ಮೈಸೂರು

ಬೀದಿಗೆ ಬಿದ್ದ 530 ವೃತ್ತಿ ಶಿಕ್ಷಣ ಉಪನ್ಯಾಸಕರು

Published On :

ಮೈಸೂರು: ಪದವಿಪೂರ್ವ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ವೃತ್ತಿ ಶಿಕ್ಷಣ (ಜೆಒಸಿ- ಜಾಬ್ ಓರಿಯೆಂಟೆಂಡ್ ಕೋರ್ಸ್) ಉಪನ್ಯಾಸಕರ ಕಾಯಂ ಮಾಡುವಾಗ ಆದ ಲೋಪದಿಂದಾಗಿ 530 ಮಂದಿ ಬೀದಿಪಾಲಾಗಿದ್ದಾರೆ.
ಪಪೂ ಶಿಕ್ಷಣ ಇಲಾಖೆ ಅಡಿಯಲ್ಲಿ ಪಿಯುಸಿಗೆ ಸರಿಸಮನಾದ ಜೆಒಸಿಯನ್ನು 1977 ರಿಂದಲೂ ನಡೆಸಿಕೊಂಡು ಬರಲಾಗುತ್ತಿತ್ತು.  
ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ 531 ಸಂಸ್ಥೆಗಳಲ್ಲಿ ಈ ಕೋರ್ಸ್ ನಡೆಯುತ್ತಿತ್ತು. ಸಾವಿರಾರು ವಿದ್ಯಾರ್ಥಿಗಳು ಪ್ರವೇಶ ಪಡೆದು, ಕೋರ್ಸ್ ಪೂರೈಸಿ, ತಮ್ಮ ಜೀವನಕ್ಕೆ ದಾರಿ ಕಂಡುಕೊಳ್ಳುತ್ತಿದ್ದರು. ಎಸ್ಸೆಸ್ಸೆಲ್ಸಿ ನಂತರದ ಎರಡು ವರ್ಷಗಳ ಕೋರ್ಸ್ ಇದಾಗಿತ್ತು. ಜೆಒಸಿ ಮಾಡಿದವರು ಡಿ.ಇಡಿ ಮತ್ತಿತರ ತರಬೇತಿಗೂ ಪ್ರವೇಶ ಪಡೆಯಬಹುದಿತ್ತು. ಯುವಕರಲ್ಲಿ ಸ್ವಉದ್ಯೋಗ ಆಸಕ್ತಿ ಮೂಡಿಸಲು ಆರಂಭಿಸಿದ ಈ ಕೋರ್ಸ್‌ನಿಂದ ಆ ಉದ್ದೇಶ ಈಡೇರುತ್ತಿಲ್ಲ. ಬದಲಿಗೆ ಇದು ಕೂಡ ಮತ್ತೊಂದು ಶೈಕ್ಷಣಿಕ ಕೋರ್ಸ್ ಎಂಬಂತೆ ಆಗಿತ್ತು. ಈ ಹಿನ್ನೆಲೆಯಲ್ಲಿ ಜೆಒಸಿಯನ್ನು ಬಂದ್ ಮಾಡುವ ನಿರ್ಧಾರಕ್ಕೆ ಸರ್ಕಾರ ಬಂತು.
ಕಾಯಂಗೆ ತೀರ್ಮಾನ: ಆದರೆ ಅಲ್ಲಿ ಆರಂಭದಿಂದಲೂ ಕೆಲಸ ಮಾಡುತ್ತಿರುವ 3,746 ಅರೆಕಾಲಿಕ ನೌಕರರನ್ನು ಬೀದಿಪಾಲು ಮಾಡಬಾರದು ಎಂಬ ಉದ್ದೇಶದಿಂದಲೇ ಹಿಂದಿನ ಸರ್ಕಾರ 2010ರ ನ.18 ರಂದು ನಡೆಸಿದ ಸಚಿವ ಸಂಪುಟದಲ್ಲಿ ಕಾಯಂ ಮಾಡಲು ತೀರ್ಮಾನಿಸಿತು. 2011ರ ಮಾ.8 ರಂದು ನಡೆದ ಸಂಪುಟ ಸಭೆಯಲ್ಲಿಯೂ ಇದೇ ತೀರ್ಮಾನ ಕೈಗೊಳ್ಳಲಾಯಿತು. ಆದರೆ ಅದೇ ವರ್ಷದ ಮಾ.17 ರಂದು ವಿಧಾನಮಂಡಲದಲ್ಲಿ ಮಂಡಿಸಿದ ವಿಶೇಷ ವಿಧೇಯಕದಲ್ಲಿ 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿರುವ 3,216 ಸಿಬ್ಬಂದಿಯನ್ನು ಮಾತ್ರ ಕಾಯಂ ಮಾಡುವುದಾಗಿ ಹೇಳಲಾಯಿತು. ಇದಕ್ಕೆ ಅದೇ ವರ್ಷದ ಏ.6 ರಂದು ರಾಜ್ಯಪಾಲರ ಅಧಿಕೃತ ಮುದ್ರೆಯೂ ಸಹ ಸಿಕ್ಕಿ, ಕರ್ನಾಟಕ ರಾಜ್ಯಪತ್ರದಲ್ಲಿಯೂ ಸಹ ಪ್ರಕಟವಾಯಿತು.
ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿದ್ದು ಎಲ್ಲಾ 3,746 ಸಿಬ್ಬಂದಿಯ ಕಾಯಂ ನಿರ್ಧಾರ. ಆದರೆ ವಿಧೇಯಕ ಮಂಡನೆ ವೇಳೆಗೆ ಐದು ವರ್ಷ ಪೂರೈಸಿದ ಷರತ್ತು ವಿಧಿಸಿದ್ದರಿಂದ 3,216 ಮಂದಿಗೆ ಅವಕಾಶವಾಗಿ, 530 ಮಂದಿ ಕಾಯಂ ಭಾಗ್ಯದಿಂದ ವಂಚಿತರಾದರು. 5 ವರ್ಷ ಪೂರೈಸಲು ಒಂದು ವಾರವಿದ್ದವರನ್ನು ಕೂಡ ಕರ್ತವ್ಯದಿಂದ ಬಿಡುಗಡೆ ಮಾಡಲಾಯಿತು. ಈ ರೀತಿ ಬಿಡುಗಡೆ ಆದರಲ್ಲಿ ಬಹುತೇಕ ಮಂದಿ 2 ರಿಂದ ಸುಮಾರು 5 ವರ್ಷದ ಸೇವಾನುಭವ ಹೊಂದಿದ್ದಾರೆ. ವೃತ್ತಿ ಶಿಕ್ಷಣ ಕೋರ್ಸ್‌ಗಳನ್ನು ಸರ್ಕಾರವೇ ಮುಚ್ಚಿದೆ. ಅಲ್ಲದೇ ಈ ನಿರ್ಧಾರಕ್ಕೂ ಮುನ್ನ ಎಲ್ಲಾ ನೌಕರರನ್ನು ಕಾಯಂ ಮಾಡುವುದಾಗಿ ಹೇಳಿ, ಎರಡು ಬಾರಿ ಸಚಿವ ಸಂಪುಟದಲ್ಲಿ ಅದೇ ನಿರ್ಣಯ ಕೈಗೊಂಡು, ನಂತರ 530 ಮಂದಿಯನ್ನು ಹೊರಗಿಟ್ಟಿದ್ದು ಸರಿಯಲ್ಲ ಎಂಬುದು ಪಪೂ ಶಿಕ್ಷಣ ಇಲಾಖೆಯ ಜೆಒಸಿ ಉಪನ್ಯಾಸಕರ ಮತ್ತು ಬೋಧಕೇತರರ ವೇದಿಕೆಯ ಕೆ.ಆರ್. ಮಂಜುನಾಥ್ ಹಾಗೂ ವಿಶ್ವನಾಥಶೆಟ್ಟಿ ಅವರ ವಾದ.ನೌಕರಿ ನಂಬಿ ವಿವಾಹ: ಬಹುತೇಕ ಮಂದಿ ಇದೇ ನೌಕರಿ ನಂಬಿ ವಿವಾಹವಾಗಿದ್ದಾರೆ, ಪತ್ನಿ, ಮಕ್ಕಳನ್ನು ಸಾಕಬೇಕಾದ ಹೊಣೆಗಾರಿಕೆ ಇದೆ. ಅಲ್ಲದೇ ವಯೋವುತಿ ಮೀರಿರುವುದರಿಂದ ಬೇರೆಡೆಯೂ ಉದ್ಯೋಗ ಸಿಗುತ್ತಿಲ್ಲ. ಆದ್ದರಿಂದ ನಮಗೂ ಸೇವಾಭದ್ರತೆ ನೀಡಿ, ವಿವಿಧ ಇಲಾಖೆಗಳಲ್ಲಿ ವಿಲೀನಗೊಳಿಸಬೇಕು ಎಂಬುದು ಅವರ ಮನವಿ.
ಈ ಸಂಬಂಧ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಎರಡು ಬಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ಬಾರಿ ಮನವಿಪತ್ರ ಸಲ್ಲಿಸಲಾಗಿದೆ.
 ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬದ್ಧ ಎಂದರೇ, ಮುಖ್ಯಮಂತ್ರಿಗಳು, ಪರಿಶೀಲಿಸುವ ಭರವಸೆ ನೀಡಿ ತಿಂಗಳುಗಳೇ ಉರುಳಿವೆ.

ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.