ನಾಳೆ ಸದ್ಗುರು ತಾತಾರ ಗಣಾರಾಧನೆ
ನಂಜನಗೂಡು: ತಾಲೂಕಿನ ಹುಲ್ಲಹಳ್ಳಿ ಸಮೀಪದ ಶ್ರೀ ಸಂಗಮ ಕ್ಷೇತ್ರದಲ್ಲಿ ಜ.11ರಂದು ಸಂತ ಶ್ರೀ ಸದ್ಗುರು ಮಹದೇವ ತಾತಾ ಅವರ 26ನೇ ವಾರ್ಷಿಕ ಪ್ರಥಮ ಗಣಾರಾಧನೆ ಹಮ್ಮಿಕೊಳ್ಳಲಾಗಿದೆ.
ಪ್ರಾತಃಕಾಲ ಶ್ರೀ ತಾತರವರ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮತ್ತು ಮಹಾ ಮಂಗಳಾರತಿಯೊಂದಿಗೆ ಪೂಜಾ ಕಾರ್ಯಕ್ರಮಗಳು ಆರಂಭವಾಗಲಿವೆ. ಬೆಳಗ್ಗೆ 7.30ಕ್ಕೆ ಪಡಗೂರು ಅಡವಿ ಮಠಾಧ್ಯಕ್ಷ ಶಿವಲಿಂಗೇಂದ್ರ ಮಹಾಸ್ವಾಮೀಜಿಯವರ ಪಾದಪೂಜೆ ನೆರವೇರಲಿದ್ದು, ನಂತರ ಸದ್ಗುರು ಮಹದೇವ ತಾತ ಅವರ ರಥೋತ್ಸವವೂ ಜರುಗಲಿದೆ.
ಮಹದೇವ ತಾತ ಅವರ ಮಂಗಳ ಮಂಟಪವನ್ನು ಭಕ್ತಾದಿಗಳ ಅನುಕೂಲಕ್ಕಾಗಿ ನಿರ್ಮಿಸುತ್ತಿದ್ದು, ಮಂಟಪದ ನಿರ್ಮಾಣ ಕಾರ್ಯಕ್ಕೆ 5001 ನೀಡಿದವರ ಹೆಸರನ್ನು ನಾಮಫಲಕದಲ್ಲಿ ಹಾಕಲಾಗುವುದು ಮತ್ತು 50,001 ನೀಡಿದಲ್ಲಿ ಅವರ ಭಾವಚಿತ್ರವನ್ನು ಮಂಗಳ ಮಂಟಪದಲ್ಲಿ ಶಾಶ್ವತವಾಗಿ ಅನಾವರಣ ಮಾಡಲಾಗುತ್ತದೆ ಎಂದು ಕ್ಷೇತ್ರದ ಭಕ್ತ ಮಂಡಳಿ ತಿಳಿಸಿದೆ.
ಭಕ್ತಾದಿಗಳ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ವತಿಯಿಂದ ನಂಜನಗೂಡು ಹುಲ್ಲಹಳ್ಳಿ ಮಾರ್ಗ ಶ್ರೀ ಸಂಗಮಕ್ಕೆ ಮತ್ತು ಹಂಪಾಪುರದಿಂದ ಹುಲ್ಲಹಳ್ಳಿಗೆ ಬಸ್ ಸೌಕರ್ಯ ಏರ್ಪಡಿಸಿದೆ. ಜ.10 ರ ಶುಕ್ರವಾರ ರಾತ್ರಿ ಗ್ರಾಮಾಂತರ ಪ್ರದೇಶದ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಏರ್ಪಡಿಸಿದೆ.
