ಮೈಸೂರು

ಐಟಿಐ ಸೆಮಿಸ್ಟರ್ ಪದ್ಧತಿ ಖಂಡಿಸಿ ಧರಣಿ

Published On :

ಮೈಸೂರು: ಐಟಿಐ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪದ್ಧತಿ ಜಾರಿಗೊಳಿಸಿರುವುದನ್ನು ವಿರೋಧಿಸಿ ಎಐಡಿವೈಒ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.
ಐಟಿಐ ಕಾಲೇಜುಗಳಲ್ಲಿ ಈ ಸಾಲಿನಿಂದಲೇ ರಾಜ್ಯ ಸರ್ಕಾರ ಸೆಮಿಸ್ಟರ್ ಪದ್ಧತಿ ಜಾರಿಗೊಳಿಸಲು ಹೊರಟಿರುವುದು ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ. ಈ ಪದ್ಧತಿ ಜಾರಿಯಾದರೆ ವಿದ್ಯಾರ್ಥಿಗಳು ತರಬೇತಿ ಬದಲು ಪರೀಕ್ಷೆಗೆ ಸಿದ್ಧವಾಗಬೇಕಾಗುತ್ತದೆ. ಇದರಿಂದ ಗುಣಮಟ್ಟದ ತರಬೇತಿ ಪಡೆಯಲು ಆಗುವುದಿಲ್ಲ ಎಂದು ಆರೋಪಿಸಿದರು.
ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಅವೈಜ್ಞಾನಿಕ ಸೆಮಿಸ್ಟರ್ ಪದ್ಧತಿ ಕೈಬಿಡಬೇಕು. ಈಗಾಗಲೇ ಜಾರಿಯಲ್ಲಿರುವ ತರಬೇತಿ ಕೊನೆಯಲ್ಲಿ ಪರೀಕ್ಷೆ ನಡೆಸುವ ಪದ್ಧತಿಯನ್ನು ಮುಂದುವರಿಸಬೇಕು ಎಂದು ಅವರು ಒತ್ತಾಯಿಸಿದರು.
ವಿವಿಧ ಐಟಿಐ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ, ಐಟಿಐ ಸೆಮಿಸ್ಟರ್ ಪದ್ಧತಿ ವಿರೋಧಿಸಿ ನಗರದ ಕೆಲವು ಐಟಿಐ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದರು. ಎಐಡಿವೈಒ ಮುಖಂಡರಾದ ಸುಮ, ಟಿ.ಆರ್. ಸುನಿಲ್ ನೇತೃತ್ವ ವಹಿಸಿದ್ದರು.
ಅಂಗವಿಕಲರ ಪಾಸ್ ನವೀಕರಣಕ್ಕೆ ಸೂಚನೆ
ಮೈಸೂರು: ಅಂಗವಿಕಲರ ರಿಯಾಯಿತಿ ಪಾಸುಗಳ ನವೀಕರಣಕ್ಕೆ ಸಾರಿಗೆ ಸಂಸ್ಥೆಯು ಶಿಬಿರ ಆಯೋಜಿಸಿದೆ.
ಅಂಗವಿಕಲರಿಗೆ ನೀಡಲಾದ ರಿಯಾಯಿತಿ ದರದ ಬಸ್ ಅವಧಿ ಕಳೆದ ಡಿ.31ಕ್ಕೆ ಅಂತ್ಯಗೊಂಡಿದೆ. ಈ ಪಾಸ್‌ನಲ್ಲಿ ಫೆ.28 ರವರೆಗೆ ಪ್ರಯಾಣಿಸಲು ಅವಕಾಶ ನೀಡಲಾಗಿದ್ದು, ಅಷ್ಟರೊಳಗೆ ಪಾಸ್ ನವೀಕರಿಸಿಕೊಳ್ಳಬಹುದು. ಇತ್ತೀಚಿನ 2 ಭಾವಚಿತ್ರ, 2013ನೇ ಸಾಲಿನ ಪಾಸು, 660 ನಗದು ನೀಡಿ 2014ನೇ ಸಾಲಿನ ಪಾಸ್ ಪಡೆಯಬಹುದು.
