ಮೈಸೂರು

ಹತ್ವಾಳ್ ಬೀಳು ಭೂಮಿ ಮುಗಿವುದೇ ಗೋಳು

Published On :

ಮೈಸೂರು: ಎಚ್.ಡಿ. ಕೋಟೆ ತಾಲೂಕು ಹಂಪಾಪುರ ಹೋಬಳಿ ವ್ಯಾಪ್ತಿಗೆ ಸೇರಿದ ಹತ್ವಾಳು ಗ್ರಾಮದ ನೂರಾರು ಎಕರೆ ಕೃಷಿ ಜಮೀನು ಸಕಾರಣವಿಲ್ಲದೆ ಸರ್ಕಾರಿ ಬೀಳು ಎಂದು ಸಮುದಾಗಿರುವುದರಿಂದ ಉಂಟಾಗಿರುವ ಗೋಳು ಯಾವಾಗ ಬಗೆಹರಿಯುವುದೋ.
ಸದರಿ ಬೀಳು ವ್ಯಾಪ್ತಿಗೆ ಬರುವ ಜಮೀನುಗಳು 1989 ರವರೆಗೂ ಆರ್‌ಟಿಸಿಗಳಲ್ಲಿ ಸರ್ಕಾರಿ ಬೀಳು ಎಂದು ದಾಖಲಾಗಿರುವುದಿಲ್ಲ ಹಾಗೂ ಆಯಾಯ ಕಾಲಂಗಳಲ್ಲಿ ಖಾತಾದಾರರ ಹೆಸರು, ಖಾತಾ ನಂಬರ್ ಆಸ್ತಿಗಳು ಯಾವ ರೂಪದಲ್ಲಿ ಬಂದವು ಮತ್ತು ಪಿತ್ರಾರ್ಜಿತ, ಸ್ವಯಾರ್ಜಿತ ಹಾಗೂ ಕ್ರಯದ ರೂಪುಗಳು ದಾಖಲಾಗಿರುತ್ತವೆ. ಈ ಸಮಯದಲ್ಲಿ ಕಂದಾಯ ವಗೈರೆ ಇತ್ಯಾದಿ ಅನೂಚಾನವಾಗಿ ನಡೆದುಕೊಂಡು ಬಂದಿರುತ್ತದೆ. ಆದರೆ ನಂತರ ಆರ್‌ಟಿಸಿಗಳಲ್ಲೂ ಸರ್ಕಾರಿ ಬೀಳು ಎಂದು ದಾಖಲಾಗುತ್ತಾ ಬಂದಿರುವುದು ಸಮಸ್ಯೆಗೆ ಕಾರಣ.
ಈ ಜಮೀನುಗಳು ಈ ಹಿಂದೆ ಅಂದರೆ 1967- 68 ರವರೆಗೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರದ ಹೋಬಳಿ ವ್ಯಾಪ್ತಿಗೆ ಒಳಪಟ್ಟಿದ್ದು, ವ್ಯವಹಾರ ನಡೆಯಲ್ಪಡುತ್ತಿತ್ತು. ಹತ್ವಾಳು ಗ್ರಾಮವು 1969-70 ರಲ್ಲಿ ಎಚ್.ಡಿ. ಕೋಟೆ ತಾಲೂಕಿಗೆ ಒಳಪಟ್ಟ ನಂತರ ಅಲ್ಲಿಂದೀಚೆಗೆ ಆಸ್ತಿಗಳ ದಾಖಲಾತಿಗಳು ಲಭ್ಯ. ಸರ್ಕಾರಿ ಬೀಳು ವ್ಯಾಪ್ತಿಗೆ ಒಳಪಟ್ಟಿರುವ ಕೆಲ ಜಮೀನುಗಳು ನಂಜನಗೂಡಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗಿ ಶುದ್ಧ ಕ್ರಯವಾಗಿರುತ್ತವೆ. ಈ ಜಮೀನು ಸರ್ಕಾರಿ ಬೀಳು ವ್ಯಾಪ್ತಿಗೆ ಸೇರಿದ್ದು, ಯಾವ ಆಧಾರದ ಮೇಲೆ ಯಾವ ಕಾನೂನುನಡಿ ಸೇರಿವೆ ಎಂಬುದಕ್ಕೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿಯಾಗಲಿ ಸ್ಪಷ್ಟನೆಯಾಗಲಿ ಇಲ್ಲ.
