ಮೈಸೂರು

2 ಉಪನಗರ, ತಲಾ 4 ಫ್ಲೈಓವರ್, ರೇಲ್ವೆ ಮೇಲ್ಸೇತುವೆ

Published On :

ಮೈಸೂರು: ಭವಿಷ್ಯದಲ್ಲಿ ನಗರದ ಮೇಲೆ ಆಗುವ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಮೂಲಭೂತ ಸೌಕರ್ಯಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ಒದಗಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಎರಡು ಕಡೆ ಉಪ ನಗರಗಳು, ನಾಲ್ಕು ಕಡೆ ಫ್ಲೈಓವರ್, ನಾಲ್ಕು ಕಡೆ ರೇಲ್ವೆ ಮೇಲ್ಸೇತುವೆಗಳನ್ನು ನಿರ್ಮಿಸಲು ಉದ್ದೇಶಿಸಿದೆ.
ಜಿಲ್ಲಾಧಿಕಾರಿ ಸಿ. ಶಿಖಾ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪ್ರಾಧಿಕಾರದ ಸಭೆಯಲ್ಲಿ 2014-15ನೇ ಸಾಲಿಗೆ 2.32 ಕೋಟಿಯ ಉಳಿತಾಯ ಆಯವ್ಯಯ ಮಂಡಿಸಿದ ಆಯುಕ್ತ ಎಸ್. ಪಾಲಯ್ಯ ಈ ವಿಷಯ ಪ್ರಕಟಿಸಿದರು. ಈ ಸಾಲಿನಲ್ಲಿ 486.70 ಕೋಟಿ ಆದಾಯ ಹಾಗೂ 484.38 ಕೋಟಿ ವೆಚ್ಚ ಮಾಡಲಾಗುವುದು.
ಬಲ್ಲಹಳ್ಳಿಯಲ್ಲಿ ಉದ್ದೇಶಿಸಿರುವ ವಸತಿ ಬಡಾವಣೆ ಬದಲಿಗೆ ಇದೇ ಜಾಗದಲ್ಲಿ 485 ಎಕರೆ ವಿಸ್ತೀರ್ಣದಲ್ಲಿ ಬಲ್ಲಹಳ್ಳ ಉಪನಗರ ನಿರ್ಮಿಸಲು ಉದ್ದೇಶಿಸಿದೆ. ಮೈಸೂರು ತಾಲೂಕು ವರುಣ ಹೋಬಳಿ ಕೋಚನಹಳ್ಳಿ ಗ್ರಾಮದಲ್ಲಿ ಕೈಗಾರಿಕಾ ಬಡಾವಣೆ ನಿರ್ಮಿಸಲು ಸುಮಾರು 500 ಎಕರೆ ಜಮೀನಿಗೆ ಕೆಐಎಡಿಬಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಈ ಪ್ರದೇಶವು ನಗರಾಭಿವೃದ್ಧಿ ವಸತಿ ವಲಯದಲ್ಲಿ ಬರುತ್ತಿದ್ದು, ಈ ಪ್ರದೇಶದಲ್ಲಿ ಉಪನಗರ ನಿರ್ಮಾಣ ಮಾಡಲು ಸೂಕ್ತವಾಗಿರುವುದರಿಂದ ಪರಿಸರ ಇಲಾಖೆಯೊಂದಿಗೆ ಚರ್ಚಿಸಿ ಕೋಚನಹಳ್ಳಿ ಉಪನಗರ ನಿರ್ಮಾಣ ಮಾಡಲಾಗುವುದು.
ಫ್ಲೈ ಓವರ್ ನಿರ್ಮಾಣ: ಬೆಂಗಳೂರು- ಮೈಸೂರು ರಸ್ತೆ ಹಾಗೂ ಹೊರ ವರ್ತುಲ ರಸ್ತೆ ಕೂಡುವ ಜಾಗದಲ್ಲಿ, ಮೈಸೂರು- ಕೆಆರ್ಎಸ್ ರಸ್ತೆ ಹಾಗೂ ಹೊರ ವರ್ತುಲ ರಸ್ತೆ ಕೂಡುವ ಜಾಗದಲ್ಲಿ, ಮೈಸೂರು-ಹುಣಸೂರು ರಸ್ತೆ ಹಾಗೂ ಹೊರ ವರ್ತುಲ ರಸ್ತೆ ಕೂಡುವ ಜಾಗದಲ್ಲಿ, ಮೈಸೂರು- ನಂಜನಗೂಡು ರಸ್ತೆ ಹಾಗೂ ಮೈಸೂರು-ನಂಜನಗೂಡು ರಸ್ತೆ ಹಾಗೂ ಜೆಎಸ್ಎಸ್ ಕಾಲೇಜು ರಸ್ತೆ ಕೂಡುವ ಜಾಗದಲ್ಲಿ ಫ್ಲೈ ಓವರ್ ನಿರ್ಮಿಸಲಾಗುವುದು.
