ಮೈಸೂರು

ಕಾಡು ನಾಶ ಮಾಡಿ ತೋಟ ಮಾಡ್ದೋರನ್ನು ಮಟ್ಟ ಹಾಕಿ

Published On :

ಹುಣಸೂರು: ಕಾಡು ನಾಶ ಮಾಡಿ ಕಾಫಿ, ಟೀ, ರಬ್ಬರ್ ತೋಟ ಮಾಡಿಕೊಂಡಿರುವ ಪಟ್ಟಭದ್ರರನ್ನು ಮೊದಲು ಮಟ್ಟ ಹಾಕಬೇಕು. ಆಗ ಕಾಡು ಉಳಿಯುತ್ತದೆ ಎಂದು ಹಂಪಿ ಕನ್ನಡ ವಿವಿ ಕುಲಪತಿ ಪ್ರೊ.ಹಿ.ಚೆ. ಬೋರಲಿಂಗಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಡೀಡ್ ಸಂಸ್ಥೆಯಲ್ಲಿ ಹಂಪಿಯ ಕನ್ನಡ ವಿವಿಯ ಬುಡಕಟ್ಟು ಜ್ಞಾನ ಪರಂಪರೆ ಅಧ್ಯಯನ ಮತ್ತು ತರಬೇತಿ ಕೇಂದ್ರವು ವಿಭಾಗೀಯ ಮಟ್ಟದ ಬುಡಕಟ್ಟು ಕೃಷಿ ಮತ್ತು ಪಾರಂಪರಿಕ ಜ್ಞಾನ ಕುರಿತ ಆಯೋಜಿಸಿರುವ ಕಮ್ಮಟದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದಲೂ ಬುಡಕಟ್ಟು ಜನರು ಪಾರಂಪರಿಕವಾಗಿ ಕಾಡು ಉಳಿಸಿ ಕಾಪಾಡಿದ್ದಾರೆ. ಪ್ರಾಣಿಗಳನ್ನು ಮಕ್ಕಳಂತೆ ಸಲುಹಿದ್ದರಿಂದಲೇ ಇಂದು ಕಾಡು ಉಳಿದಿದೆ ಎಂದರು.
ಅಕ್ಷರ- ಅಹಂಕಾರದ ಸಂಕೇತ. ಅನುಭವ ವಿನಯ- ಜೀವನದ ಸಂಕೇತ, ಹೀಗಾಗಿ ಅನುಭವ ಬುಡಕಟ್ಟು ತಿಯನ್ನು ಪುನರ್ ಸ್ಥಾಪಿಸಿಕೊಳ್ಳುವ ನಿಟ್ಟಿನಲ್ಲಿ ಅಧ್ಯಯನವಾಗಬೇಕು. ಜೊತೆಗೆ ಅವರನ್ನು ಗೌರವಿಸಬೇಕೆಂದು  ತಿಳಿಸಿದರು.
ಶಿಬಿರದ ಸಂಚಾಲಕ ಡಾ. ಕಿಕ್ಕೇರಿ ನಾರಾಯಣ್ ಮಾತನಾಡಿ, ಬುಡಕಟ್ಟು ಜನರ ಕೃಷಿ ಪಾರಂಪರಿಕ ಜೀವನ ಜೀವಂತವಾದುದು. ಗಿಡ-ಮರ-ಪ್ರಾಣಿ, ಪಕ್ಷಿ, ಭೂಮಿ ಕಾಡಿನ ನಡುವೆ ಸ್ವಚ್ಛಂದ ಬದುಕು ನಡೆಸಿರುವ ಅವರ ಜ್ಞಾನ ಪರಂಪರೆಯನ್ನು ಗೌರವಿಸಬೇಕು. ಮನುಷ್ಯ-ನಿಸರ್ಗ ಬೇರೆ ಅಲ್ಲವೆಂದುಕೊಳ್ಳಬೇಕಿದೆ. ಅವರದು ಅಭೇದ ಕಲ್ಪನೆ, ನಾವು ಪ್ರಕೃತಿಯಿಂದ ದೂರವಾಗುತ್ತಾ ಸೂಕ್ಷ್ಮತೆ ಹಾಳು ಮಾಡಿಕೊಂಡಿದ್ದೇವೆ. 