ಅಧಿಕಾರಿಗಳಿಂದಲೇ ಸಮಸ್ಯೆಗಳ ಸೃಷ್ಟಿ: ಎಚ್.ಡಿ. ಕೋಟೆಗೆ ಬರುವ ಬಹುತೇಕ ತಹಸೀಲ್ದಾರ್‌ಗಳು ಸತ್ಯಾಂಶ ತಿರುಚಿ, ಸರ್ಕಾರಕ್ಕೆ ಸುಳ್ಳು ವರದಿ ತಯಾರಿಸಿ ಕಳಿಸುತ್ತಾರೆ. ಬೀಳು ಭೂಮಿಗೆ ಸಂಬಂಧಿಸಿದಂತೆ ಅಸಂಬದ್ಧ ವರದಿಯನ್ನು ಸೃಷ್ಟಿಸಿ ಪರೋಕ್ಷವಾಗಿ ರೈತರ ಹಕ್ಕನ್ನು ದಮನ ಮಾಡುತ್ತಾ ಬರುತ್ತಿದ್ದಾರೆ. ಸರ್ಕಾರದ ಆದೇಶದಂತೆ ರೆಸ್ಟೋರ್‌ಗೆ ಅರ್ಹವಾಗಿದ್ದರೂ ಹೊಸ ವಿವಾದ ಹುಟ್ಟು ಹಾಕಿ ಹಿಂದಿನ ಸರ್ಕಾರಿ ರೆಸ್ಟೋರ್‌ಗೆ 2011ರ ಡಿ.7 ರಂದು ಹೊರಡಿಸಿದ ಆದೇಶದನ್ವಯ ಸದರಿ ಬೀಳು ಜಮೀನುಗಳು ಒಳಪಡುವುದಿಲ್ಲ ಎಂದು ತಿರಸ್ಕರಿಸಿ ಜಿಲ್ಲಾಧಿಕಾರಿಗೆ ವರದಿಯನ್ನು ಸಲ್ಲಿಸಿದ್ದರು.
ರೈತರ ಹಕ್ಕಿನ ದಮನ: 1991ರಲ್ಲಿ ಅಂದಿನ ಸರ್ಕಾರ ಕಂದಾಯ ಬಾಕಿಯಿಂದಾದ ಹಾಗೂ ಬೀಳು ಬಿದ್ದ ಜಮೀನುಗಳನ್ನು ಸ್ವಾಧೀನಾನುಭವದಲ್ಲಿರುವ ಹಾಗೂ ಅವರ ವಂಶಸ್ಥರ ಹೆಸರಿಗೆ ರೆಸ್ಟೋರ್ ಮಾಡಿಕೊಡುವಂತೆ ಆದೇಶ ಹೊರಡಿಸಿತ್ತು. ಆಗಿದ್ದ ತಹಸೀಲ್ದಾರ್, ಕಂದಾಯಾಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕಾರ್ಯರೂಪಕ್ಕೆ ಬರದೆ ಕುಂಠಿತಗೊಂಡಿತು. 2004ರಲ್ಲಿ ಸರ್ಕಾರ 6 ತಿಂಗಳ ಕಾಲಾವಕಾಶ ನೀಡಿ ರೆಸ್ಟೋರ್‌ಗೆ ಆದೇಶಿಸಿದಾಗ ಆಗಿನ ತಹಸೀಲ್ದಾರ್ ಇದೇ ಚಾಳಿ ಮುಂದುವರಿಸಿ ರೈತರಿಗೆ ಹೊಡೆತ ಬಿತ್ತು. ಇಲ್ಲಿಯ ತನಕ ಈ ಕ್ಷೇತ್ರದ ಯಾವ ಚುನಾಯಿತ ಸಂಸದರಾಗಲೀ ಶಾಸಕರಾಲೀ ಈ ರೈತರ ನೆರವಿಗೆ ಬರಲಿಲ್ಲ. ಸರ್ಕಾರದ ಗಮನ ಸೆಳೆಯಲಿಲ್ಲ.