ಕೇಂದ್ರ ಸರ್ಕಾರದ ನರ್ಮ್ ಯೋಜನೆಯಡಿ ನಗರದ ಎರಡು, ನಾಲ್ಕು ಪಥದ ಹೊರ ವರ್ತುಲ ರಸ್ತೆಯನ್ನು ಆರು ಪಥಕ್ಕೆ ಸರ್ವಿಸ್ ರಸ್ತೆ ಸೇರಿ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು 2010ರ ಏ. 12ರಲ್ಲಿ ಪ್ರಾರಂಭಿಸಲಾಗಿದೆ. ನಾಲ್ಕು ಪ್ಯಾಕೇಜ್ ಕಾಮಗಾರಿಗಳಲ್ಲಿ ಒಂದು ಪ್ಯಾಕೇಜ್ ಕಾಮಗಾರಿ ಮುಗಿದಿದ್ದು, ಉಳಿದ ಮೂರು ಪ್ಯಾಕೇಜ್ಗಳ ಶೇ.75ರಷ್ಟು ಕಾಮಗಾರಿ ಮುದಿರುತ್ತದೆ. ಸದರಿ ಕಾಮಗಾರಿಯ ಪ್ಯಾಕೇಜ್-1ರಲ್ಲಿ ಮೈಸೂರು-ಬೆಂಗಳೂರು ರೇಲ್ವೆ ಹಳಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಹೋಗುವ ರೇಲ್ವೆ ಹಳಿ, ಮೈಸೂರು- ಅರಸೀಕರೆ ರೇಲ್ವೆ ಹಳಿ ಹಾಗೂ ಪ್ಯಾಕೇಜ್-3ರಲ್ಲಿ ಮೈಸೂರು-ನಂಜನಗೂಡು ರೇಲ್ವೆ ಹಳಿಗೆ ಒಂದು ಕಿಂಡಿಯ ರೇಲ್ವೆ ಮೇಲು ಸೇತುವೆ ಇರುತ್ತದೆ. ಹೊರ ವರ್ತುಲ ರಸ್ತೆಯನ್ನು ಎರಡು ಪಥದಿಂದ ಆರು ಪಥಕ್ಕೆ ಎರಡು ಸರ್ವಿಸ್ ರಸ್ತೆ ಸೇರಿ ಮೇಲ್ದರ್ಜೆಗೇರಿಸುತ್ತಿರುವುದರಿಂದ, ಸದರಿ ನಾಲ್ಕು ರೇಲ್ವೆ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿರುತ್ತದೆ. ಆದ್ದರಿಂದ ಸದರಿ ನಾಲ್ಕು ರೇಲ್ವೆ  ಮೇಲು ಸೇತುವೆಗಳನ್ನು ಹೊರ  ರ್ತುಲ ರಸ್ತೆಗನುಗುಣವಾಗಿ ವಿಸ್ತರಣೆ ಮಾಡಬೇಕಾಗಿದೆ. ಈ ಸಂಬಂಧ ರೈಟ್ಸ್ ಸಂಸ್ಥೆಯಿಂದ ವಿವರವಾದ ಯೋಜನಾ ವರದಿಯನ್ನು 80.89 ಕೋಟಿಗಳಿಗೆ ಸಿದ್ಧಪಡಿಸಿ ನೈಋತ್ಯ ರೇಲ್ವೆಯವರ ಅನುಮೋದನೆ ಪಡೆದು ಕೇಂದ್ರ ಸರ್ಕಾರದ ನರ್ಮ್ ಯೋಜನೆಯಡಿ ಮಂಜೂರಾತಿ ನೀಡುವ ಸಂಬಂಧ ಸಲ್ಲಿಸಲಾಗಿರುತ್ತದೆ. ಕೇಂದ್ರ ಸರ್ಕಾರದ ಅನುಮೋದನೆ ನಿರೀಕ್ಷಿಸಲಾಗಿದ್ದು, ಸದರಿ ಸಾಲಿನಲ್ಲಿ 8 ಕೋಟಿಗಳನ್ನು ಕಾಯ್ದಿರಿಸಿದೆ.
ಬಹುಮಹಡಿ ಕಟ್ಟಡಗಳ ಯೋಜನೆ: ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಸಮಕಾಲೀನ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಬಹುಮಹಡಿ ಕಟ್ಟಡ 1ಬಿಎಚ್ಕೆ, 2ಬಿಎಚ್ಕೆ ಮತ್ತು 3ಬಿಎಚ್ಕೆ ಗುಂಪು ಮನೆಗಳನ್ನು ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಪ್ರಾಯೋಗಿಕವಾಗಿ 500 ಮನೆಗಳನ್ನು ಪ್ರಾಧಿಕಾರದ ವತಿಯಿಂದ ಅಥವಾ ಖಾಸಗಿ ಸಹಭಾಗಿತ್ವದಡಿಯಲ್ಲಿ ಲಾಭ ನಷ್ಟ ರಹಿತವಾಗಿ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಈ ಸಾಲಿನಲ್ಲಿ 1 ಕೋಟಿ ಕಾಯ್ದಿರಿಸಲಾಗಿದೆ.

