ರೇಲ್ವೆ ಪ್ರಯಾಣಿಕರ ಸೌಕರ್ಯಕ್ಕೆ ಅಗತ್ಯ ಕ್ರಮ
ಮೈಸೂರು: ರಾಜ್ಯದ ರೇಲ್ವೆ ಪ್ರಯಾಣಿಕರ ಮೂಲ ಸೌಕರ್ಯಕ್ಕೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಕೇಂದ್ರ ರೇಲ್ವೆ ಪ್ರಯಾಣಿಕರ ಸಲಹಾ ಹಾಗೂ ಸೌಲಭ್ಯ ಸಮಿತಿ ಅಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಹೇಳಿದರು.
ಮೈಸೂರು ನಗರ ರೇಲ್ವೆ ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ಸಮಿತಿ ಅಧ್ಯಕ್ಷನಾಗಿ ಎರಡು ವರ್ಷ ಅವಧಿ ಇರುವ ಕಾರಣ, ದೇಶದ ವಿವಿಧ ರೇಲ್ವೆ ನಿಲ್ದಾಣಗಳಿಗೆ ಭೇಟಿ ನೀಡಿ, ಅಲ್ಲಿನ ಕುಂದು ಕೊರತೆಗಳನ್ನು ಪಟ್ಟಿ ಮಾಡಿ ಕೂಡಲೇ ಆ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಆದೇಶ ಹೊರಡಿಸುವ ಕೆಲಸ ಮಾಡುತ್ತಿದ್ದೇನೆ ಎಂದರು. ಕಳೆದ ಅಕ್ಟೋಬರ್ನಲ್ಲಿ ಮೈಸೂರು ರೇಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಆಗಬೇಕಾಗಿರುವ ಸವಲತ್ತುಗಳ ಪಟ್ಟಿಯನ್ನು ಅಧಿಕಾರಿಗಳಿಗೆ ನೀಡಲಾಗಿತ್ತು. ಅಂತೆಯೇ ಉಪಹಾರ ಮಂದಿರ, ಶೌಚಾಲಯಗಳ ನಿರ್ಮಾಣ, ಕೂಲಿಕಾರರಿಗೆ ಗುರಿತಿನ ಚೀಟಿ ವಿತರಿಸಲು ಕ್ರಮ ವಹಿಸಿರುವುದು ಸಮಾಧಾನ ತಂದಿದೆ. ಶಾಸಕ ವಾಸು ಅವರು ಮೇಟಗಳ್ಳಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕಂಟೋನ್ಮೆಂಟ್ ಸ್ಥಾಪಿಸುವಂತೆ ಕೋರಿರುವ ಹಿನ್ನೆಲೆಯಲ್ಲಿ ಅದನ್ನು ರೇಲ್ವೆ ಸಚಿವರ ಗಮನಕ್ಕೆ ತರಲಾಗುವುದು ಎಂದರು.
2 ಜಿಲ್ಲೆ ಬಾಕಿ: ಈಗಾಗಲೇ ರಾಜ್ಯದಲ್ಲಿ ಚಾಮರಾಜನಗರ ಹಾಗೂ ಹಾಸನ ಹೊರತು ಪಡಿಸಿದಂತೆ ಎಲ್ಲ ಜಿಲ್ಲೆಗಳ ರೇಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದೇನೆ. ಇಂದೇ ನಂಜನಗೂಡಿಗೂ ತೆರಳಿ ರೇಲ್ವೆ ನಿಲ್ದಾಣಕ್ಕೆ ಭೇಟಿ ನೀಡಲಾಗುವುದು. ನಂತರ ಚಾಮರಾಜನಗರಕ್ಕೆ ಪ್ರಯಾಣ ಮಾಡಿದ ಮೇಲೆ ಬೆಂಗಳೂರಿಗೆ ಹಿಂತಿರುಗಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ನವೀನ್ ಕುಮಾರ್ ಮಾನಿಯಾ, ನೈಋತ್ಯ ರೇಲ್ವೆ ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ. ಸೆಂಥಿಲ್ ಕುಮಾರ್, ನಿಲ್ದಾಣ ವ್ಯವಸ್ಥಾಪಕ ಪಿ. ಸಮುದ್ರಯ್ಯ, ಜಿಲ್ಲಾ ಕಾಂಗ್ರೆಸ್ ನಗರ ಪ್ರಧಾನ ಕಾರ್ಯದರ್ಶಿ ಈಶ್ವರ್ ಚಕ್ಕಡಿ, ಕಾಂಗ್ರೆಸ್ ಮುಖಂಡ ವಿಷಕಂಠಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

