'ಶಿಕ್ಷಕರು ಮಕ್ಕಳಿಗೆ ಆತ್ಮವಿಶ್ವಾಸ ತುಂಬಬೇಕು'
ಮೈಸೂರು: ಮಕ್ಕಳಿಗೆ ಆತ್ಮವಿಶ್ವಾಸ ತುಂಬುವುದು ಬಹಳ ಪ್ರಮುಖ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ಸ್ವತಃ ಉತ್ಸಾಹದಾಯಕರಾಗಿ, ಮಕ್ಕಳನ್ನು ಪ್ರೋತ್ಸಾಹಿಸಬೇಕಾದ ಅವಶ್ಯಕತೆ ಇದೆ ಎಂದು ಡಯಟ್ನ ಪ್ರಾಂಶುಪಾಲ ಬಿ.ಕೆ. ಬಸವರಾಜ ಹೇಳಿದರು.
ಮೈಸೂರಿನ ಸರಸ್ವತಿಪುರಂ ಜೆಎಸ್ಎಸ್ ಪ್ರೌಢಶಾಲೆಯಲ್ಲಿ ಸುತ್ತೂರಿನ ಜೆಎಸ್ಎಸ್ ಶೈಕ್ಷಣಿಕ ತರಬೇತಿ ಸಂಸ್ಥೆ ವತಿಯಿಂದ ನಡೆದ ವಿವಿಧ ವಿಷಯಗಳ ಬೋಧಕರಿಗೆ ಮೂರು ದಿನಗಳ ಪರೀಕ್ಷಾ ಸಿದ್ಧತೆಯ ಅಭಿಪ್ರೇರಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಹಿಂದುಳಿಕೆಗೆ ಅವರ ಕುಟುಂಬ ಮತ್ತು ಸಮುದಾಯದಲ್ಲಿ ಪೂರಕ ಪರಿಸರವಿಲ್ಲ ಎನ್ನುವ ವೃಥಾ ಆರೋಪ ಮಾಡುವುದು ತರವಲ್ಲ. ಆ ಪೂರಕ ವಾತಾವರಣವನ್ನು ಶಿಕ್ಷಕರು ಸರಿದೂಗಿಸಲು ಪ್ರಾಮಾಣಿಕ ಪ್ರಯತ್ನ ಪಡಬೇಕೆಂದು ಕರೆ ನೀಡಿದರು.
ಮುಖ್ಯೋಪಾಧ್ಯಾಯ ಕೆ.ಎಸ್. ಗೌರಿಶಂಕರಸ್ವಾಮಿ, ಸಂಪನ್ಮೂಲ ವ್ಯಕ್ತಿಗಳಾದ ಎನ್.ಜಿ. ನರಸಿಂಹಮೂರ್ತಿ ಮತ್ತು ಸತೀಶ್ ಇದ್ದರು. ಜೆಎಸ್ಎಸ್ ಮಹಾವಿದ್ಯಾಪೀಠದ ವಿಷಯ ಪರಿವೀಕ್ಷಕ ಎಚ್.ಎಸ್. ನಾಗರಾಜು ಸ್ವಾಗತಿಸಿದರು. ಸಂಸ್ಥೆಯ ಸಂಚಾಲಕ ಡಾ.ಎಂ.ಸಿ. ನಟರಾಜ ವಂದಿಸಿದರು.
ಇಲವಾಲದ ವ್ಯಕ್ತಿ ನಾಪತ್ತೆ
ಮೈಸೂರು: ತಾಲೂಕಿನ ಇಲವಾಲ ನಿವಾಸಿ ಜೋಗಿನಾಯಕ ಎಂಬವರ ಪುತ್ರ ಜೆ. ಅಂಕನಾಯಕ (45) ನಾಪತ್ತೆಯಾಗಿದ್ದಾರೆ. ಇವರು ಜ.25ರಂದು ಗಾರೆ ಕೆಲಸಕ್ಕಾಗಿ ಮೈಸೂರಿಗೆ ಹೋದವರು ಕಾಣೆಯಾಗಿದ್ದಾರೆ ಎಂದು ಪತ್ನಿ ಗೌರಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಕಪ್ಪು ಮೈಬಣ್ಣ, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2402222 ಸಂಪರ್ಕಿಸಲು ಇಲವಾಲ ಠಾಣೆ ಪೊಲೀಸರು ಕೋರಿದ್ದಾರೆ.
ಸುಟ್ಟುಕೊಂಡಿದ್ದ ಗಾಯಾಳು ಸಾವು
ಮೈಸೂರು: ಶಿವರಾಂಪೇಟೆ ರಸ್ತೆಯ ಮಸೀದಿ ಬಳಿಯ ಪೇಪರ್ ಅಂಗಡಿ ಹತ್ತಿರ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟಗಾಯಗಳೊಂದಿಗೆ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಭಾನುವಾರ ಮೃತಪಟ್ಟಿದ್ದಾರೆ. ಪದ್ಮನಾಭ (70) ಮೃತಪಟ್ಟವರು. ಇವರ ವಿಳಾಸ ತಿಳಿದು ಬಂದಿಲ್ಲ. ಚಹರೆ- 5.2 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು. ವಾರಸುದಾರರು ಇದ್ದಲ್ಲಿ ದೂ. 0821- 2418306 ಸಂಪರ್ಕಿಸಲು ದೇವರಾಜ ಠಾಣೆ ಪೊಲೀಸರು ಕೋರಿದ್ದಾರೆ.
ಸುತ್ತೂರಲ್ಲಿ ಕುಡಿತ ವಿಮೋಚನಾ ಶಿಬಿರ
ಮೈಸೂರು: ಸುತ್ತೂರು ಶ್ರೀಕ್ಷೇತ್ರದಲ್ಲಿ ಫೆ. 28ರಿಂದ ಮಾ. 9ವರೆಗೆ ಕುಡಿತ ಬಿಡಿಸುವ ಉಚಿತ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ 150ರಿಂದ 200 ಮಂದಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸಂಬಂಧಿಸಿದವರು ಹೆಸರು ನೋಂದಾಯಿಸಿಕೊಳ್ಳಬಹುದು. ಪ್ರಾರಂಭದ ದಿನ ನೋಂದಾಯಿತರ ಸಂಖ್ಯೆ ಕಡಿಮೆಯಿದ್ದರೆ ಅಂದು ಮಧ್ಯಾಹ್ನದವರೆಗೆ ನೋಂದಾವಣಿಗೆ ಅವಕಾಶ ನೀಡಲಾಗುವುದು. ಮೊ. 94486 53897, 96866 77284 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