ಜ.16 ಮತ್ತು 17 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಹುಣಸೂರು ಬಸ್ ನಿಲ್ದಾಣ, ಜ.18 ಮತ್ತು 20 ರಂದು ಪಿರಿಯಾಪಟ್ಟಣ ಬಸ್ ನಿಲ್ದಾಣ, ಜ.21 ಮತ್ತು 22 ರಂದು ಎಚ್.ಡಿ. ಕೋಟೆ ಬಸ್ ನಿಲ್ದಾಣ, ಟಿ. ನರಸೀಪುರದವರು ಜ.23 ರಂದು ಮೈಸೂರು ಕೇಂದ್ರೀಯಬಸ್ ನಿಲ್ದಾಣದಲ್ಲಿ ಮತ್ತು ಜ.24 ಮತ್ತು 25 ರಂದು ಕೆ.ಆರ್. ನಗರ ಬಸ್ ನಿಲ್ದಾಣದಲ್ಲಿ ಪಾಸ್ ನವೀಕರಿಸಲಾಗುತ್ತದೆ ಎಂದು ಗ್ರಾಮಾಂತರ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
40 ಶಿಕ್ಷಕರಿಗೆ ಮುಖ್ಯಶಿಕ್ಷಕರಾಗಿ ಬಡ್ತಿ
ಮೈಸೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 40 ಮಂದಿಯನ್ನು ಸಹ ಶಿಕ್ಷಕ ಸ್ಥಾನದಿಂದ ಮುಖ್ಯಶಿಕ್ಷಕ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ.
ಈ ಸಂಬಂಧ ಇತ್ತೀಚೆಗೆ ನಗರದ ಎನ್‌ಟಿಎಂ ಶಾಲೆಯಲ್ಲಿ ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸೆಲಿಂಗ್‌ನಲ್ಲಿ ಬಡ್ತಿ ನೀಡಲಾಯಿತು. ಶಿಕ್ಷಕರ ಜಿಲ್ಲಾ ಸಂಘದ ಅಧ್ಯಕ್ಷ ಬಸವರಾಜು, ಮುಖ್ಯಶಿಕ್ಷಕರು, ಪದವೀಧರೇತರ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಜೆ.ಜವರೇಗೌಡ, ಬಿಇಒಗಳು, ಉಪನಿರ್ದೇಶಕರ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.
ಈ ಕೌನ್ಸೆಲಿಂಗ್‌ನಲ್ಲಿ 151 ಖಾಲಿ ಹುದ್ದೆಗಳಿಗಾಗಿ ಜಿಲ್ಲಾ ಸಹಶಿಕ್ಷಕರ ಜೇಷ್ಠತಾ ಪಟ್ಟಿಯಲ್ಲಿನ 148 ಸಹಶಿಕ್ಷಕರನ್ನು ಕೌನ್ಸೆಲಿಂಗ್‌ಗಾಗಿ ಕರೆಯಲಾಗಿತ್ತು. ಅವರಲ್ಲಿ 40 ಸಹಶಿಕ್ಷಕರು ಮುಖ್ಯಶಿಕ್ಷಕರ ಹುದ್ದೆಗೆ ಸ್ಥಳ ಆಯ್ಕೆ ಮಾಡಿಕೊಂಡರು. 107 ಶಿಕ್ಷಕರು ಬಡ್ತಿ ನಿರಾಕರಿಸಿದ್ದು, ಒಬ್ಬ ಶಿಕ್ಷಕರು ಗೈರುಹಾಜರಾಗಿದ್ದರು ಎಂದು ಡಿಡಿಪಿಐ ಎಚ್.ಆರ್. ಬಸಪ್ಪ ತಿಳಿಸಿದ್ದಾರೆ.
ಕೊಲೆಗೆ ಸುಪಾರಿ: ಮೂವರ ಬಂಧನ
ಮೈಸೂರು: ಐಸ್ ಕ್ರೀಂ ವ್ಯಾಪಾರಿ ಕೊಲೆ ಮಾಡಲು ಸಂಚು ನಡೆಸಿದ್ದ ಮೂವರು ಆರೋಪಿಗಳನ್ನು ಕೆ.ಆರ್. ಉಪ ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿ ಮಂಗಳವಾರ ಬಂಧಿಸಿದ್ದಾರೆ. ಮೈಸೂರಿನ ಕುಮಾರ್, ರಫೀಕ್ ಮತ್ತು ಅಯೂಬ್ ಬಂಧಿತ ಆರೋಪಿಗಳು. ರಿಯಲ್ ಎಸ್ಟೇಟ್‌ನಲ್ಲಿ ತೊಡಗಿರುವ ಕುಮಾರ್ ಎಂಬಾತನು ಐಸ್ ಕ್ರೀಂ ವ್ಯಾಪಾರಿಯ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಹೀಗಾಗಿ ಆತನನ್ನು ಕೊಲೆ ಮಾಡಲು ಸಂಚು ರೂಪಿಸಿ, ಬಲ್ಲಾ ಎಂಬಾತನಿಗೆ ಸುಪಾರಿ ನೀಡಿದ್ದ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಲ್ಲಾ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮೊದಲ ಸಂಚು ಕೈಕೊಟ್ಟ ಬಳಿಕ ರಫೀಕ್ ಮತ್ತು ಅಯೂಬ್ ಎಂಬವರಿಗೆ ಐಸ್ ಕ್ರೀಂ ವ್ಯಾಪಾರಿಯನ್ನು ಕೊಲೆ ಮಾಡಲು ಕುಮಾರ್ 6 ಲಕ್ಷ ಸುಪಾರಿ ನೀಡಿ, 20,000 ಮುಂಗಡವಾಗಿ ಹಣ ನೀಡಿದ್ದ. ಕುವೆಂಪುನಗರ ಠಾಣೆ ವ್ಯಾಪ್ತಿಯಲ್ಲಿ ಐಸ್ ಕ್ರೀಂ ವ್ಯಾಪಾರಿಯನ್ನು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದ ರಫೀಕ್ ಮತ್ತು ಅಯೂಬ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ನೀಡಿದ ಮಾಹಿತಿ ಮೇರೆಗೆ ಸುಪಾರಿ ನೀಡಿದ್ದ ಕುಮಾರ್‌ನನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕೆ.ಆರ್. ಉಪ ವಿಭಾಗದ ಎಸಿಪಿ ಬಿ.ಟಿ. ಕವಿತಾ ತಿಳಿಸಿದ್ದಾರೆ.
