ಸಿಎಫ್ಟಿಆರ್ಐ ನಿರ್ದೇಶಕರಿಗೆ ಮಸಿ ಬಳಿವ ಯತ್ನ
ಮೈಸೂರು: ಸಿಎಫ್ಟಿಆರ್ ನಿರ್ದೇಶಕ ಪ್ರೊ.ರಾಮ್ ರಾಜಶೇಖರನ್ ಅವರು ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಗುರುವಾರ ಮಸಿ ಎರಚಿ ಪ್ರತಿಭಟಿಸಿದರು.
ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಬಂದಿದ್ದ ಅವರಿಗೆ, ಕೆಲವು ಕಾರ್ಯಕರ್ತರು ಧಿಕ್ಕಾರ ಕೂಗಿ ಮಸಿ ಬಳಿಯಲು ಯತ್ನಿಸಿದರು. ಆ ಸಂದರ್ಭದಲ್ಲಿ ಸಂಘಟಕರು ಹಾಗೂ ಪೊಲೀಸರು ಮಧ್ಯೆ ಪ್ರವೇಶಿಸಿ ಅಹಿತಕರ ಘಟನೆ ನಡೆಯದಂತೆ ತಡೆದರು.
ಈ ಸಂದರ್ಭದಲ್ಲಿ ಕಾರ್ಯಕರ್ತರು ಎರಚಿದ ಕಪ್ಪು ಮಸಿಯು ಕಾರ್ಯಕ್ರಮದ ಕೆಲವು ಸಂಘಟಕರಿಗೆ ಬೀಳುವಂತಾಯಿತು. ಕಾರ್ಯಕ್ರಮ ಉದ್ಘಾಟಿಸಲು ಆಗಮಿಸಿದ್ದ ರಾಮ್ ರಾಜಶೇಖರನ್ ಅವರು ಸಮಾರಂಭದಲ್ಲಿ ಭಾಗವಹಿಸಿದರೆ ಮತ್ತಷ್ಟು ಗಲಾಟೆ ಆಗಬಹುದು ಎಂಬ ಕಾರಣಕ್ಕೆ ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಪ್ರೊ.ಬಿ.ಎಸ್. ವಿಶ್ವನಾಥ್ ಅದೇ ಕಾರಿನಲ್ಲಿ ವಾಪಸ್ ಕಳುಹಿಸಿಕೊಟ್ಟರು.
ಸಭಾಂಗಣದ ಹೊರಗೆ ಗದ್ದಲ ಕೇಳಿಬಂದ ಕಾರಣ ಹೊರಬಂದ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮತ್ತಿತರ ಅತಿಥಿಗಳು ಹಾಗೂ ಪತ್ರಕರ್ತರು ಹೊರಬರುವ ವೇಳೆಗೆ ಪ್ರತಿಭಟನಾಕಾರರು ಅಲ್ಲಿಂದ ಕಾಲ್ಕಿತ್ತಿದ್ದರು.
ಬಂಧಿಸಿ: ಈ ರೀತಿ ಘಟನೆ ನಡೆಸಿದ್ದು ಖಂಡನೀಯ. ಅಂತಾರಾಷ್ಟ್ರಿಯ ವಿಚಾರ ಸಂಕಿರಣ ನಡೆಸುವ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ರಂಗಪ್ಪ ಹೇಳಿದರು.
ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆಯುತ್ತಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಬೆಳಗ್ಗೆ 10ರ ವೇಳೆಗೆ ಆಗಮಿಸಿದ್ದ ಸಿಎಫ್ಟಿಆರ್ಐ ನಿರ್ದೇಶಕ ರಾಮ್ ರಾಜಶೇಖರನ್ ಕಾರು ಅಡ್ಡಗಟ್ಟಿದ ಸುಮಾರು 20 ಮಂದಿ ಕಾರ್ಯಕರ್ತರು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕಪ್ಪು ಮಸಿ ಎರಚಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದ್ದು, ಈಗಾಗಲೇ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಎ.ಎನ್. ರಾಜಣ್ಣ ತಿಳಿಸಿದರು.
ಹಿನ್ನೆಲೆ ಏನು?: ಸಿಎಫ್ಟಿಆರ್ಐ ಕನ್ನಡ ಸಹೃದಯ ಬಳಗವು ಈ ಬಾರಿಯ ರಾಜ್ಯೋತ್ಸವ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿತ್ತು. ಇದಕ್ಕೆ ಸಿಎಫ್ಟಿಆರ್ಐನಲ್ಲಿ ಸಭಾಂಗಣ ನೀಡಲು ಪ್ರೊ.ರಾಮ್ ರಾಜಶೇಖರನ್ ನಿರಾಕರಿಸಿದ್ದರು. ಹೀಗಾಗಿ ರಂಗಾಯಣದ ವನರಂಗದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಈ ವಿಷಯ ತಿಳಿದು, ಅಂದೇ ಕನ್ನಡಪರ ಸಂಘಟನೆಗಳ ಮುಖಂಡರು, ರಂಗಾಯಣ ನಿರ್ದೇಶಕರು ಪ್ರೊ.ರಾಮ್ ರಾಜಶೇಖರನ್ ವಿರುದ್ಧ ಧಿಕ್ಕಾರ ಕೂಗಿ, ಕನ್ನಡಿಗರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದರು.