ಪರಿಸರ ಜಾಗೃತಿಗೆ ವಿದ್ಯಾರ್ಥಿಗಳಿಗೆ ಚಿತ್ರಸ್ಪರ್ಧೆ
ಹುಣಸೂರು: ಪುರಸಭೆ ವತಿಯಿಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಘನ ತ್ಯಾಜ್ಯ ವಸ್ತುಗಳ ವ್ಯವಸ್ಥೆ ಹಾಗೂ ನಿರ್ವಹಣೆ ಯೋಜನೆಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಪರಿಸರ ಕುರಿತಾದ ತಮ್ಮದೇ ಕಲ್ಪನೆಗಳನ್ನು ಬಣ್ಣ ಬಣ್ಣದ ಚಿತ್ತಾರಗಳ ಮೂಲಕ ತೆರೆದಿಟ್ಟರು.ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಸರ ಎಂಜಿನಿಯರ್ ರವಿಕುಮಾರ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನದಂತೆ ಭವಿಷ್ಯದ ಪ್ರಜೆಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಎಲ್ಲ ನಗರಗಳಲ್ಲೂ ಇಂದು ಬಹುದೊಡ್ಡ ಸಮಸ್ಯೆಯಾಗಿರುವ ಪ್ಲಾಸ್ಟಿಕ್ ಬಳಕೆ, ಘನ ತ್ಯಾಜ್ಯಗಳ ವಿಲೇವಾರಿ ಕುರಿತಂತೆ ಅರಿವು ಮೂಡಿಸಲು ಸ್ಪರ್ಧೆಗಳ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು. ಪುರಸಭಾ ಸದಸ್ಯ ಸತೀಶ್ಕುಮಾರ್ ಮಾತನಾಡಿದರು. 20ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು, ಆರೋಗ್ಯ ಸಹಾಯಕರಾದ ಸತೀಶ್, ಮೋಹನ್ ಇದ್ದರು.
ಆಧುನಿಕ ಮಾದರಿ ದೇವಾಲಯ ನಿರ್ಮಾಣ
ಕೆ.ಆರ್. ನಗರ: ಕಾಮೇಶ್ವರಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ವತಿಯಿಂದ ಬಡ ಕುಟುಂಬದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ಒದಗಿಸುವುದರ ಜತೆಗೆ ಶೀಘ್ರದಲ್ಲಿಯೇ ಆಧುನಿಕ ಮಾದರಿಯ ದೇವಾಲಯ ನಿರ್ಮಾಣ ಮಾಡಲಾಗುವುದು ಎಂದು ಸಮಿತಿಯ ಗೌರವಾಧ್ಯಕ್ಷ ಎಂ. ತಮ್ಮಣ್ಣ ಹೇಳಿದರು.
ತಾಲೂಕಿನ ಅರಕೆರೆಕೊಪ್ಪಲು ಗ್ರಾಮದ ಕಾಮೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಕಾಮೇಶ್ವರಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ಹೊರ ತಂದಿರುವ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಈಗಾಗಲೇ ದೇವಾಲಯ ನಿರ್ಮಾಣಕ್ಕೆ ಬೇಕಾದ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿರುವ ಹಿನ್ನೆಲೆ ಕೆಲವೇ ದಿನಗಳಲ್ಲಿ ದೇವಾಲಯ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದರು.
ದೊಡ್ಡೆಕೊಪ್ಪಲು ಗ್ರಾಪಂ ಅಧ್ಯಕ್ಷ ಬಿ.ಎಂ. ಗಿರೀಶ್, ಕೆ.ಮಹದೇವಯ್ಯ, ಪಿ. ಮಂಜುನಾಥ್, ರವಿಚಂದ್ರ, ಚೌಕಹಳ್ಳಿ ಶಿವ, ಕೆ.ರಾಮಚಂದ್ರ, ಸ್ವಾಮಿ, ಮಹೇಶ್, ಸೋಮಶೇಖರ್ ಇದ್ದರು.
ಎತ್ತಿನಗಾಡಿ ಓಟದ ಸ್ಪರ್ಧೆ: ಅಶೋಕ್ ಪ್ರಥಮ
ಟಿ. ನರಸೀಪುರ: ಪಟ್ಟಣದ ಹಳೇ ತಿರುಮಕೂಡಲಿನಲ್ಲಿ ನಡೆದ ರಾಜ್ಯಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಕುರುಬರ ಬೀದಿಯ ಅಶೋಕ್ ಪ್ರಥಮ ಬಹುಮಾನ ಪಡೆದರು. ಚಿಕ್ಕಮಗಳೂರು ಮೈಲಾರ (ದ್ವಿತೀಯ), ಪಿರಿಯಾಪಟ್ಟಣದ ಶಿವಕುಮಾರ್ (ತೃತೀಯ), ಚಿಕ್ಕಮಗಳೂರು ಜಗದೀಶ್ (ನಾಲ್ಕನೇ), ನರಸೀಪುರದ ಕರಿಯಪ್ಪ (ಐದನೇ) ಬಹುಮಾನ ಪಡೆದರು. ಶ್ರೀ ಚೌಡೇಶ್ವರಿ ಯುವಕರ ಸೇವಾ ಸಮಿತಿ ವತಿಯಿಂದ ಎರಡನೇ ವರ್ಷದ ರಾಜ್ಯಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದರು. ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ತಾಯೂರು ವಿಠ್ಠಲಮೂರ್ತಿ, ಉದ್ಯಮಿ ಲಿಂಗರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೆ.ವಜ್ರೇಗೌಡ, ತಾಪಂ ಮಾಜಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನಸ್ವಾಮಿ, ಎ.ಜೆ. ವೆಂಕಟೇಶ್ ವಿಜೇತರಿಗೆ ಬಹುಮಾನ ವಿತರಿಸಿದರು.