30 ಸಾವಿರ ವರ್ಷದಿಂದ ಅವರು ಅವರದೇ ಆದ ವ್ಯೆದ್ಯ ಪದ್ಧತಿ ಅನುಸರಿಸಿಕೊಂಡು ಬರುತ್ತಿದ್ದು ಅವರನ್ನು ಕಾಡಿನಿಂದ ಹೊರಹಾಕಿ ಸಂಸ್ಕೃತಿಯನ್ನು ನಾಶಮಾಡಲು ಹೊರಟಿರುವ ಅರಣ್ಯ ಇಲಾಖೆ ಅಧಿಕಾರಿಗಳಿಗಿಂತ ಆದಿವಾಸಿಗಳು ಕಾಡು, ಪ್ರಾಣಿ ರಕ್ಷಣೆಯಲ್ಲಿ ಅನುಭವ ಹೊಂದಿದ್ದಾರೆ. ಅವರಿಲ್ಲದೆ ಕಾಡಿಲ್ಲ ಎಂಬುದನ್ನು ಮನಗಾಣಬೇಕೆಂದು ಸಲಹೆ ನೀಡಿದರು.
ಡಿಸಿಎಫ್ ಹುಚ್ಚಪ್ಪ ಮಾತನಾಡಿ, ಆದಿವಾಸಿಗಳ ಪ್ರಾಣಿ, ಪಕ್ಷಿ, ಗಿಡಗಳ ಜೊತೆಗಿನ ಅವಿನಾಭಾವ ಸಂಬಂಧದಿಂದಲೇ ಅರಣ್ಯ ಉಳಿದಿದ್ದು, ಜನಸಂಖ್ಯಾ ಸ್ಫೋಟದಿಂದಾಗಿ ಸಮಸ್ಯೆ ಉದ್ಭವವಾಗಿದೆ. ಇವರ ರಕ್ಷಣೆಗಿರುವ ಅರಣ್ಯ ಹಕ್ಕು ಮಾನ್ಯತೆ ಕಾಯ್ದೆ ನೆರವಿಗೆ ಬಂದಿದೆ ಎಂದು ಹೇಳಿದರು.
ಡೀಡ್ ಸಂಸ್ಥೆಯ ಶ್ರೀಕಾಂತ್ ಆದಿವಾಸಿಗಳನ್ನು ಅರಣ್ಯದಿಂದ ಪುನರ್ವಸತಿಗೊಳಿಸುವಿಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿ, ಅರಣ್ಯ ಹಕ್ಕು ಮಾನ್ಯತೆ ಕಾಯ್ದೆ ಸಮಗ್ರ ಜಾರಿ ವಿಳಂಬಕ್ಕೆ ಬೇಸರ ವ್ಯಕ್ತಪಡಿಸಿ, ಅಧಿಕಾರಿಗಳು ಕಾನೂನನ್ನು ಅರಿತು ಜಾರಿಗೆ ಮುಂದಾಗುವಂತೆ ಕರೆ ನೀಡಿದರು.
ಹಂಪಿ ವಿ.ವಿಯ ಬುಡಕಟ್ಟು ಜ್ಞಾನ ಪರಂಪರೆ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎ.ಎಸ್. ಪ್ರಭಾಕರ್ ಮಾತನಾಡಿದರು.  
ಎಚ್.ಡಿ.ಕೋಟೆಯ ಆನೆ ಮಾಳದ ಚೋಮಮ್ಮ, ಮಾರನ ಹಾಡಿಯ ದೇವಮ್ಮ, ಬಾವಲಿ ಹಾಡಿಯ ಕುಳ್ಳಯ್ಯ ಅವರನ್ನು ಗೌರವಿಸಲಾಯಿತು. ಅದಿವಾಸಿ ಮುಖಂಡರು, ಪಿ.ಕೆ. ರಾಮು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳವರು ಭಾಗವಹಿಸಿದ್ದರು. ಡೀಡ್ ಸಂಸ್ಥೆ ನಿರ್ದೇಶಕ ಶ್ರೀಕಾಂತ್ ಸ್ವಾಗತಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.