'ನಾನು ಕನ್ನಡ ವಿರೋಧಿಯಲ್ಲ'
ಎಂದಿಗೂ ನಾನು ಕನ್ನಡ ವಿರೋಧಿಯಲ್ಲ ಎಂದು ಸಿಎಫ್ಟಿಆರ್ಐ ನಿರ್ದೇಶಕ ರಾಮ್ ರಾಜಶೇಖರನ್ ಸ್ಪಷ್ಟನೆ ನೀಡಿದರು.
ಗುರುವಾರ ನಡೆದ ಘಟನೆ ಬಳಿಕ ಸಿಎಫ್ಟಿಆರ್ಐನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 6 ವರ್ಷಗಳ ಕಾಲ ವಿದ್ಯಾರ್ಥಿಯಾಗಿದ್ದೆ. 18 ವರ್ಷಗಳ ಕಾಲ ಅಲ್ಲಿನ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ್ದೇನೆ. ನನ್ನ ಬೆಳವಣಿಗೆಗೆ ಕನ್ನಡದ ನೆಲ ಕಾರಣ. ಕರ್ನಾಟಕದಲ್ಲಿ ವಿಜ್ಞಾನ ಕ್ಷೇತ್ರದಲ್ಲಿನ ಸೇವೆಗಾಗಿ ಸ್ಥಾಪಿಸಿರುವ ಅತಿಹೆಚ್ಚು ಪ್ರಶಸ್ತಿಯನ್ನು ನಾನು ಗಳಿಸಿದ್ದೇನೆ ಎಂದು ಅವರು ತಿಳಿಸಿದರು.
ಲಕ್ನೋದಲ್ಲಿ ಸೇವೆ ಸಲ್ಲಿಸಿದ ನಂತರ ಮೈಸೂರಿಗೆ ಬಂದಿದ್ದೇನೆ. ಕನ್ನಡ ಮಾತನಾಡಲು ಬಾರದಿದ್ದರೂ ನನಗೆ ಭಾಷೆ ಅರ್ಥವಾಗಲಿದೆ. ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಆಹಾರ ಸಮಾವೇಶದಲ್ಲಿ ಎಲ್ಲಾ ನಾಮಫಲಕಗಳಲ್ಲಿಯೂ ಕನ್ನಡಕ್ಕೆ ಮಾನ್ಯತೆ ನೀಡಲಾಯಿತು. ಆದರೂ ನನ್ನನ್ನು ಕನ್ನಡ ವಿರೋಧಿ ಎಂದು ಆರೋಪಿಸುತ್ತಿರುವುದು ಹಾಗೂ ಮಸಿ ಎರಚಿದ್ದು ದಿಗ್ಭ್ರಮೆ ಹಾಗೂ ಬೇಸರವನ್ನು ತಂದಿದೆ ಎಂದರು.
ಕೆಲವು ನೌಕರರು ತಮ್ಮ ಕರ್ತವ್ಯವನ್ನು ನಿರ್ವಹಿಸದೆ, ಕಚೇರಿಯಲ್ಲಿ ಹಾಜರಾತಿ ಹಾಕಿ, ಬೇರೊಂದು ವ್ಯವಹಾರಗಳಲ್ಲಿ ತೊಡಗಿದ್ದರು. ಇಂಥವರ ಮೇಲೆ ಕ್ರಮ ವಹಿಸಿದ ಕಾರಣ ಈ ರೀತಿ ಆರೋಪ ಹೊರಿಸಲಾಗುತ್ತಿದೆ. ಸಂಸ್ಥೆ ನಿರ್ದೇಶಕನಾಗಿ ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆಯೇ ಹೊರತು ಬೇರೆ ಉದ್ದೇಶ ಹೊಂದಿಲ್ಲ ಎಂದು ತಿಳಿಸಿದರು.
ಸಂಸ್ಥೆ ಭದ್ರತೆ ಉದ್ದೇಶದಿಂದ ಹೊರಗಿನವರ ಪ್ರವೇಶವನ್ನು ತಡೆಗಟ್ಟಲು ಕನ್ನಡಹಬ್ಬ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಿಲ್ಲ. ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ ಎನ್ನುವುದಿಲ್ಲ. ಆಂತರಿಕವಾಗಿ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಿಸಿದ ಉದ್ಯೋಗಿಗಳೊಂದಿಗೆ ಚರ್ಚಿಸಲಾಗುವವುದು ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