ಖಾಸಗಿ ಬಡಾವಣೆಗಳು ಸೇರಿದಂತೆ ಪ್ರಾಧಿಕಾರ ಶೇ.100 ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಿರುವ ಎಲ್ಲ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ, ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಒಳಚರಂಡಿ ಕಲ್ಪಿಸಬೇಕು.
ಟಿ  ಜಿ.ಟಿ. ದೇವೇಗೌಡ, ಶಾಸಕರು
ಒಳ್ಳೆಯ ಬಜೆಟ್. ಎಲ್ಲ ಬಡಾವಣೆಗಳಿಗೂ ಅಗತ್ಯ ಮೂಲಸೌಲಭ್ಯ ಕಲ್ಪಿಸಿ. ವಿಧಾನಸಭೆ, ವಿಪ ಸದಸ್ಯರಿಗೆ ರಾಜ್ಯ ಮಟ್ಟದಲ್ಲಿ ಸದ್ಯಕ್ಕೆ ಪ್ರವಾಸಕ್ಕೆ ಬ್ರೇಕ್ ಬಿದ್ದಿದೆ. ಆದರೆ ಇಲ್ಲಿ ಸದಸ್ಯರ ಪ್ರವಾಸಕ್ಕೆ 50 ಲಕ್ಷ ಮೀಸಲಿರಿಸಿರುವುದು ಒಳ್ಳೆಯದು..
ಟಿ  ಸಂದೇಶ್ ನಾಗರಾಜ್, ವಿಪ ಸದಸ್ಯರು,

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.