ಮೈಸೂರು

ಅಖಂಡ ಭಾರತವೇ ಕಾಂಗ್ರೆಸ್ ಉದ್ದೇಶ: ಸಂಸದ ವಿಶ್ವನಾಥ್

Published On :

ಮೈಸೂರು: ಭಾರತ ಅಖಂಡವಾಗಿ ಉಳಿಯಬೇಕು ಎಂಬುದೇ ಕಾಂಗ್ರೆಸ್ ಪಕ್ಷದ ಉದ್ದೇಶ ಎಂದು ಸಂಸದ ಎಚ್. ವಿಶ್ವನಾಥ್ ಹೇಳಿದರು.
ದಿ ನ್ಯಾಷನಲ್ ಕಾಂಗ್ರೆಸ್ ಬ್ರಿಗೇಡ್ ಆಫ್ ಇಂಡಿಯಾ ಮೈಸೂರು ಜಿಲ್ಲಾ ಯುವ ಸಮಿತಿಯು ಎಂಜಿನಿಯರುಗಳ ಸಂಸ್ಥೆಯ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಯುವಕರ ಸಬಲೀಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
125 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಎಲ್ಲ ಧರ್ಮದವರು ಸರಿಸಮಾನರಾಗಿ ಬಾಳಬೇಕು ಎಂದು ಕಾಂಗ್ರೆಸ್ ಬಯಸುತ್ತಿದೆ. ಆದರೆ, ಬಿಜೆಪಿ, ಆರ್‌ಎಸ್‌ಎಸ್‌ನವರು ದೇಶದಲ್ಲಿ ಒಂದೇ ಕೋಮಿನವರು ಇರಬೇಕು. ಉಳಿದವರು ಹಿಂದುಳಿದವರಾಗಿಯೇ ಬದುಕಬೇಕು ಎಂದು ಭಾವಿಸಿದೆ. ಇದೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸ ಎಂದರು.
ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನೆಂದು ನರೇಂದ್ರ ಮೋದಿ ಕೇಳುತ್ತಿದ್ದಾರೆ. ಆದರೆ, ಅವರ ಜೇಬಿನಲ್ಲಿ ಇರುವ ಮೊಬೈಲ್ ತಂದವರು, ಲ್ಯಾಪ್‌ಟಾಪ್, ಐಟಿ ಕ್ಷೇತ್ರವನ್ನು ಕೊಡುಗೆಯಾಗಿ ನೀಡಿದ್ದು ರಾಜೀವ್‌ಗಾಂಧಿ ಎಂಬುದನ್ನು ಮರೆತಿದ್ದಾರೆ. ಆರ್‌ಎಸ್‌ಎಸ್, ಬಿಜೆಪಿಯವರು ನರಹಂತಕ ನರೇಂದ್ರ ಮೋದಿಯನ್ನು ಮುಂದಿಟ್ಟುಕೊಂಡು ಈ ಬಾರಿಯ ಲೋಕಸಭಾ ಚುನಾವಣೆ ಎದುರಿಸುತ್ತಿದೆ. ಈ ಚುನಾವಣೆಯನ್ನು ಇಡೀ ವಿಶ್ವವೇ ಬಣ್ಣ ಬಣ್ಣದ ಕನ್ನಡಕ ಹಾಕಿಕೊಂಡು ನೋಡುತ್ತಿದೆ ಎಂದು ಅವರು ತಿಳಿಸಿದರು.
ಮೂಲಭೂತವಾದಿಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ: ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ. ಮಹೇಶ್‌ಚಂದ್ರಗುರು ಮಾತನಾಡಿ, ಭ್ರಷ್ಟರನ್ನು ತಡೆದುಕೊಳ್ಳಬಹುದು. ಆದರೆ, ಮೂಲಭೂತವಾದಿಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಭಾರತದಲ್ಲಿ ಜಾತಿ ವ್ಯವಸ್ಥೆ ಕೆಲವರಿಗೆ ಮಾತ್ರ ಅನುಕೂಲವಾಗಿದೆ. ಹಲವರಿಗೆ ಜಾತಿ ವ್ಯವಸ್ಥೆಯು ಅನಾನೂಕೂಲವಾಗಿದೆ ಎಂದರು.
ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ಭಾರತದಿಂದ ಮುಕ್ತಗೊಳಿಸುವುದಾಗಿ ನಾಟಕವಾಡುತ್ತಿದ್ದಾರೆ. ದೇಶದ ಹಿಂದುಳಿದವರನ್ನು ಅದೇ ಸ್ಥಿತಿಯಲ್ಲಿ ಇರಿಸಲು ಮುಂದಾಗಿದ್ದಾರೆ. ಗುಜರಾತ್‌ನಲ್ಲಿ ಬಡವರ ಭೂಮಿ ಕಸಿದು ಉದ್ಯಮಿಗಳಿಗೆ ನೀಡಲಾಗಿದೆ. ಅಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿ ಮಾತ್ರ 24 ಗಂಟೆ ನೀರು, ವಿದ್ಯುತ್ ಸಿಗುತ್ತಿದೆ. ಬಡವರಿಗೆ ಈ ಸೌಲಭ್ಯ ಸಿಗುತ್ತಿಲ್ಲ ಎಂದು ಅವರು ಹೇಳಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಸಂಯೋಜನಾಧಿಕಾರಿ ನಟರಾಜ್, ಕಾಂಗ್ರೆಸ್ ಬ್ರಿಗೇಡ್‌ನ ಜಿಲ್ಲಾಧ್ಯಕ್ಷ ಮೊಹಮ್ಮದ್ ಅಜ್ಲನ್ ಷರೀಫ್, ಮುಖಂಡರಾದ ಎಂ. ಲಕ್ಷ್ಮಣ, ಎಚ್.ಎ. ವೆಂಕಟೇಶ್, ಮೊಹಮ್ಮದ್ ಅಲಿ, ಅಸ್ರತ್ ಇದ್ದರು.
ಗೊಂದಲದ ಗೂಡು: ಕಾಂಗ್ರೆಸ್ ಬ್ರಿಗೇಡ್ ಕಾರ್ಯಕ್ರಮವು ಗೊಂದಲ ಗೂಡಾಗಿತ್ತು. ಬೆಳಗ್ಗೆ 11ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮವು ಮಧ್ಯಾಹ್ನ 1ಕ್ಕೆ ಪ್ರಾರಂಭವಾಯಿತು. ಸಂಸದ ಎಚ್. ವಿಶ್ವನಾಥ್ ಅವರ ಭಾಷಣ ಮುಗಿಯುತ್ತಿದ್ದಂತೆ ಸಭಾಂಗಣದಲ್ಲಿದ್ದ ಯುವಕರು ಜಾಗ ಖಾಲಿ ಮಾಡಿದರು. ಈ ವೇಳೆ ಕಾರ್ಯಕ್ರಮ ಆಯೋಜಕರು ತಡೆದರೂ ಅಂತಿಮವಾಗಿ ಕೆಲವರು ಮಾತ್ರ ಉಳಿದರು. ಹಲವರು ಸಭಾಂಗಣದ ಹೊರಗೆ ನಿಂತು ಹರಟುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.