ಮೈಸೂರು

ಇಂದಿನಿಂದ ರತ್ನಪುರಿಯಲ್ಲಿ ಭಾವೈಕ್ಯತಾ ಜಾತ್ರೆ

Published On :

ಹುಣಸೂರು: ಹಿಂದೂ-ಮುಸ್ಲಿಂರ ಭಾವೈಕ್ಯ ಬೆಸೆಯುವ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ರತ್ನಪುರಿಯ ಆಂಜನೇಯಸ್ವಾಮಿ ಹಾಗೂ ಹಜರತ್ ಬೀಬಿ ಮಾ ಸಾಹೇಬರ ಗಂಧೋತ್ಸವ ಜಾತ್ರೆ ಫೆ.14ರಿಂದ ನಡೆಯಲಿದೆ. ಜಿಲ್ಲಾಡಳಿತವು ಈ ಬಾರಿ ದನಗಳ ಜಾತ್ರೆಗೆ ಕಡಿವಾಣ ಹಾಕಿರುವುದರಿಂದ ಸಾರ್ವಜನಿಕರಿಗೆ ನಿರಾಸೆ ತಂದಿದೆ.
ರತ್ನಪುರಿ ಜಾತ್ರೆ ಎಂದರೆ ಮನುಜರಲ್ಲಿ ಭಾವೈಕ್ಯತೆಯನ್ನು ಸಾರುವ ಜೊತೆಗೆ, ಭಾರಿ ದನಗಳ ಜಾತ್ರೆ ಎಂದೇ, ಪಕ್ಕದ ತಾಲೂಕಿನ ಚುಂಚನಕಟ್ಟೆ ಜಾತ್ರೆಯ ನಂತರ ಇಲ್ಲಿ ನಡೆಯುವ ದನಗಳ ಜಾತ್ರೆಯೇ ರಾಜ್ಯದಲ್ಲೆ ಪ್ರಸಿದ್ಧಿ ಪಡೆದಿದೆ. ಹೀಗಾಗಿ ಇಲ್ಲಿ ಜನಗಳಿಗಿಂತ ಜಾನುವಾರುಗಳದ್ದೇ ಪಾರುಪತ್ಯ.
ಜಾತ್ರೆಗೆ ವಾರಕ್ಕೆ ಮೊದಲೇ ಜಾತ್ರಾಮಾಳ, ಕಾಲೇಜು ಆವರಣ, ಗದ್ದಿಗೆ ಮುಖ್ಯ ರಸ್ತೆ ಬದಿಯಲ್ಲೇ ಸುಮಾರು 4ರಿಂದ 5 ಸಾವಿರದಷ್ಟು ಜೋಡಿ ಎತ್ತುಗಳು, ಬೀಜದ ಹೋರಿಗಳು, ಎತ್ತಿನ ಗಾಡಿ ಓಟದ ಎತ್ತುಗಳನ್ನು ಕಟ್ಟುತ್ತಿದ್ದರು. ಕೆಲವರು ಶೋಕಿಗಾಗಿ, ಪ್ರತಿಷ್ಠೆಗಾಗಿ ಬಹುತೇಕರು ವ್ಯಾಪಾರ ಮಾಡಲೆಂದೆ ಜಾತ್ರೆಗೆ ಬರುತ್ತಿದ್ದರು. ಇಲ್ಲಿಗೆ ದೂರದ ವಿಜಾಪುರ, ಹುಬ್ಬಳ್ಳಿ-ಧಾರವಾಡ, ತುಮಕೂರು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಎತ್ತುಗಳನ್ನು ಖರೀದಿಸಲು ಬರುತ್ತಾರೆ. ಹೆಚ್ಚು ಬೆಲೆಯ ಎತ್ತುಗಳನ್ನು ಶಾಮಿಯಾನ ಅಳವಡಿಸಿ ಮಕ್ಕಳಿಗಿಂತಲೂ ಹೆಚ್ಚು ಆರೈಕೆ ಮಾಡಿ, ಕಡಿಮೆ ಬೆಲೆಯಿಂದ ಹೆಚ್ಚು ಬೆಲೆಯ ಹತ್ತಾರು ಜೋಡಿ ಎತ್ತುಗಳನ್ನು ಜಾತ್ರೆಯಲ್ಲಿ ಪ್ರದರ್ಶನ ಮಾಡುತ್ತಿದ್ದಕ್ಕೆ ಈ ಬಾರಿ ಚಪ್ಪೆ ರೋಗದಿಂದ ಜಾನುವಾರಿಗೆ ಕಾಯಿಲೆ ಹರಡುವ ಭಯದಿಂದ ಜಿಲ್ಲಾಡಳಿತ ಬ್ರೇಕ್ ನೀಡಿದೆ.
50ನೇ ವರ್ಷದ ಜಾತ್ರಾ ಮಹೋತ್ಸವ ಇದಾಗಿದ್ದು, ಹಿಂದೂ-ಮುಸ್ಲಿಮರ ಸಹಭಾಗಿತ್ವದಲ್ಲಿ ಆಂಜನೇಯ ಸ್ವಾಮಿಯ ಮಹಾಭಿಷೇಕ ಹಾಗೂ ಹಜರತ್ ಬೀಬೀ ಮಾ ಸಾಹೇಬರ ಗಂಧೋತ್ಸವ (ಉರುಸ್) ನಡೆಯಲಿದೆ.
ಆಗಿನಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಹುಣಸೂರು, ಕುಡಿನೀರು ಮುದ್ದನಹಳ್ಳಿ, ರತ್ನಪುರಿಯಿಂದ ತರುವ ಗಂಧದಿಂದಲೇ ಗಂಧೋತ್ಸವ ನಡೆಯಲಿದೆ. ಅಂದು ಫಕೀರರಿಂದ ಆಕರ್ಷಕ ಚಮತ್ಕಾರ ಪ್ರದರ್ಶನವಿರುತ್ತದೆ. ಅದೇ ರೀತಿ ಆಂಜನೇಯಸ್ವಾಮಿಯ ಪಲ್ಲಕ್ಕಿ ಉತ್ಸವ, ಕೊಂಡೋತ್ಸವ ಸಹ ನಡೆಯಲಿದೆ. ಆದರೆ ಉತ್ಸವ ಮೂರ್ತಿ ಹೊತ್ತ ದೇವರ ರಥ ಎಳೆಯುವ ಪದ್ಧತಿ ಇಲ್ಲಿಲ್ಲ. ಉತ್ಸವದಲ್ಲಿ ಚಂಡೆ ಮೇಳ, ಮಲ್ಲಕಂಬ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ರತ್ನಪುರಿಯ ಅಕ್ಕಪಕ್ಕದ ಧರ್ಮಾಪುರ, ನಂಜಾಪುರ, ಗೌರಿಪುರ, ಕುಡಿನೀರು ಮುದ್ದನಹಳ್ಳಿ, ತರೀಕಲ್, ಕೊಯಮತ್ತೂರು ಕಾಲೋನಿ, ವಿನೋಭ ಕಾಲೋನಿ, ಸಣ್ಣೆಗೌಡರ ಕಾಲೋನಿ, ಹೊನ್ನಿಕುಪ್ಪೆ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳು ಒಂದೊಂದು ಜವಾವ್ದಾರಿ ಹೊತ್ತು ಜಾತ್ರಾ ಯಶಸ್ವಿಗೆ ದುಡಿಯುತ್ತಾರೆ.
ತಾಲೂಕಿನ ಹಿಂದೂ-ಮುಸ್ಲಿಂರ ಭಾವೈಕ್ಯ ಬೆಸೆಯುವ ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿರುವ ರತ್ನಪುರಿಯ ಆಂಜನೇಯಸ್ವಾಮಿ ಹಾಗೂ ಹಜರತ್ ಬೀಬಿ ಮಾ ಸಾಹೇಬರ ಗಂಧೋತ್ಸವ ಜಾತ್ರೆ  ಫೆ.14ರಿಂದ 17ರವರೆಗೆ ನಡೆಯಲಿದೆ ಎಂದು ಶ್ರೀಆಂಜನೇಯ ಸ್ವಾಮಿ ಜಾತ್ರಾ ಸೇವಾ ಸಮಿತಿ ಅಧ್ಯಕ್ಷ ರತ್ನಪುರಿ ಪ್ರಭು ತಿಳಿಸಿದ್ದಾರೆ.
ಈ ಬಾರಿ ಫೆ. 15ರಂದು ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ 25 ಜೊತೆ ಕುಸ್ತಿ ಪಂದ್ಯಾವಳಿ ಹಾಗೂ 16ರಂದು  ಬೆಂಗಳೂರಿನ ದೃಶ್ಯ ಕಲಾವೇದಿಕೆ ತಂಡದಿಂದ ಗುಂಪಲ್ಲಿ ಗೋವಿಂದ ಎಂಬ ನಗೆ ನಾಟಕ ಏರ್ಪಡಿಸಿದೆ. ಫೆ.14ರಂದು ಶಾಸಕ ಎಚ್.ಪಿ. ಮಂಜುನಾಥ್ ಜಾತ್ರೆ ಉದ್ಘಾಟಿಸುವರು. ಫೆ. 15ರ ಬೆಳಿಗ್ಗೆ 8.30ಕ್ಕೆ ಧರ್ಮಾಪುರ ಗ್ರಾಮಸ್ಥರಿಂದ ಕೊಂಡೋತ್ಸವ, ಮಧ್ಯಾಹ್ನ 12ರಿಂದ 3ರವರೆಗೆ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಕುಸ್ತಿ ಪಂದ್ಯಾವಳಿಯನ್ನು ಶಾಸಕ ಜಿ.ಟಿ. ದೇವೇಗೌಡ ಉದ್ಘಾಟಿಸುವರು. ಫೆ.16ರ ರಾತ್ರಿ 8ಕ್ಕೆ ಜಮಾಲಮ್ಮನ ಉರಸ್ ಹಾಗೂ ಗಂಧೋತ್ಸವ ಜರುಗಲಿದೆ. ಜೊತೆಗೆ ಗುಂಪಲ್ಲಿ ಗೋವಿಂದ ಎಂಬ ನಗೆ ನಾಟಕ ಏರ್ಪಡಿಸಿದೆ. ಕೃಷಿ ಇಲಾಖೆ ವತಿಯಿಂದ ಮೂರು ದಿನಗಳ ಕಾಲ ವಸ್ತುಪ್ರದರ್ಶನ ನಡೆಯಲಿದೆ.
ಚಿತ್ರನಟ ಯೋಗೇಶ್ ಹಾಗೂ ಕಿರುತೆರೆ ನಟರು ಭಾಗವಹಿಸುವರು. ಸಮಿತಿ ಗೌರವಾಧಕ್ಷ ಸತ್ಯನಾರಾಯಣರಾವ್ ಖರಾಡೆ, ಪದಾಧಿಕಾರಿಗಳಾದ ನಂದೀಶ, ಕೃಷ್ಣ, ರಾಜ, ಅಶೋಕ ಇದ್ದರು.


- ಧರ್ಮಾಪುರ ನಾರಾಯಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.