ಪ್ರವಾಸಿ ತಾಣವಾಗಿ ಭೀಮನಕೊಲ್ಲಿ ಅಭಿವೃದ್ಧಿ
ಎಚ್.ಡಿ. ಕೋಟೆ: ತಾಲೂಕಿನ ಪ್ರಸಿದ್ಧ ಭೀಮನಕೊಲ್ಲಿ ಕ್ಷೇತ್ರದಲ್ಲಿ ಮಹದೇಶ್ವರ ಸ್ವಾಮಿಯವರು ತಂಗಿದ್ದು, ಅವರ ಪಾದ ಸ್ಪರ್ಶದಿಂದಾಗಿ ಈ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣವಾಗಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುವುದಾಗಿ ಶಾಸಕ ಎಸ್. ಚಿಕ್ಕಮಾದು ಹೇಳಿದರು.
ತಾಲೂಕಿನ ಭೀಮನಕೊಲ್ಲಿ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ನೆಲೆಸುವ ಮುನ್ನ, ತಾಲೂಕಿನ ಹಲವಡೆ ಸಂಚಾರ ಮಾಡಿದ್ದರಿಂದ ಈ ಪ್ರದೇಶದಲ್ಲಿ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನಗಳು ಹೆಚ್ಚಾಗಿವೆ. ದೇವರನ್ನು ಪ್ರತ್ಯಕ್ಷವಾಗಿ ಕಾಣದಿದ್ದರೂ, ನಂಬಿಕೆಯಿಂದ ನೋಡಬೇಕಾಗಿದೆ. ಆದ್ದರಿಂದಲೇ ನಮ್ಮ ದೇಶದ ಪರಂಪರೆ, ಸಂಸ್ಕೃತಿ, ಧಾರ್ಮಿಕ ಭಾವನೆಯನ್ನು ವಿದೇಶಿಯರು ಅನುಕರಣೆ ಮಾಡುತ್ತಿದ್ದಾರೆ ಎಂದರು.
ಸರ್ಕಾರದಿಂದ ಮಂಜೂರಾಗಿರುವ ಒಂದು ಕೋಟಿ ರು. ಗಳಲ್ಲಿ 50 ಲಕ್ಷ ಬಿಡುಗಡೆಯಾಗಿದ್ದು, ಇದರಲ್ಲಿ 14 ಕೊಠಡಿಗಳ ವಸತಿ ಗೃಹ ನಿರ್ಮಾಣವಾಗಿದೆ. ಈ ಕಾಮಗಾರಿ ಪೂರ್ಣಗೊಳಿಸಲು ಉಳಿದ 50 ಲಕ್ಷ ಬಿಡುಗಡೆ ಮಾಡಿಸುವುದಾಗಿ ಹೇಳಿದರು.
ದೇವಸ್ಥಾನ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ಬಿಡುಗಡೆಯಾಗಿದೆ. ಹಾಗೇ ಮೂರ್ಬಾಂದ್‌ನಿಂದ ಭೀಮನಕೊಲ್ಲಿವರೆಗೆ 6 ಕಿಮೀ ರಸ್ತೆ ನಿರ್ಮಾಣಕ್ಕೆ 2.70 ಕೋಟಿ ಮಂಜೂರಾಗಿದ್ದು, ಉತ್ತಮ ರಸ್ತೆ ನಿರ್ಮಾಣವಾಗಲಿದೆ. ಮೂರ್ಬಾಂದ್ ಬಳಿ ದೇವಸ್ಥಾನಕ್ಕೆ ಸ್ವಾಗತ ಕಮಾನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ಎಂ. ಶಿವಣ್ಣ ಕಾರ್ಯಕ್ರಮ ಉದ್ಘಾಟಿಸಿ, ಐತಿಹಾಸಿಕ ಹಿನ್ನೆಲೆ ಇರುವ ಭೀಮನಕೊಲ್ಲಿ ಕ್ಷೇತ್ರವನ್ನು ಸರ್ಕಾರದಿಂದ ಪ್ರವಾಸಿ ತಾಣ ಮಾಡುವಂತೆ ಮನವಿ ಮಾಡಿದರು.
ತಾಪಂ ಉಪಾಧ್ಯಕ್ಷ ಬಿ.ಜಿ. ಮಹೇಂದ್ರ, ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ದೇವದಾಸ್, ದೇವರಾಜು, ಕೆಪಿಸಿಸಿ ಸದಸ್ಯ ಸುಂದರ್ ದಾಸ್, ಗ್ರಾಪಂ ಅಧ್ಯಕ್ಷ ರತ್ನಾಕರ್, ಕಸಾಪ ಅಧ್ಯಕ್ಷ ಡಿ.ಆರ್. ಮಹೇಶ್, ಮುಖಂಡರಾದ ಪಿ. ರವಿ, ಚಾ. ನಂಜುಂಡಮೂರ್ತಿ, ಡಿ. ಸುರೇಂದ್ರ, ವಕೀಲ ನಾರಾಯಣ ಗೌಡ, ಎಂ. ಮಹದೇವು, ಬಿ.ಟಿ. ನರಸಿಂಹಮೂರ್ತಿ, ಸ್ವಾಮಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

