ಗಿರಿಜನರ ವಿರುದ್ಧ ಸಚಿವರ ಆಕ್ರೋಶಕ್ಕೆ ಖಂಡನೆ
ಹುಣಸೂರು: ಗಿರಿಜನರಿಗೆ ಕಾಡಿನಲ್ಲಿ ಮೂಲ ಸೌಲಭ್ಯ ಕಲ್ಪಿಸುವ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರು ಆಕ್ರೋಶ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದು ಡೀಡ್ ಸಂಸ್ಥೆ ಮತ್ತು ಗಿರಿಜನ ಕ್ರಿಯಾ ಕೂಟ ತಿಳಿಸಿದೆ.
ಎಚ್.ಡಿ. ಕೋಟೆ ತಾಲೂಕು ಡಿ.ಬಿ. ಕುಪ್ಪೆ ಹಾಡಿಯಲ್ಲಿ ಜನಸಂಪರ್ಕ ಸಭೆ ನಡೆಸಿ, ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದ ಭರವಸೆ ನೀಡಿರುವುದು ಹೆಮ್ಮೆಯ ವಿಷಯ. ಆದರೆ ಗಿರಿಜನರೊಬ್ಬರು ಕಾಡಿನಲ್ಲಿಯೇ ಜಮೀನು ನೀಡಬೇಕು ಮತ್ತು ಮೂಲ ಸೌಲಭ್ಯ ಕಲ್ಪಿಸಬೇಕು ಎಂಬ ಮನವಿಗೆ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಸರಿಯಲ್ಲ. ಅಲ್ಲದೆ ಕಾಡಿನಲ್ಲಿ ಸರ್ಕಾರಿ ಸೌಲಭ್ಯ ಕೊಡಲಾಗದು ಎಂಬ ಹೇಳಿಕೆ ಅರಣ್ಯ ಹಕ್ಕು ಕಾಯಿದೆಗೆ ವಿರೋಧವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಬಡವರ ಪರ ನಿಲುವು ತಾಳುವ ಸಚಿವರ ಈ ರೀತಿಯ ವರ್ತನೆ ಸರಿಯಲ್ಲ. ವನ್ಯಜೀವಿ ಮತ್ತು ಆದಿವಾಸಿಗಳು ಅದೆಷ್ಟೋ ಶತಮಾನಗಳಿಂದ ಅರಣ್ಯದಲ್ಲಿ ಜೀವಿಸಿರುವ ಇತಿಹಾಸ ನಮ್ಮ ಮುಂದಿದೆ. ಇದನ್ನು ಅರ್ಥಮಾಡಿಕೊಂಡು ಯಾವ ಮುಲಾಜಿಗೂ ಒಳಗಾಗದೆ ಅರಣ್ಯ ಹಕ್ಕು ಕಾಯ್ದೆಯನ್ನು ತಾವು ಅನುಷ್ಠಾನಗೊಳಿಸಬೇಕು. ಆದಿವಾಸಿಗಳ ಪಾರಂಪರಿಕ ಮತ್ತು ಪಿತ್ರಾರ್ಜಿತವಾಗಿ ಬಂದ ಅರಣ್ಯ ಹಕ್ಕಿಗೆ ಹಕ್ಕುಪತ್ರ ನೀಡಿ, ನಾಗರಿಕ ಸೌಲಭ್ಯ ಒದಗಿಸಬೇಕು ಎಂದು ಸಂಸ್ಥೆಯ ಶ್ರೀಕಾಂತ್ ಒತ್ತಾಯಿಸಿದ್ದಾರೆ.
ಅಂತೆಯೇ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಆದಿವಾಸಿಗಳು ಹಾಗೂ ವನ್ಯಜೀವಿಗಳ ಆಹಾರ ಸುರಕ್ಷತೆ, ಕುಡಿಯುವ ನೀರಿನ ಅನುಕೂಲಗಳು, ಕಾಡಿನ ಸಮೃದ್ಧಿಯ ಬಗ್ಗೆ ಅಧ್ಯಯನ ನಡೆಸಲು ಕೂಡಲೆ ಸಮಿತಿ ರಚಿಸಬೇಕು ಎಂದು ಗಿರಿಜನ ಕ್ರಿಯಾ ಕೂಟ ಮತ್ತು ರಾಜ್ಯ ಮೂಲನಿವಾಸಿ ವೇದಿಕೆ ಒತ್ತಾಯಿಸಿದೆ.
ಪಿರಿಯಾಪಟ್ಟಣ ತಾಲೂಕಿನ ವರ್ತಿ ಮತ್ತು ಹಳೆಕೆರೆ ಹಾಡಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಎ ಮತ್ತು ಬಿ ನಮೂನೆಗಳನ್ನು ಅರಣ್ಯ ಭೂಮಿ ಹಕ್ಕಿಗಾಗಿ ಮತ್ತೆ ತುಂಬಿಕೊಡಬೇಕು ಎಂದು ಒತ್ತಾಯಿಸುತ್ತಿರುವುದಾಗಿ ಹಾಡಿಯ ಜನರು ತಿಳಿಸಿದ್ದಾರೆ. ಈಗಾಗಲೆ ವರ್ತಿ ಮತ್ತು ಹಳೆಕೆರೆಗೆ ತಮಗೆ ತಿಳಿದಂತೆ ಸಾಮೂಹಿಕ ಅರಣ್ಯ ಪತ್ರ ನೀಡಲಾಗಿದೆ. ವೈಯಕ್ತಿಕ ಹಕ್ಕುಪತ್ರವನ್ನು ತಮ್ಮ ಸಮಿತಿಯಿಂದ ನೀಡಬೇಕಷ್ಟೆ. ಈ ಸಂಬಂಧ ಸಾರ್ವಜನಿಕರು ಅರ್ಜಿ ಸಲ್ಲಿಸಿ ಮೂರು ವರ್ಷವೆ ಕಳೆದಿದೆ. ಈಗ ಮತ್ತೆ ಅರ್ಜಿ ಸಲ್ಲಿಸಿ ಎಂದು ಕೇಳುತ್ತಿರುವುದು ಸರಿಯಲ್ಲ ಎಂದು ಡೀಡ್ ಸಂಸ್ಥೆಯ ಶ್ರೀಕಾಂತ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

