'ಸ್ಪರ್ಧಾತ್ಮಕ ಪರೀಕ್ಷೆಗೆ ಗಂಭೀರ ತಯಾರಿ ಅಗತ್ಯ'
ಮೈಸೂರು: ಐಎಎಸ್, ಕೆಎಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗಂಭೀರವಾಗಿ ತಯಾರಿ ಮಾಡಿಕೊಳ್ಳಬೇಕು. ಆಯ್ಕೆ ವಿಷಯಗಳ ಬಗ್ಗೆ ನಿಖರತೆ ಇರಬೇಕು ಎಂದು ಮೈಸೂರು ಎಸ್ಪಿ ಅಭಿನವ್ ಖರೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಮುಕ್ತ ಗಂಗೋತ್ರಿಯಲ್ಲಿ ಆಯೋಜಿಸಿರುವ 2014ರ ಐಎಎಸ್, ಕೆಎಎಸ್ ಮತ್ತು ಇತರ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರದಲ್ಲಿ ಮಂಗಳವಾರ ಅವರು ವಿಶೇಷ ಉಪನ್ಯಾಸ ನೀಡಿದರು.
ಪರೀಕ್ಷೆ ಬರೆಯುವಾಗ ಪ್ರತಿ ನಿಮಿಷವೂ ಮುಖ್ಯವಾಗುತ್ತದೆ. ಹತ್ತು ವರ್ಷದ ಯುಪಿಎಸ್ಸಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ತಿರುವಿ ಹಾಕಿದರೆ ಪರೀಕ್ಷೆಯ ಸ್ವರೂಪ ಹೇಗಿರಲಿದೆ ಎನ್ನುವ ಕಲ್ಪನೆ ಬರುತ್ತದೆ. ಈಗ ವರ್ಷದಿಂದ ವರ್ಷಕ್ಕೆ ಪರೀಕ್ಷೆ ಮಾದರಿ ಬದಲಾಗುತ್ತಿದೆ. 2011ರಿಂದ ಈಚೆಗೆ ಸಾಕಷ್ಟು ಬದಲಾವಣೆಯಾಗಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ನಿಮ್ಮ ಸುತ್ತಮುತ್ತ ಆಗುತ್ತಿರುವ ಘಟನಾವಳಿಗಳನ್ನು ಗಮನಿಸಬೇಕು. ಹಿಂದೆ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಹೆಚ್ಚು ಪ್ರಶ್ನೆಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ಇರುತ್ತಿದ್ದವು. ಈಗ ಆಹಾರ ಭದ್ರತೆ ಕಾಯ್ದೆ ಪ್ರಮುಖವಾಗಿದೆ. ಹೀಗೆ ಆಯಾ ಕಾಲದ ಘಟನೆಗಳಿಗೆ ಹೆಚ್ಚಿನ ಮಹತ್ವ ಇರುವುದರಿಂದ ಅದರ ಅರಿವು ಇರಬೇಕು ಎಂದರು.
ಮಂಡ್ಯ ಎಸ್ಪಿ ಭೂಷಣ್ ಬೊರಸೆ ಮಾತನಾಡಿ, ವಯಸ್ಸಾಗುತ್ತಾ ಹೋದಂತೆ ನಿಮ್ಮ ಆಸಕ್ತಿ ಕುಂದಿ ಹೋಗುತ್ತದೆ. ಮೊದಲ ಪ್ರಯತ್ನದಲ್ಲಿಯೇ ನಾನು ಯಶಸ್ವಿಯಾಗಬಲ್ಲೆ ಎನ್ನುವ ಅದಮ್ಯ ಉತ್ಸಾಹದಿಂದಲೇ ತಯಾರಿ ಮಾಡಿಕೊಳ್ಳಿ. ಇತಿಹಾಸ, ರಾಜಕೀಯದ ಜೊತೆಗೆ ಪ್ರಸಕ್ತ ವಿದ್ಯಮಾನದ ಮಾಹಿತಿಗಳಲ್ಲಿ ಖಚಿತವಾಗುತ್ತಾ ಹೋಗಿ. ಅತಿಯಾದ ಆತ್ಮವಿಶ್ವಾಸ ಬೇಡವೇ ಬೇಡ ಎಂದು ಅವರು ಸಲಹೆ ನೀಡಿದರು.
ಉಪನ್ಯಾಸದ ನಂತರ ಇಬ್ಬರು ಎಸ್ಪಿಗಳು ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

