ಲ್ಯಾನ್ಸ್ಡೌನ್ ಕಟ್ಟಡದ ಒಂದು ಭಾಗ 2012ರಲ್ಲಿ ಕುಸಿದು ನಾಲ್ವರ ಸಾವಿಗೆ ಕಾರಣವಾಗಿತ್ತು. ಕಟ್ಟಡದ ನವೀಕರಣ ಅಲ್ಲದೆ ಇಲ್ಲಿನ ವ್ಯಾಪ್ಯಾರಸ್ಥರ ಸಮಸ್ಯೆಗಳನ್ನು ಸಹ ಬಗೆಹರಿಸಲಾಗುವುದು. ಅಲ್ಲದೆ ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ ನವೀಕರಣಕ್ಕೂ ಕ್ರಮ ವಹಿಸಲಾಗುವುದು. ಜಿಲ್ಲಾಧಿಕಾರಿಗಳ ನೂತನ ಕಚೇರಿ ನಿರ್ಮಾಣಕ್ಕೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಜಾಗ ಗುರುತಿಸಲಾಗಿದೆ. ಆದರೆ ಈ ಬಗ್ಗೆ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದವರೊಂದಿಗೆ ಚರ್ಚಿಸಲಾಗುವುದು ಎಂದರು.
ಶಾಸಕ ಎಂ.ಕೆ. ಸೋಮಶೇಖರ್, ನಗರ ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಲ್ಯಾನ್ಸ್ ಡೌನ್ ಕಟ್ಟಡ ಬಾಡಿಗೆದಾರರ ಸಂಘದ ಅಧ್ಯಕ್ಷ ಆರ್.ಮೂರ್ತಿ, ಸಿ.ರಂಗಸ್ವಾಮಿ, ಒಣಭೂಮಿ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ. ಮೋಹನ್ಕುಮಾರ್ ಹಾಗೂ ಪಾಲಿಕೆ ಎಂಜಿನಿಯರುಗಳು ಇದ್ದರು.
ನಗರ ಪಾಲಿಕೆ ಕಾಯಂ ನೌಕರರಿಗೆ ಪ್ರತಿ ತಿಂಗಳು ತಪ್ಪದೆ ವೇತನ ಪಾವತಿಸಲು ಸರ್ಕಾರ ವ್ಯವಸ್ಥೆ ಮಾಡಿದೆ. ಆದರೂ ಸರಿಯಾಗಿ ವೇತನ ನೀಡುತ್ತಿಲ್ಲವೆಂದು ಪ್ರತಿಭಟನೆ ನಡೆಸುತ್ತಿರುವ ವಿಚಾರ ಅಶ್ಚರ್ಯ ತಂದಿದೆ. ಸಮಸ್ಯೆಗಳೇನು ಎಂಬುದನ್ನು ಪರಿಶೀಲಿಸಿ ಬಗೆಹರಿಸಲಾಗುವುದು.
ವಿ. ಶ್ರೀನಿವಾಸ ಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

