5.33 ಲಕ್ಷ ಕುಟುಂಬಕ್ಕೆ ಆರ್ಎಸ್ಬಿವೈ ಕಾರ್ಡ್
ಮೈಸೂರು: ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ (ಆರ್ಎಸ್ಬಿವೈ) ಮೈಸೂರು ಜಿಲ್ಲೆಯ 5,33,112 ಕುಟುಂಬಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಗುರಿ ಇದೆ. ಇದರಿಂದ 27,93,600 ಫಲಾನುಭವಿಗಳಿಗೆ ಉಪಯೋಗ ಆಗಲಿದೆ ಎಂದು ಕಾರ್ಮಿಕ ಇಲಾಖೆಯ ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ್ ಅಪ್ಪಯ್ಯ ಶಿಂದಿಹಟ್ಟಿ ಹೇಳಿದರು.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಸಂಯುಕ್ತವಾಗಿ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಕುರಿತು ಜಿಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 1.80 ಲಕ್ಷ ಕುಟುಂಬಗಳಿಗೆ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್ ವಿತರಿಸುವ ಗುರಿ ಹೊಂದಲಾಗಿತ್ತು. ಈ ಬಾರಿ 5,33,112 ಕುಟುಂಬಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಗುರಿ ಇದ್ದು, ಇದಕ್ಕಾಗಿ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ ಸ್ಮಾರ್ಟ್ ಕಾರ್ಡ್ಗೆ ನೋಂದಣಿ ಸಮಯದಲ್ಲಿ ಫಲಾನುಭವಿಗಳು 30 ಪಾವತಿಸಬೇಕು. ಈ ಯೋಜನೆಯಡಿ ಗುರುತಿಸಿರುವ 1080 ಹೆಚ್ಚಿನ ಕಾಯಿಲೆಗಳಿಗೆ ನಗದು ರಹಿತವಾಗಿ ಚಿಕಿತ್ಸೆ ನೀಡುವ ಸೌಲಭ್ಯ ಇರುತ್ತದೆ. ಪ್ರತಿ ಕುಟುಂಬಕ್ಕೆ ಒಂದು ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. 1 ಕಾರ್ಡ್ನಿಂದ ಆ ಕುಟುಂಬದ 5 ಮಂದಿ ವಾರ್ಷಿಕವಾಗಿ 30,000 ಒಳರೋಗಿಯಾಗಿ ವೈದ್ಯಕೀಯ ಸೌಲಭ್ಯ ಪಡೆಯಬಹುದು ಎಂದರು.
ಈ ಯೋಜನೆಯಡಿ ಸಂಯುಕ್ತ ವಿಮಾ ಮೊತ್ತ 30,000 ಪ್ರತಿ ಕುಟುಂಬಕ್ಕೆ ಇರುತ್ತದೆ. ಬಿಪಿಎಲ್ ಕುಟುಂಬದ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿದಾಗ ಪ್ರತಿ ಬಾರಿ ಸಾರಿಗೆ ವೆಚ್ಚವಾಗಿ 100 ನೀಡುವ ಅವಕಾಶವಿದೆ. ಈ ಕಾರ್ಡ್ ಹೊಂದಿರುವವರು ಗುರುತಿಸಲ್ಪಟ್ಟ ಯಾವುದೇ ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳಲ್ಲಿ ಒಳರೋಗಿಯಾಗಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು. ಇದೇ ವೇಳೆ ಸ್ಮಾರ್ಟ್ ಕಾರ್ಡ್ ಮಾದರಿ ಬಿಡುಗಡೆಗೊಳಿಸಲಾಯಿತು.
ಕಾರ್ಮಿಕಾಧಿಕಾರಿ ಮೊಹಮ್ಮದ್ ಜಹೀರ್ ಪಾಷ, ಕಾಮೇಶ್ವರರಾವ್, ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ನಂಬಿಯಾರ, ಮೇಡಿಕೇರ್ ಸಂಸ್ಥೆಯ ಸುಮಂತ್ ಸ್ಯಾನಿಯಾಲ್, ಶಾಂತಕುಮಾರ್ ಇದ್ದರು.
ಜನಪ್ರತಿನಿಧಿಗಳ ಗೈರು: ಕಾರ್ಯಾಗಾರ ಉದ್ಘಾಟಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಸೇರಿದಂತೆ ಸ್ಥಳೀಯ ಶಾಸಕರು, ಸಂಸದರು, ಮೇಯರ್, ಉಪಮೇಯರ್, ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರನ್ನು ಆಹ್ವಾನಿಸಲಾಗಿತ್ತು. ಆದರೆ, ಜನಪ್ರತಿನಿಧಿಗಳು ಯಾರೂ ಜಿಪಂ ಸಭಾಂಗಣದತ್ತ ಬರಲಿಲ್ಲ. ಹೀಗಾಗಿ ಕಾರ್ಯಾಗಾರ ಆಯೋಜಿಸಿದ್ದ ಅಧಿಕಾರಿಗಳೇ ಉದ್ಘಾಟನೆ ನೆರವೇರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