ವಾಲ್ಮೀಕಿ ಸಮುದಾಯ ಸಮಾವೇಶ
ನರಸೀಪುರ: ವಾಲ್ಮೀಕಿ ನಾಯಕ ಸಮುದಾಯದ ರಾಜ್ಯಮಟ್ಟದ ಬೃಹತ್ ಸಮಾವೇಶ ಜ.11ರ ಬೆಳಗ್ಗೆ 11ಕ್ಕೆ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ತಾ. ನಾಯಕ ಸಂಘದ ಅಧ್ಯಕ್ಷ ಹೊನ್ನನಾಯಕ ಹೇಳಿದರು. ನಾಯಕ ಸಮುದಾಯಕ್ಕೆ ಪ.ಪಂಗಡ ಮೀಸಲಿನಡಿ ನೀಡುತ್ತಿರುವ ಶೇ.3ರ ಮಿತಿಯನ್ನು ಶೇ. 7ಕ್ಕೆ ಏರಿಕೆ ಮಾಡಬೇಕು. ನಾಯಕ ಉಪ ಪಂಗಡಗಳಾದ ಪರಿವಾರ, ತಳವಾರ, ಬೆಸ್ತ ಹಾಗೂ ಬೇಡ ಸಮುದಾಯವನ್ನು ಪ. ಪಂಗಡ ಮಾನ್ಯತೆ ನೀಡಬೇಕು ಎಂಬುದು ಸೇರಿದಂತೆ ವಿವಿಧ ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ಸಮಸ್ತ ನಾಯಕ ಸಮುದಾಯದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು. ತಾಲೂಕಿನಿಂದಲೂ ಸಹಸ್ರ ಸಂಖ್ಯೆಯಲ್ಲಿ ಸಮುದಾಯದ ಜನರು ಚಿತ್ರದುರ್ಗಕ್ಕೆ ತೆರಳಲಿದ್ದಾರೆ. ನಾಯಕ ಸಮುದಾಯದ ಬೃಹತ್ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಬಂಧುಗಳು ಭಾಗವಹಿಸಬೇಕು ಎಂದು ನಾಯಕ ಸಂಘದ ಅಧ್ಯಕ್ಷ ಹೊನ್ನನಾಯ್ಕ ಹಾಗೂ ಪ್ರಧಾನ ಕಾರ್ಯದರ್ಶಿ ನಾಗರಾಜು ಕೋರಿದ್ದಾರೆ.
ಅಕ್ರಮ ಮರಳು ಸರ್ಕಾರಕ್ಕೆ ನಷ್ಟ
ಟಿ. ನರಸೀಪುರ: ಮರಳು ನೀತಿಯ ನಿಯಮ ಹಾಗೂ ನಿಬಂಧನೆಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ತಾಲೂಕಿನಲ್ಲಿ ನಡೆದಿರುವ ಅಕ್ರಮ ದಂಧೆಯಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರು. ಗಳಷ್ಟು ನಷ್ಟ ಉಂಟಾಗಿದೆ ಎಂದು ವರುಣ ಬಿಜೆಪಿ ಮಾಜಿ ಉಪಾಧ್ಯಕ್ಷ ಅಂದಾನಿಗೌಡ ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಬ್ಬರು ಪ್ರತಿನಿಧಿಸುವ ತಾಲೂಕಿನಲ್ಲಿ ಸರ್ಕಾರಕ್ಕೆ ಕೋಟಿ ಕೋಟಿ ಆದಾಯ ಖೋತಾ ಆಗುವ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ನಡೆಯುತ್ತಿದ್ದರೂ, ಅಕ್ರಮ ತಡೆಗಟ್ಟಬೇಕಾದ ಅಧಿಕಾರಿಗಳು ಮರಳು ಮಾಫಿಯಾಕ್ಕೆ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು. ಹಿಂದಿನ ಬಿಜೆಪಿ ಸರ್ಕಾರ 2011ರಲ್ಲಿ ಮರಳು ಗಣಿಗಾರಿಕೆಯಲ್ಲಿ ನೂತನ ನೀತಿ ಜಾರಿಗೆ ತಂದಿತು. ವರ್ಷದ ಅವಧಿಗೆ ಸೀಮಿತಗೊಳಿಸಿ, ಲೋಡ್ ಮರಳಿಗೆ 3,050 ನಿಗದಿ ಮಾಡಲಾಗಿತ್ತು. ನರಸೀಪುರ ಮತ್ತು ನಂಜನಗೂಡಿನಲ್ಲಿ 20 ಕಡೆಗಳಲ್ಲಿ ಯಾರ್ಡುಗಳನ್ನು ಗುರುತಿಸಲಾಗಿತ್ತು. ತಾಲೂಕಿನ ಕಾವೇರಿ ನದಿ ಪಾತ್ರದಲ್ಲಿ ನಾಲ್ಕು ಕಡೆ ಗಣಿಗಾರಿಕೆಗೆ ಅನುಮತಿ ನೀಡಲಾಗಿತ್ತು. ಎರಡು ಕಡೆಗಳಲ್ಲಿ ಮರಳಿನ ಅಭಾವ, ಆಳದ ನೆಪವೊಡ್ಡಿ ಮರಳು ಗಣಿಗಾರಿಕೆ ಆರಂಭಿಸಲಿಲ್ಲ ಎಂದು ತಿಳಿಸಿದರು.