ಅಪರಿಚಿತ ಮಹಿಳೆ ಸಾವು
ಮೈಸೂರು: ಶ್ರೀರಂಗಪಟ್ಟಣ- ನಾಗೇನಹಳ್ಳಿ ರೈಲು ನಿಲ್ದಾಣಗಳ ಮಧ್ಯೆ ರೈಲಿಗೆ ಸಿಕ್ಕಿ ಅಪರಿಚಿತ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಚಹರೆ- 65 ವರ್ಷ, 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ತಲೆಯಲ್ಲಿ 7 ಇಂಚು ಉದ್ದದ ಬಿಳಿ ಕೂದಲು, ಬಲಗೈಯಲ್ಲಿ ಹೂವಿನಾಕಾರದ ಹಚ್ಚೆ ಗುರುತಿದೆ. ಬಲಗಾಲಿನಲ್ಲಿ ಹಸಿರು ದಾರ ಕಟ್ಟಿರುತ್ತಾರೆ. ಮೃತರ ದೇಹವನ್ನು ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ವಾರಸುದಾರರು ಇದ್ದಲ್ಲಿ ದೂ.0821- 2516579 ಸಂಪರ್ಕಿಸಲು ಮೈಸೂರು ರೇಲ್ವೆ ಠಾಣೆ ಪೊಲೀಸರು ಕೋರಿದ್ದಾರೆ.
ಇಂದು ನಗರಕ್ಕೆ ನೀರು  ವ್ಯತ್ಯಯ
ಮೈಸೂರು: ನಗರಕ್ಕೆ ನೀರು ಸರಬರಾಜು ಮಾಡುವ ಕಬಿನಿ     ಮೂಲಸ್ಥಾವರದ ಪಂಪಿಂಗ್ ಸ್ಪೇಷನ್‌ನಲ್ಲಿ ತುರ್ತು ಕಾರ್ಯ ಹಮ್ಮಿಕೊಳ್ಳುವುದರಿಂದ ಜ.8ರ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಾಣಿವಿಲಾಸ ನೀರು ಸರಬರಾಜು ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಕೋರಿದ್ದಾರೆ. ಪ್ರದೇಶಗಳು- ಪಾಲಿಕೆ ವಾರ್ಡ್‌ಗಳಾದ 2 ರಿಂದ 9, 11 ರಿಂದ 18 ಹಾಗೂ 20.
ಇಂದು ಪ್ರತಿಭಟನೆ
ಕೇಂದ್ರ ಸರ್ಕಾರವು ಸಬ್ಸಿಡಿರಹಿತ ಅಡುಗೆ ಅನಿಲ ದರ ಹೆಚ್ಚಿಸಿರುವುದನ್ನು ವಿರೋಧಿಸಿ ನಗರ ಬಿಜೆಪಿ ಮಹಿಳಾ ಮೋರ್ಚಾದಿಂದ ಜ.8ರ ಬೆಳಗ್ಗೆ 10.30ಕ್ಕೆ ಕೆ.ಆರ್. ಕ್ಷೇತ್ರದ ಆರ್‌ಟಿಒ ವೃತ್ತ, ಬೆಳಗ್ಗೆ 11.30ಕ್ಕೆ ಎನ್.ಆರ್. ಕ್ಷೇತ್ರದ ಎಫ್‌ಟಿಎಸ್ ವೃತ್ತ ಹಾಗೂ ಮಧ್ಯಾಹ್ನ 12.30ಕ್ಕೆ ಗಾಂಧಿ ಚೌಕದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಟಿ.ಎನ್. ಶಾಂತ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.