ತಹಸೀಲ್ದಾರ್ ಕಳಿಸಿದ ವರದಿ ಜಿಲ್ಲಾಧಿಕಾರಿ ಕಚೇರಿಯಲ್ಲೋ ಹುಣಸೂರಿನ ಉಪವಿಭಾಗಾಧಿಕಾರಿ ಕಚೇರಿಯಲ್ಲೋ ಯಾವ ಮೂಲೆಯಲ್ಲಿ ಬಿದ್ದು ನಿದ್ರಿಸುತ್ತಿವೆಯೋ ಗೊತ್ತಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಿದ್ದಾರೋ ಇಲ್ಲವೋ ಇದಕ್ಕೂ ಖಚಿತ ಮಾಹಿತಿ ಲಭ್ಯವಿಲ್ಲ. ತಾಲೂಕು ಕಚೇರಿಯಲ್ಲಿ ವಿಚಾರಿಸಿದರೆ ಒಂದೊಂದು ಹೇಳಿಕೆ. ಡಿಸಿಗೆ ಕಳಿಸಿದ್ದೇವೆ ಹುಣಸೂರು ಎಸಿಗೆ ಕಳಿಸಿದ್ದೇವೆ ಎನ್ನುತ್ತಾರೆ.
ಜಿಲ್ಲೆಯವರೇ ಆದ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಈ ಸರ್ಕಾರಿ ಬೀಳು ಜಮೀನುಗಳನ್ನು ರೆಸ್ಟೋರ್ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿ. ತಪ್ಪಿತಸ್ಥ ಅಧಿಕಾರಗಳ ತನಿಖೆ ನಡೆಸಿ ರೈತರ ಬದುಕನ್ನು ಹಸನು ಮಾಡುವಂತೆ ಹಂಪಾಪುರ ಮಂಡಲ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ನಾಗನಾಯಕ ಮನವಿ ಮಾಡಿದ್ದಾರೆ.
ಅವಧಿ ವಿಸ್ತರಣೆ: ಭೂ ಕಂದಾಯ ನಿಯಮಗಳು 1966ರ ನಿಯಮ 119ರ ಅನ್ವಯ ಭೂಕಂದಾಯ ಬಾಕಿಗಾಗಿ ಬೀಳಾಗಿರುವ ಜಮೀನುಗಳನ್ನು ರೆಸ್ಟೋರ್ ಮಾಡಲು 2014ರ ಜೂ.6 ರವರೆಗೆ ಕಾಲಾವಕಾಶ ವಿಸ್ತರಿಸಿದೆ. ಕಂದಾಯ ಬಾಕಿಗಾಗಿ ಬೀಳಾಗಿರುವ ಜಮೀನುಗಳ ರೆಸ್ಟೋರ್ ಕುರಿತ ಈವರೆಗೂ ಅರ್ಜಿ ಸಲ್ಲಿಸದವರು ಕೂಡಲೆ ಸಂಬಂಧಿಸಿದ ತಹಸೀಲ್ದಾರ್ ಕಚೇರಿ ಸಂಪರ್ಕಿಸಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕೆಂದು ಮೈಸೂರು ಉಪವಿಭಾಗಾಧಿಕಾರಿ ಬಸವರಾಜು ತಿಳಿಸಿದ್ದಾರೆ.
ಈ ಬಾರಿಯಾದರೂ ಹತ್ವಾಳ್ ಗ್ರಾಮದ ಬೀಳು ಭೂಮಿಯ ಗೋಳು ಬಗೆಹರಿಯುವುದೇ ಕಾದು ನೋಡಬೇಕಿದೆ.

  ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.