ಸದಸ್ಯರ ಪುನರ್ನೇಮಕ ಮಾಡಲು ಸಾರ್ವಜನಿಕರ ಒತ್ತಾಯ
ಎಚ್.ಡಿ. ಕೋಟೆ: ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಸಮಿತಿಗೆ ಈಗಿರುವ ಸದಸ್ಯರ ನೇಮಕವನ್ನು ಅನೂರ್ಜಿತಗೊಳಿಸಿ ಪುನರ್ ನೇಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು. ಮಂಗಳವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಶಾಸಕ ಎಸ್. ಚಿಕ್ಕಮಾದು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಗೆ ಶಾಸಕರು, ಜಿಲ್ಲಾಧಿಕಾರಿ ಸೇರಿದಂತೆ 3 ಸದಸ್ಯರು ಇರಬೇಕೆಂಬ ನಿಯಮವಿದೆ. ಅದರಂತೆ ಚಾ.ನಂಜುಂಡಮೂರ್ತಿ, ಎಂ.ಸಿ.ದೊಡ್ಡನಾಯಕ ಹಾಗೂ ಗೋಪಾಲಸ್ವಾಮಿ ಅವರನ್ನು ನೇಮಿಸಿರುವುದು ಸಮಂಜಸವಲ್ಲ. ಹೊಸದಾಗಿ ಸಮಾಜದವರ ಅಭಿಪ್ರಾಯ ಪಡೆದು ಪುನರ್ ನೇಮಿಸುವಂತೆ ಆಗ್ರಹಿಸಲಾಯಿತು. ಕಡ್ಡಾಯವಾಗಿ ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಹಾಜರಾಗಿ ತಮ್ಮ ಇಲಾಖೆ ಮಾಹಿತಿಯನ್ನು ಸಭೆಗೆ ತಿಳಿಸಬೇಕು. ತಿಳಿಸದ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಎಚ್.ಸಿ. ನರಸಿಂಹಮೂರ್ತಿ ಆಗ್ರಹಿಸಿದರು. ತಹಸೀಲ್ದಾರ್ ಕೃಷ್ಣ ಮಾತನಾಡಿ, ತಮ್ಮೆಲ್ಲ ಆಹವಾಲುಗಳನ್ನು ಸ್ವೀಕರಿಸಿದ್ದು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತಾಪಂ ಅಧ್ಯಕ್ಷೆ ಪುಟ್ಟಮ್ಮ, ರವಿಕುಮಾರ್, ಜಿಪಂ ಸದಸ್ಯ ಎಚ್.ಸಿ. ಮಂಜುನಾಥ್, ಪಪಂ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ಬಿಂಧ್ಯಾ, ಮುಖಂಡರಾದ ಎಂ.ಸಿ. ದೊಡ್ಡನಾಯಕ, ತಾಪಂ ಸದಸ್ಯ ಗೋಪಾಲಸ್ವಾಮಿ, ದಸಂಸ ಸಂಚಾಲ ಬೆಟ್ಟಯ್ಯ ಕೋಟೆ, ದೊಡ್ಡಸಿದ್ದು, ಪರಶಿವಮೂರ್ತಿ, ಕ್ಯಾತನಹಳ್ಳಿ ನಾಗರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

