ಮೈಸೂರು

ಪಶ್ಚಿಮಘಟ್ಟ ರಕ್ಷಣೆ ಕಾಳಜಿ ಸರ್ಕಾರಕ್ಕಿಲ್ಲ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಫೆ. 12
ಪಶ್ಚಿಮಘಟ್ಟ ಪ್ರದೇಶ ವಿಶ್ವ ಪಾರಂಪರಿಕ ತಾಣ ಎಂಬುದು ಯುನೆಸ್ಕೋಗೆ ಅರ್ಥವಾಗಿದೆ. ಆದರೆ ನಮ್ಮ ಸರ್ಕಾರಗಳಿಗೆ ಅರ್ಥವಾಗಿಲ್ಲ ಎಂದು ವಿಶ್ರಾಂತ ಕುಲಪತಿ ಡಾ.ಎಸ್.ಎನ್. ಹೆಗ್ಡೆ ವಿಷಾದಿಸಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಔಷಧ ಸಸ್ಯಗಳಲ್ಲಿ ಜೀವ ವೈವಿಧ್ಯ ಮತ್ತು ಜೀವಾನ್ವೇಷಣೆ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಯುನೆಸ್ಕೋಗೆ ಭಾರತದ ಪಶ್ಚಿಮ ಘಟ್ಟದ ಮಹತ್ವ ತಿಳಿದಿದೆ. ಆದರೆ ನಮ್ಮ ಸರ್ಕಾರಗಳಿಗೆ ಇಲ್ಲಿನ ಮಹತ್ವ ತಿಳಿದಿಲ್ಲ. ಇಲ್ಲಿನ ಸಾವಿರಾರು ಜೀವ ವೈವಿಧ್ಯತೆಗಳು ಅಳಿವಿನ ಅಂಚಿನಲ್ಲಿವೆ. ಸಾಕಷ್ಟು ಪ್ರಮಾಣದ ಔಷಧೀಯ ಸಸ್ಯಗಳು ಇಲ್ಲಿವೆ. ಆದರೆ ನಮ್ಮ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಗಣಿಗಾರಿಕೆಯೊಂದೆ ಪ್ರಮುಖ ಉದ್ದೇಶವಾಗಿದೆ. ಹುಲಿ, ಸಿಂಹದಂತೆ ನೂರಾರು ಪ್ರಾಣಿಗಳ ಸಂಖ್ಯೆ ಕ್ಷೀಣಿಸಿದಾಗ ಅದರ ಮಹತ್ವ ತಿಳಿಯುತ್ತದೆ ಎಂದರು.
ನಮ್ಮ ಕಾಲೇಜುಗಳು ಮತ್ತು ವಿವಿಗಳು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಿಲ್ಲ. ಕೇವಲ ತರಗತಿಗೆ, ಪರೀಕ್ಷೆಗೆ ಸೀಮಿತವಾದ ಬೋಧನೆ ನಡೆಯುತ್ತಿದೆ. ತರಗತಿಯಿಂದಾಚೆಗೆ ಯಾರೂ ಸಂಶೋಧನೆಗೆ ಮುಂದಾಗುತ್ತಿಲ್ಲ. ಏಡ್ಸ್, ಕ್ಯಾನ್ಸರ್, ಹೃದಯ ಸಂಬಂಧಿ ಮಾರಕ ರೋಗಕ್ಕೆ ಸಸ್ಯಗಳಿಂದಲೆ ಔಷಧ ತಯಾರಿಸಬಹುದು. ಆದರೆ ಆ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿಲ್ಲ. ಅನೇಕ ಕಾಲೇಜುಗಳ ಆವರಣದಲ್ಲಿ ಉದ್ಯಾನವನವಾಗಲಿ, ಲಾನ್ ಆಗಲಿ ಇಲ್ಲ. ಸೂಕ್ತ ಪ್ರಯೋಗಾಲಯ ಮತ್ತು ವಸ್ತು ಪ್ರದರ್ಶನದ ವ್ಯವಸ್ಥೆ ಇರುವುದಿಲ್ಲ ಎಂದರು.
ಪರಿಸರ ನಮಗೆ ಅಪರೂಪದ ಕೊಡುಗೆ ನೀಡಿದೆ. ಅದನ್ನು ನಾವು ಬಳಸಿಕೊಳ್ಳಬೇಕು. ಅಲೋಪತಿ ಚಿಕಿತ್ಸೆಯಲ್ಲಿ ಪ್ರತಿ ಔಷಧಿಯಿಂದ ಆಗುವ ಅಡ್ಡ ಪರಿಣಾಮ ಮತ್ತು ತೊಂದರೆಗಳ ಬಗ್ಗೆ ತಿಳಿಸಲಾಗಿರುತ್ತದೆ. ಆದರೆ ಆಯುರ್ವೇದ ಔಷಧಿಯಲ್ಲಿ ಈ ರೀತಿಯ ಮಾಹಿತಿ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಔಷಧ ಸ್ವೀಕರಿಸುವವರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದರು.
ಐಎನ್‌ಎಸ್‌ಎನ ವಿಜ್ಞಾನಿ ಡಾ.ಆರ್. ರಾಘವೇಂದ್ರ ರಾವ್ ಮುಖ್ಯ ಭಾಷಣ ಮಾಡಿದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಟಿ.ಡಿ. ಸುಬ್ಬಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಲೋಕೇಶ್‌ಮೂರ್ತಿ, ಜೆಎಸ್‌ಎಸ್ ಆಯುರ್ವೇದ ಔಷಧ ಕಾಲೇಜು ಪ್ರಾಂಶುಪಾಲ ಡಾ.ಕೆ.ಲಕ್ಷ್ಮೀಶ್ ಉಪಾಧ್ಯಾಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.